Monday, May 14, 2012

ಅಮ್ಮಾ.. ಅಮ್ಮಾ,.. I love you..

ಎಂದಿನ ಅಮ್ಮಾ,

ಮನುಷ್ಯನ ಅಭಿಪ್ರಾಯಗಳು ಯಾವಾಗಲೂ ಸಾಂದರ್ಭಿಕ. ಈ ಕ್ಷಣಕ್ಕೊಂದು ಸತ್ಯವಾದರೆ ಮತ್ತೊಂದು ಕ್ಷಣಕ್ಕೆ ವಿಚಾರದ ಪ್ರಾಮುಖ್ಯತೆ ಬದಲಾಗಿ ಸತ್ಯವೂ ನಂಬುವಷ್ಟರ ಮಟ್ಟಿಗೆ ಮಾರ್ಪಾಟಾಗಿರುತ್ತದೆ. ಹಾಗಾಗೇ ನನ್ನದೊಂದು ದೂರಬಾರದ ದೂರಿದೆ... ನನ್ನ ಅಮ್ಮನ ಮೇಲೆ. ನನ್ನನ್ನು ಏಕಾಗಿ ಹೆಣ್ಣಾಗಿ ಹಡೆದೆ? ಗಂಡು ಮಗುವಾದರೆ ನಾನು ಮದುವೆಯ ನಂತರವೂ ಯಾವಾಗಲೂ ನಿನ್ನೊಡನೆ ಇರಬಹುದಿತ್ತೆ ಎಂಬ ತುಲನೆ ಮಾತ್ರ ನನ್ನನ್ನು ಆಗಾಗ ಕುಟುಕುತ್ತಲೇ ಇದೆ.

ಬಾಲ್ಯದ ನೆನಪುಗಳು ಮುಸುಕಾಗದೆ ಸ್ಮೃತಿಪಟಲದಿ ಸ್ಪಷ್ಟವಾಗಿ ಅಚ್ಚೊತ್ತಿವೆ. ಅಂತರ್ಜಾಲ ಪೂರ್ವದ ಯುಗದಲ್ಲಿ ಸಂಪೂರ್ಣ ನೀನೆ ನನಗೆ ಪ್ರತಿ ಸ್ಪರ್ಧೆಯ ಗುರು. ನಂತರವೂ ನಾನು ಚರ್ಚಾ ಸ್ಪರ್ಧೆಯಲ್ಲಿ ಗೆಲ್ಲುವಾಗಲೆಲ್ಲ ನೀ ಹೇಳಿದ ಎಷ್ಟೋ ಅಂಶಗಳು; ಯಾವುದೋ ಸಂದರ್ಭಗಳು ಆ ಗೆಲುವಿಗೆ ಬೆನ್ನೆಲುಬಾಗಿರುತ್ತಿದ್ದವು. ಡಿಗ್ರಿ ಮುಗಿಯುವವರೆಗೆ ಮನೆಯಲ್ಲಿ ಟೇಪ್ ರೆಕಾರ್ಡರ್ ಇಲ್ಲದಾಗ ನೀ ಕಲಿಸಿದ ಹಾಡುಗಳೇ ನನ್ನ ಸ್ಪರ್ಧೆಗಳಿಗೆ ಮೂಲ. ನಾ ಮಗುವಾಗಿದ್ದಾಗ ನೀ ಹೇಳಿಕೊಡುತ್ತಿದ್ದ "ತಾಯಿ ದೇವರೆಂದು ವೇದ ಬಾಯಿಬಿಟ್ಟು ಹೇಳುತಿಹುದು... ಜನನಿಯಿಂದ ಪಾಠಕಲಿತ ಜನರು ಧನ್ಯರು"- ಈ ಪದ್ಯ ನಿನ್ನ ನೋಡಿಯೇ ರೂಢಿಯಲ್ಲಿ ಬಂದ ಭಾವ ನನಗೆ..ಬದುಕುವುದನ್ನು ಹೇಳಿ ಕೊಟ್ಟು, ಸಂಯಮ ಮೇಳೈಸಿ ಸ್ವಾಭಿಮಾನ ರಕ್ತಗತವಾಗುವಂತೆ ಮಾಡಿ, ಸಿರಿ ನೋಡಿ ಬಾಯ್ ಬಿಡುವ ಪ್ರಪಂಚದೊಳಗೆ, ಅದರ ಮಧ್ಯದಲ್ಲೇ ಇದ್ದು ವ್ಯಕ್ತಿತ್ವದ ಸಿರಿತನದಿಂ ತಲೆ ಎತ್ತಿ ಬಾಳಲು ತೋರಿಸಿದ ನಿನಗೆ ನನ್ನ ಅನಂತ ವಂದನೆ.

ಇಂದಿನ ಅಮ್ಮಾ,

ನಿಜವೇನೆಂದರೆ, ಕಾಲೇಜ್ ದಿನಗಳಲ್ಲಿ ನಾನು ಅತ್ತೆಯಿಲ್ಲದ ಮನೆಗೆ ಮದುವೆ ಮಾಡಿಕೊಡುವಂತೆ ನನ್ನ ಅಮ್ಮನನ್ನ ಕೇಳಿದ್ದೆ. ಆದರೆ ನನ್ನ ವರನಾಗಲೆಂದು ನನ್ನ ಹುಡುಗನಿಗೆ ಸಮ್ಮತಿಸುವಾಗ ನೀವು ನನಗೆ ಸರಳವಾಗಿ, ಪ್ರೀತಿಯಾಗಿ ಕಂಡದ್ದೇ ಮೊದಲ ಕಾರಣ. ನಾನೇನು ಮಾಡಿದರೂ ಅದು ಚೆಂದಾಗಿಯೇ ಕಾಣುವುದಲ್ಲವೇ ನಿಮಗೆ? ನನ್ನಲ್ಲಿ ಇಲ್ಲಿಯವೆರೆಗೂ ಕೊಂಚವಾದರೂ ಅಸಮಾಧಾನ ತೋರಿಲ್ಲ ನೀವು. ನಿಮ್ಮ 'ಸೊಸೆ-ಮುದ್ದಾ'ಗಿರುವ ನಾನು ನಿಮ್ಮ ಪ್ರೀತಿಗೆ ಸದಾ ಅರ್ಹಳಾದರೆ ಅಷ್ಟೇ ಸಾಕು. ಸಾಂಸ್ಕೃತಿಕ ಕಲೆ ಇರಲಿ, ಟೀವಿಯ ಸ್ಪರ್ಧೆಗಳಿರಲಿ, ಓದು ಇರಲಿ, ಎಲ್ಲಕ್ಕೂ ನಿಮ್ಮ ಪ್ರೋತ್ಸಾಹವೇ ನನಗೆ ಬಲ.ಕಾಲಿಡುವ ಮನೆಯೆಲ್ಲಿ ಮುಳ್ಳಿನ ಹಾಸಿಗೆಯಾಗುವುದೋ ಎಂದು ಬಗೆದಿದ್ದ ನನಗೆ ಹೆಜ್ಜೆಯಿತ್ತಲ್ಲೆಲ್ಲ ಹೂ ಹಾಸಿದ, ಹಡೆಯದಿದ್ದರೂ ಅಮ್ಮನಾದ ನನ್ನ ಅತ್ತೆಗೆ, ಅದೆಷ್ಟು ಬಾರಿ ತಪ್ಪು ಮಾಡಿದರೂ, ಮೊದಲ ಬಾರಿ ಕಲಿಸುವ ಸಂಯಮದಿಂದ ಅಡುಗೆ ಹೇಳಿಕೊಡುವ ಈ ಅಮ್ಮನಿಗೆ, ನನ್ನ ಮುದ್ದಿನ ಹುಡುಗನನ್ನು ಕಾಣಿಕೆಯಾಗಿತ್ತವರಿಗೆ, ಈ ಜೀವ ಚಿರಋಣಿ.

Tuesday, May 1, 2012

ಚಣದ ಯುಗವು

ಸಮಯ ಜಗ್ಗಿ ಸರಿಯಲೊಲ್ಲ
ತನ್ನ ಪಟ್ಟು ಸಡಿಲವಿಲ್ಲ 
ಗೋಗರೆದರೂ ಇನಿದನಿಯಲಿ
ಆ ಕರಾರು ಸಡಿಲವಿಲ್ಲ

ಗಂಟೆ ಹಲವು ಸರಿದ ಮೇಲು
ಕೊನೆಯ ಘಳಿಗೆ ಚಲಿಸಲೊಲ್ಲ
ಕಾದ ಮನಕೆ ತಂಪನೀವ
ಚಣವು ಅದುವೆ ಬಾರದೆ

ಇಲ್ಲಿವರೆಗೆ ಕಾದ ಸಮಯ
ನೂರು ಘಳಿಗೆ ಕಳೆದರೂನು
ಕೊನೆಯ ಘಳಿಗೆ ಮನಕೆ ಅದುವೆ
ನೂರು ಘಳಿಗೆ ಭಾಸವು

ಆದರೂನು ಅದರ ಸೊಲ್ಲ
ಕೆಳ್ವರಾರು ಇನಿತು ಮೆಲ್ಲ
ಓಡುತಿರುವ ಕಾಲಕೆ ಲಗಾಮ-
ನೆಂತು ಬಿಗಿಸಲಿ?

ಅಂತು ಕಾದ ಸಮಯ ಬಂತು
ಸೋತ ಮನಕೆ ಒಲವ ಪಾನ
ಇನಿಯ ಬರುತ ಹರುಷ ತಂದ
ಯುಗವದೀಗ ಚಣವದಾಗ-
ಬಾರದೇಕೆ ಎನುತ ಚಿತ್ತ
ನಲಿದು ನಗುತ ಕುಣಿವುದು!!