Wednesday, June 15, 2011

ವಧು

ಹೆಣ್ಣೊಂದು ವಧುವಾಗಿ
ಹುಟ್ಟುಮನೆ ತೊರೆದು
ಹೊಸ್ತಿಲಲಿ ನಿಂತು
ಹಿಂತಿರುಗಿ ನೋಡಲು,

ಹುಟ್ಟಿದಾ ಮನೆಯದು,
ಅತ್ತಾಗ ತಾಯಿ
ಕೊಟ್ಟಾಗ ಮುತ್ತನ್ನು,
ಮೂಗೆಳೆದು ಸುಮ್ಮನಾದ
ದಿನವದನು ಮರೆಯುವಳೆ

ಸೋದರನು ಜಡೆ ಹಿಡಿದು
ರೇಗಿಸಿ ಕಾಡಿಸಿ
ಓಡಿಯಾಡಿಸಿದ ಕ್ಷಣಗಳದು
ರೆಪ್ಪೆಯಲಿ ಭದ್ರ

ಒಲ್ಲೆಂದರೂ ತಂದೆ
ಪಾಠ ಕಲಿಸಿ
ಅಕ್ಷರ ತಿದ್ದಿದ ದಿನಗಳವು
ಎಲ್ಲಕಿಂತ ಮೇಲು

ಜತನದಿ ಒಂದೊಂದೆ
ತನ್ನ ವಸ್ತುಗಳನು ಕೂಡಿಸಿ
ಗಂಡನೊಡೆ ಕಳೆವ 
ಮಧುಚಂದ್ರದಾ 
ಕನಸ ಕಾಣುತ
ವಧುವಾಗುವ ದಿನ
ಹತ್ತಿರಕೆ ಬರಲು

ಎಷ್ಟು ನೆನಪಿಸಿಕೊಂಡರೂ
ಉಳಿವುದಿನ್ನೂ
ಎಷ್ಟು ಜತನ ಮಾಡಿದರೂ
ಮರೆವುದಿನ್ನೂ

ಗಡಿಬಿಡಿಯ ದಿನಗಳವು 
ಹೇಗೆ ಉರುಳಿತೆಂದೇ
ತಿಳಿಯದ ಸಮಯ
ತಂದೇಬಿಟ್ಟಿತು
ಓಲಗದ ದಿನವನ್ನು;
ಹೊಸ ಮನೆಗೆ ಹೋಗುವ
ಕಾತರವನ್ನು.

ಎಲ್ಲ ನೆನಪಾಗಿಂದು
ತನ್ನವರ ತೊರೆದು
ತನ್ನವನಿಗಾಗಿ
ಮರೆತೆಲ್ಲವನು
ಬಿಕ್ಕಿ ಹೊರಟಿಹಳು
ಹೊಸ ಹಾದಿಗೆ,
ಹೊಸ ಬಾಳಿಗೆ,
ಹೊಸ ಮಾಡಿಗೆ..

Friday, June 3, 2011

ಲೇರಿಯೊಂಕ

ಕೀನ್ಯಾದ ಮಾಸಯಿ ಜನಾಂಗದ ಹುಡುಗನಾದ ಲೇರಿಯೊಂಕನ ಶಾಲೆಗೆ ಹೋಗುವ ಕಥೆಯನ್ನೊಳಗೊಂಡಿರುವ ಈ ಪುಸ್ತಕ 1950-1963ರ ನಡುವೆ ಚಿತ್ರಿಸಲಾಗಿದೆ. ಲೇರಿಯೊಂಕ ತನ್ನ ಎಲ್ಲ ಹಿರಿಯರ ವಿರೋಧದ ನಡುವೆಯೂ ತಾನು ವಿದ್ಯೆ ಕಲಿಯುತ್ತಾನೆ. ಸಂಪ್ರದಾಯಸ್ಥ, ನಂಬಿಕೆ ಹಾಗೂ ಮೂಢನಂಬಿಕೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಜಾಗತೀಕರಣವನ್ನ ವಿರೋಧಿಸುವ ಮನಸ್ಥಿತಿಯನ್ನು ಸಮಗ್ರವಾಗಿ ಚಿತ್ರಿಸಿರುವ ಜೊತೆಗೆ ಮಾಸಯಿ ಸಂಪ್ರದಾಯ ಅನಾವರಣಗೊಂಡಿದೆ.

{ ಪ್ರಮುಖವಾಗಿ ಜಾನುವಾರುಗಳನ್ನು ಅವಲಂಬಿಸಿ ಬದುಕೋ ಜನಾಂಗ, ಮಾಸಯಿ ಬುಡಕಟ್ಟು ಜನಾಂಗ. ಅಂತರ್ಜಾಲದಲ್ಲಿ ಈ ಬುಡಕಟ್ಟು ಜನಾಂಗದ ಬಗ್ಗೆ ಹುಡುಕ್ತಾ, ಒಂದು ವಿಚಿತ್ರ ಮಾಹಿತಿ ಸಿಕ್ತು. ಮಾಸಯಿ ಜನರು ಮುಖಂಡರ ಶವವಲ್ಲದೆ ಬೇರೆಯವರ ಶವವನ್ನು ಹೂಳೋದೂ ಇಲ್ಲ, ಸುಡೋದೂ ಇಲ್ಲ. ಬದಲಿಗೆ, ಶವವನ್ನು ಪ್ರಾಣಿಗಳು ತಿನ್ನದಿದ್ದರೆ ಊರಿಗೆ ಕೇಡು ಅಂತ ನಂಬೋ ಈ ಜನ, ಶವದ ಮೇಲೆ ಹಸುವಿನ ರಕ್ತ, ಕೊಬ್ಬನ್ನು ಚೆಲ್ಲಿ, ಕಾಡಿನಲ್ಲಿ ಎಸೆಯುತ್ತಾರೆ. ಹೀಗೆ ಮಾಡಿದರೆ, ಪ್ರಾಣಿಗಳು ತಪ್ಪದೇ  ಶವದೆಡೆ ಆಕರ್ಷಿತವಾಗುತ್ತವೆ ಅಂತ. ಶವಸಂಸ್ಕಾರ ಮಣ್ಣಿನಲ್ಲಿ ಮಾಡಿದರೆ, ಮಣ್ಣು ಹಾಳಾಗುತ್ತದೆ ಅನ್ನೋದು ಇವರ ನಂಬಿಕೆ.}

ಕಥೆ ಬರಿಯ ಕಥೆಯಾಗಿ ಉಳಿಯದೆ, ಓದುಗನ ಕಲ್ಪನೆಗೆ ಬಣ್ಣ ಕಟ್ಟಿಕೊಡುತ್ತದೆ. ಲೇರಿಯೊಂಕನ ಓದು ಮುಗಿಯುವ ಹೊತ್ತಿಗೆ ಕೀನ್ಯಾದ ಸ್ವಾತಂತ್ರ್ಯ ಹೋರಾಟ ಉಚ್ಛ್ರಾಯ ಸ್ಥಿತಿಯಲ್ಲಿರುತ್ತದೆ. ಅಧಿಕಾರಿಗಳಿಂದ ಒತ್ತಾಯಿಸಿಕೊಳ್ಳದೆ ಶಾಲೆಗೆ ತಿರುಗಿ ಬಂದ ಒಬ್ಬನೇ ಮಾಸಯಿ ವಿದ್ಯಾರ್ಥಿ ಲೇರಿಯೊಂಕ ಓದಿನ ನಂತರ ಕೆಲಸವಿಲ್ಲದೇ ಕೆಲಕಾಲ ಪರದಾಡಬೇಕಾಗುತ್ತದೆ. ಈ ಮಧ್ಯ ಒಗ್ಗಟ್ಟಾದ ಕೀನ್ಯಾಕ್ಕೆ ಕೊನೆಗೂ ಸ್ವಾತಂತ್ರ್ಯ ಬರುತ್ತದೆ. ಕೊನೆಗೆ ಲೇರಿಯೊಂಕನ ತಂದೆ "ನಾವು ಮುದುಕರು ಕೊಡಬಹುದಾದ ಒಂದೇ ಒಂದು ಸಲಹೆ ಅಂದರೆ ನಮ್ಮನ್ನು ನಿಧಾನವಾಗಿ ಕರೆದುಕೊಂಡು ಹೋಗಿ. ಅವಸರ ಮಾಡಬೇಡಿ. ಏಕೆಂದರೆ ಇದೆಲ್ಲಾ ನಮಗೆ ಹೊಸತು" ಎನ್ನುವಲ್ಲಿ ಅಭಿವೃದ್ಧಿ ತೆರೆ ತೆರೆಯಾಗಿ ಹೊನಲು ಬರಲಿ ಅನ್ನುವ ಆಶಯ ವ್ಯಕ್ತವಾಗುವುದು ಮನಸ್ಸಿಗೆ ನಾಟುತ್ತದೆ.


(ಪ್ರಶಾಂತ್ ಬೀಚಿಯವರು ಬರೆದಿರೋ (ಮೂಲ: ಹೆನ್ರಿ ಆರ್. ಓಲೆ ಕುಲೆಟ್) ಈ ಪುಸ್ತಕ ನನ್ನ ನೆಚ್ಚಿನ ವಸುಧೇಂದ್ರ, ಪ್ರೊ. ಗಣೇಶಯ್ಯ ರವರ ಪುಸ್ತಕಗಳನ್ನ ಅಚ್ಚು ಮಾಡಿದ ಛಂದ ಪ್ರಕಾಶನದಿಂದ ಹೊರಬಂದಿದೆ..)

Friday, May 27, 2011

ಸ್ಮೃತಿಪಟಲದಿ ಮಾಸಿಹೋಗುವ ಮುನ್ನ..

ಮೊನ್ನೆ ನನ್ನ ತಾಯಿಯ ಮನೆಗೆ ಬೈಕಿನಲ್ಲಿ ಒಬ್ಬಳೇ ಹೋಗಿದ್ದೆ. ನಮ್ಮ ಮದುವೆಯ ವೀಡಿಯೋ ಕೊಟ್ಟು ಬರಲಿಕ್ಕೆ. ಮೈಸೂರು ರೋಡಿನ ಸಿಗ್ನಲ್ಲು  ಎಂದಿನಂತೆಯೇ ಅರ್ಧ ಕಿಲೋಮೀಟರು ಹೊಗೆ ಬಿಡ್ತಾ ಗಾಡಿಗಳನ್ನ ಕಲೆಹಾಕಿ ಹಾರ್ನ್ ಹೊಡೆಸ್ತಾ ಸಮಯ ತಿನ್ತಿತ್ತು. ಅಲ್ಲಿ ಯಾವಾಗಿನ ಹಾಗೆಯೇ ಒಂದಿಬ್ಬರು ಮಕ್ಕಳು ದೂರದಲ್ಲಿ ಇನ್ನೊಂದು ಮಗುವಿನೊಡನೆ ಇರೋ ಹೆಣ್ಣುಮಗಳ ಜೊತೆ ಭಿಕ್ಷೆ ಬೇಡ್ತಾ ಸಿಗ್ನಲ್ ಎಷ್ಟು ನಿಧಾನವಾದ್ರೆ ಅಷ್ಟು ಒಳ್ಳೆಯದು ಅನ್ನೋ ಮುಖ ಹೊತ್ತು ನಿಂತಿದ್ದರು. ನನ್ನ ಮುಂದೆ ಒಂದು ಕಪ್ಪು ಡಿಯೋ ಗಾಡಿ ನಿಂತಿತ್ತು. ಒಂದು ೩-೪ ವರ್ಷದ ಹುಡುಗಿ ಬಂದು ಬೈಕ್ ಸವಾರನ ಹತ್ತಿರ "ಕಾಸು ಕೊಡಿ ಅಣ್ಣ.. ಹೊಟ್ಟೆ ಹಸೀತಾ ಇದೆ ಅಣ್ಣಾ.." ಅಂತ ರಾಗ ಮಾಡ್ತು. ಆ ಹುಡುಗ, ಬಹುಶಃ ಈಗ ತಾನೇ ಕಾಲೇಜ್ ಮೆಟ್ಟಿಲು ಹತ್ತಿರಬಹುದು, ಜೇಬುಗಳನ್ನೆಲ್ಲ ತಡಕಾಡಿ, "ಚೇಂಜ್ ಇಲ್ವಲ್ಲಮ್ಮಾ.. ಇರು ಒಂದ್ ನಿಮಿಷ", ಅಂತ ತನ್ನ ಬ್ಯಾಗ್ ತೆಗೆದು, ಹೊಸದೆರಡು ರೆನಾಲ್ದ್ಸ್ ಪೆನ್ನುಗಳನ್ನ ಕೊಟ್ಟು, "ಇದನ್ನ ತಗೋತಿಯ ಅಲ್ವಾ?" ಅಂದ.. ಆ ಮಗುವಿಗೆ ಪೆನ್ನು ಸಿಕ್ಕಿದ್ದಕ್ಕೆ ಖುಷಿಯೋ ಖುಷಿ. "ಹೂ.." "ಕೊಡಿ" ಅಂತ ತಗೊಳ್ತು ಅವನ್ನ. ಅಲ್ಲಿ  ದೂರದಲ್ಲಿ ಪುಟ್ಟ ಮಗುವಿನೊಂದಿಗೆ ಇದ್ದ ಹೆಣ್ಣುಮಗಳು ತಕ್ಷಣ "ತಗೋ ತಾಯಿ. ಆ ಮಗಾ ಇಸ್ಕೂಲಿಗೋಗ್ತೈತೆ ಕಣಪ್ಪಾ" ಅಂತ ಹುಡುಗನಿಗೆ ಕೈ ಮುಗೀತು. ಅಷ್ಟು ಹೊತ್ತಿಗೆ ಸಿಗ್ನಲ್ ಹಸಿರಾಗಿ, ಆ ೫೦೨ ರಿಜಿಸ್ಟ್ರೇಶನ್ ನ ಬೈಕ್ ಕೂಡ ಧೂಳಿನ ಜೊತೆ ಮರೆಯಾಗಿ ಹೋಯ್ತು.
ನಾವೆಲ್ಲಾ ಮಾಡೋ ಹಾಗೆ ಸುಮ್ಮನೆ ಒಂದು ಕನಿಕರದ ನೋಟ ಬೀರಿ ಸುಮ್ಮನಾಗಬಹುದಿತ್ತು ಆ ಹುಡುಗನೂ. ಅಥವಾ ಚಿಲ್ಲರೆ ಇಲ್ಲ ಅಂದಾಗ ಇನ್ನೇನೂ ಕೊಡದೇ ಹೋಗಬಹುದಿತ್ತು. ಇಲ್ಲವೇ ಕೆಲ ಪಡ್ಡೆ ಹುಡುಗರು ಮಾಡೋ ಹಾಗೆ "ಏನು ನಿನ್ನ ಹೆಸರು? ಎಲ್ಲಿ ಮನೆ? ಸ್ಕೂಲಿಗೆ ಹೋಗು.. ಭಿಕ್ಷೆ ಯಾಕೆ?" ಅಂತ ರೇಗಿಸಿ ಉಚಿತ ಅಡ್ವೈಸ್ ಕೊಟ್ಟು ಬುರ್ರನೆ ಹೋಗಬಹುದಿತ್ತೇನೋ. ಅಷ್ಟಕ್ಕೂ, ಆ ಮಗು ಪೆನ್ನಿನಲ್ಲಿ ಬರೆಯುತ್ತೋ ಅಥವಾ ಯಾವುದಾದರೂ ಗೂಡಂಗಡಿಗೆ ಮಾರಿಬಿಡುತ್ತಾಳೋ ಅದರ ತಾಯಿ ಅಂದುಕೊಳ್ಳಬಹುದು ನಾವು... 

ಆ ಹುಡುಗ ಇದೇನೂ ಮಾಡದೇ ಕೈಲಾದದ್ದನ್ನ ಕೊಟ್ಟು ಮಾಡಿದ ಒಳ್ಳೆ ಕೆಲಸ ಒಂದೇ..
ಆ ಮಗುವಿನ ಮುಖದಲ್ಲಿ ಗಾಡಿ ದೂರವಾದಮೇಲೂ ಉಳಿದ್ದಿದ್ದ ನಗು ಮತ್ತು ಎರಡೂ ಕೈಯಲ್ಲಿ ಪೆನ್ನುಗಳನ್ನು ಬಾಚಿ ಹಿಡಿದ "ನಂದಿದು.." ಅನ್ನೋ ಭಾವ ಅಷ್ಟೇನೆ..

Wednesday, May 18, 2011

ಜಡ ರಾತ್ರಿ

ಮಲಗುವಾ ಮುನ್ನ ಕಣ್ ತೂಗಿ ಬಂದಿತ್ತು
ಆದರೀಗ ರೆಪ್ಪೆ ಕೂಡದೇಕೋ..
ಶಕುನ ಲೊಚಗುಟ್ಟಿ ಹಲ್ಲಿ ಕಿವಿಮಾತನ್ನು
ಹೇಳಿತ್ತು ಇನಿಯನಿರದಿರೆ ಹೀಗೆಯೇ..

ಆಗೀಗ ಬಂದಿತ್ತು ಮಳೆಯೆನ್ನಲು
ಗುಡುಗು ಸಂದೀತು ಸೊಡರೆನ್ನಲು 
ಗಾಳಿ ಬರಿ ತಂಪನ್ನೆ ಸೂಸುತಿರಲು..

ಗಂಧ ಗಾಳಿಯೊಳಿಲ್ಲ- ಪತಿಯ ತೆಕ್ಕೆಯೊಳಿಲ್ಲ;
ದ್ವಾದಶಿಯ ಬೆಳದಿಂಗಳುಂಡ ಚಕೋರಿ
ನೀ ಬರಿ ಒಂಟಿಯೇನೆನ್ನುತಿಹುದು..

Thursday, March 31, 2011

ಕರೆ

ಇನಿಯನ ಕಾಣದೆ ಮನ ಕಾತರಿಸಿರೆ
ಸಂಜೆ ದೀಪವ ಹೀಗೆ ಹೊತ್ತಿಸದಿರೆ
ಇರುಳಿನೊಳು ಬೆಳಕಿಲ್ಲ
ಸಂಜೆಯೊಳು ಸೊಡರಿಲ್ಲ
ಒರತೆಯನಾರೋ ಬತ್ತಲು ಬಿಟ್ಟಿರೆ
ಓ ಕಾಲವೇ ಸಾಕಿನ್ನು!
ಒಲವನೋರೆಹಚ್ಚಿದ ದೂರವ
ನಲ್ಲನ ಸೇರಲಾಗದ ಗಾವುದವ

ಕರೆ ಬಂದಿಹುದು-ಮನದ ಕರೆ ಬಂದಿಹುದು..
ಸೇರಲೋಸುಗ ಎನ್ನ ಪ್ರಾಣವ
ಪ್ರಾಣಕಿಂತ ಪ್ರಾಣವಾದೆನ್ನ ಜೀವವ..

Tuesday, March 15, 2011

ಸೋನೆ ಮಳೆ

ಧರೆಯೆದೆಯ ಬಯಲಲಿ
ಕಾರ್ಮುಗಿಲು ಕರಗಿ ಸುರಿದು,
ಕಾತರಿದ ಭುವಿಯ
ನವಿರಾಗಿ ಸವರಿ,
ಹನಿಯು ಇಳಿಯುತಿಳೆಗೆ-
ಹರಡಿ ನಲಿವ ಮಂದಹಾಸ-
ಎಲ್ಲೆಡೆಯೂ ಪಸರಿತೋ..

ಅದೆಂತು ಜೀವಸಂಕುಲ
ಹಿಡಿದಿಟ್ಟ ಹನಿಗಳವೋ;
ಅದೆಂತು ರಮಣೀಯ
ಜಲಪಾತವಾಗಿಸಿದ ಹನಿಗಳವೋ;
ಭೂಮಿಯಿಂದ ಇಣುಕುವ
ಸಸ್ಯರಾಶಿಯ ಸೊಬಗು
ಅದಾರ ಸ್ವಂತವೋ..

ನಿಚ್ಚಳ ಬಾನನರಸುತ
ನಿಂತ ಸಸ್ಯವೆಂತು ಬಲ್ಲುದೋ
ಜನ್ಮವಿತ್ತ ಕಾರ್ಮುಗಿಲ?
ಬಾಷ್ಪವಿತ್ತ ಮೇಘವ?
ಮೆದುವಾದ ಧರೆಯ?

Thursday, February 24, 2011

ಏಳೆನ್ನ ಮನದನ್ನೆ

ಏಳೆನ್ನ ಮನದನ್ನೆ; ಏಳು ಮುದ್ದಿನ ಕನ್ನೆ;
ಏಳು ಮಂಗಳದಾಯಿ; ಉಷೆಯ ಗೆಳತಿ..
ಏಳು ಮುತ್ತಿನ ಚೆಂಡೆ; ಏಳು ಮಲ್ಲಿಗೆ ದಂಡೆ;
ಏಳು ಬಣ್ಣದ ಬಿಲ್ಲೆ; ಮಾಟಗಾತಿ..

ಏಳೆನ್ನ ಕಲ್ಯಾಣಿ; ಏಳು ಭಾವದ ರಾಣಿ
ನೋಡು ಮೂಡಲದಲ್ಲಿ ರಾಗ ಮಿಲನ,
ಮಗದುದಿಯ ತೋರಣದಿ ಹೊಂಬಿಸಿಲ ಬಾವುಟವು
ಗಾಳಿ ಬಟ್ಟೆಯಲದರ ಚಲನ-ವಲನ

ಮಂಜಿನರಳೆಯ ಹಿಂಜಿ ದೂರುತಿಹ ನೇಸರನು
ಹಿಮಮಣಿಯ ದರ್ಪಣದಿ ತನ್ನ ಕಂಡು,
ಮಿರುಗಿ ಹೊಗರೇರಿಹನು ಏಳೆನ್ನ ಹೊಂಗೆಳತಿ
ಮೊಗದ ಜವನಿಕೆ ತೆರೆದು ನಗೆಯ ನೀಡು

ಲಲಿತ ಶೃಂಗಾರ ರಸಪೂರ್ಣೆ ಚಂದಿರವರ್ಣೆ
ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು
ಒಂದು ಚಣ ಜಗವನ್ನೇ ಮರೆತು ಬಿಡುವೆ

- ಚೆನ್ನವೀರ ಕಣವಿ-

Monday, February 14, 2011

ನಿವೇದನೆ..

ನನ್ನ ಹುಡುಗನ ಒಡನಾಟಕಿಂತ
ಬೇರೇನೂ ಬೇಡವು ಎನಗೆ,
ಇನಿಯನಿಲ್ಲದಿರೆ ಧರೆಯೆಲ್ಲವೂ
ಬರಿಯ ಶೂನ್ಯವು ನನಗೆ..
ಇಹಲೋಕದೈಸಿರಿಯು
ಇನಿಯನೊಡೆ ತೂಗೆ
ಬರಿಯ ತೃಣವದೆನಗೆ..

ನನ್ನಿನಿಯನ ನೆನೆವು
ಹೃದಯದಂಚಲಿ ತುಳುಕಿದಂತೆಲ್ಲ
ಮನದಿ ಪ್ರೇಮದಲರನು
ಅರಳಿಸಿ ಕಂಪನೀವುದು..
ಬಾಡದಂಥ ಪ್ರೀತಿಯದರ
ಪಕಳೆಗಳಲಿ ಮಿನುಗುವುದು...

Monday, January 31, 2011

ಚಲಿಸುವ ಮಣ್ಣಿನ ದಿಣ್ಣೆಗಳು

ಜೀವ ಪೋಪುದು, ಸೇರಲು ಭೂಮವ!
ಯಮ ತಾ ಬಿಡದೆ ಹೊಂಚನೀವನು;

ಮರದ ಮೆರೆಯಾಗಿರಲೇನು
ಮನೆಯ ಕದವಿಕ್ಕಿದೊಡೇನು
ಹೋಪ ಜೀವ ನಂಬಿದವಗೆಲ್ಲ
ನಿರ್ವಂಚನೆಯಿಂ ವಂಚಿಪನು

ರಕುತ ಚೆಲ್ಲಿದರು ಸರಿಯೆ
ದೇಹ ದಹಿಸಿದರು ಸರಿಯೆ
ಅಂತು ಅಂತಗಾಣಿಸಿ ದೇಹಕೆ
ದ್ವೈತವ ಗಾಳಿಗೆ ತೂರಿಪನು

ಜೀವವಿಲ್ಲದೆ ತಡಿಕೆ ದೇಹಕೆ
ಬೆಲೆ ಕೊಂಚವೂ ಇಲ್ಲ ಆ
ಜೀವ ಯಾರ ಜೀವವಾಗಿತ್ತೊ
ಆರ ಸೈರಣೆಗಾರ ಮನ್ನಣೆಗಾರ
ನೆನಹಿಗದು ಪಾತ್ರವಾಗಿತ್ತೊ

ಜೀವವೊಂದೂ ಪರಿಗಣನೆಗೆ
ಮಾತ್ರ ಪಾತ್ರಮಾಗದೆ
ಭೂಗರ್ಭದೊಡಲಾಳದಿಂ
ಸೇರಿ ತಾನೊಂದು ಆತ್ಮ-
ಮಾತ್ರಮಾಗಿ ತಾರೆಗಳಲಿ
ಮಿನುಗಿ ಅನಂತವಾಗಿಹುದು..