Saturday, September 20, 2014

ಪ್ಯಾಪಿಯೋನ್ ೩ - ಬಾಜಿ - ಪ್ರದೀಪ್ ಕೆಂಜಿಗೆ

ಅವತ್ತು ತೇಜಸ್ವಿಯವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕೀಟಗಳ ಛಾಯಾಚಿತ್ರ ಪ್ರದರ್ಶನದ ಕೊನೆಯ ದಿನ. "ಪ್ಯಾಪಿಯೋನ್ ೩–ಬಾಜಿ"–ಯ ಬಿಡುಗಡೆ ಕೂಡ. ಅಲ್ಲಿಗೇ ಮುಕ್ತಾಯವೇನೊ ಅಂದುಕೊಂಡಿದ್ದ ಕಥೆಯ ಮೂರನೇ ಭಾಗ ಬರುತ್ತದೆಂದಾಗ ಕುತೂಹಲದಿಂದ ಅವತ್ತೇ ಹೋಗಿ ಕೊಳ್ಳೋಣವೆಂದು ನಮ್ಮೆಜಮಾನರನ್ನು ಪುಸಲಾಯಿಸಿದೆ.. ನಗೆಯ ಉತ್ತರ ಸರಿಯೆಂದು ಸೂಚಿಸಿತು. ಅವತ್ತು ಮರೆಯಲಾಗದ ದಿನ.. ಅದ್ಭುತ ಯಾನ ಬರೆದ, ತೇಜಸ್ವಿಯವರ ಜೊತೆ ಮಿಲೆನಿಯುಂನ ವಿಸ್ಮಯ ಸರಣಿಯನ್ನು ಹೊರತಂದ ಪ್ರದೀಪ್ ಕೆಂಜಿಗೆಯವರನ್ನು ಭೇಟಿ ಮಾಡಿದೆ.

ಜೈಲುಹಕ್ಕಿ ಪ್ಯಾಪಿಯ ಬಿಡುಗಡೆಯ ನಂತರದ ಕಥೆ ಈ ಪುಸ್ತಕ. ಬಿಡುಗಡೆಯ ದಿನ ಕಾಣಲು ಕಾತರಿಸಿದ್ದ ಪ್ಯಾಪಿಯೋನ್ (ಪ್ಯಾಪಿಲ್ಲಾನ್) ಹೊರಬಂದು ಮಕೋಪಿಯಾ ಚಿನ್ನದ ಗಣಿಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಆದರೆ ಅಷ್ಟೇನೂ ಬಿಗಿ ಭದ್ರತೆಯಿಲ್ಲದ ಗಣಿಯ ಚಿನ್ನದ ಗಟ್ಟಿಗಳಿಗೆ ಮಾರುಹೋಗುತ್ತಾನೆ. ಬೆಂಬಿಡದೇ ಕಾಡುವ ಸೇಡಿನ ಕಿಚ್ಚನ್ನಾರಿಸಲು ಸುಲಭ ಲಾಭ ಸಂಪಾದನೆಯ ಮಾರ್ಗ ನಿರಂತರವಾಗಿ ಶೋಧಿಸುತ್ತಾ ಜೂಜುಕೋರರ ಸಂಗಡಿಗನಾಗುತ್ತಾನೆ, ಬ್ಯಾಂಕ್ ದರೋಡೆ, ಚಿನ್ನದಂಗಡಿಯ ಲೂಟಿಯ ಯೋಜನೆಯಲ್ಲಿ ಭಾಗಿಯಾಗುತ್ತಾನೆ.

ನಿಧಿ ಶೋಧಕರ ಜೂಜಿನ ಧಾಂಧಲೆ ಮೈನವಿರೆಳುವಂತಿದೆ. ಗೆದ್ದವನನ್ನು ಕತ್ತಲಲ್ಲಿ ಮುಗಿಸಲು ಕಾದು ಕೂತ ಬಲಿಷ್ಠರು. ಸತ್ತರೆಂದು ಮನೆಯವರೆಗೂ ಸುದ್ದಿ ತಿಳಿಯುವುದೇ ವಾರಗಟ್ಟಲೆ ಆದಮೇಲೆ. ಇನ್ನೆಲ್ಲಿಯ ಪೋಲೀಸು? ಎಲ್ಲೆಲ್ಲಿಯೂ ಸಾಫಲ್ಯ ಕೈಕೊಡುತ್ತದೆ. ಇನ್ನೇನು ರಾಶಿ ಸಂಪತ್ತು ಕೈಸೇರಿತೆನ್ನುವಾಗ ವಿಧಿ ಸೋಲಿನ ಸಂಚು ಹೂಡುತ್ತದೆ. ಭೂಗತ ಚಟುವಟಿಕೆಗಳು ಯಾವುವೂ ಗೆಲ್ಲದೆ ಕೊನೆಗೆ ವೆನಿಜುವಲಾ ಕಂಪನಿಯೊಂದಕ್ಕೆ ತೈಲ ನಿಕ್ಷೇಪ ಶೋಧಕರ ಮುಂದಾಳಾಗುತ್ತಾನೆ. ಅಲ್ಲಿಂದ ಮುಂದೆ ಸತ್ಪ್ರಜೆಯಾಗಿ ಗೌರವಯುತ ಬದುಕು ಕಂಡುಕೊಳ್ಳುತ್ತಾನೆ. ದೇಶದ ಶ್ರೀಮಂತರ ಪಟ್ಟಿಯಲ್ಲಿ ಅವನ ಹೆಸರು ಸೇರಲ್ಪಡುತ್ತದೆ. ಯಾವ ಫ್ರೆಂಚ್ ಸರ್ಕಾರ ಆಜೀವ ನಿಷೇಧ ವಿಧಿಸಿತ್ತೋ ಅದೇ ಸರ್ಕಾರ ಅವನ ಮೇಲಿನ ನಿರ್ಬಂಧ ತೆಗೆದುಹಾಕುತ್ತದೆ.

ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಭರ್ತಿ 37 ವರ್ಷಗಳು ಕಳೆದಿರುತ್ತವೆ. ಪ್ರತಿ ಅಧ್ಯಾಯವೂ ಮುಗಿಯದೆ ವಿರಾಮ ಕೊಡುವುದು ಓದುಗರಿಗೆ ಕಷ್ಟ. ಪ್ರತಿ ಘಟನೆಯೂ ಪ್ಯಾಪಿಯ ಬಾಳಲ್ಲೊಂದು ಕಾಣದ ಸಂಕ್ರಮಣ. ಆದರೆ ಕೊಂಚವೂ ಎದೆಗುಂದದೆ-ತನ್ನ ವಿಧಿಯನ್ನು ವೃಥಾ ಹಳಿಯದೇ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳುವ ಪ್ಯಾಪಿ ನಮ್ಮ ಮನದಲ್ಲೂ ಗೌರವ ಮೂಡಿಸುತ್ತಾನೆ. ದಿನ-ರಾತ್ರಿ ಲೆಕ್ಕವಿಡದೆ ಶ್ರದ್ಧೆ ಸುರಿದು ಶ್ರಮವಹಿಸಿ ಹೋಟೆಲ್ಗಳ ಮಾಲಿಕನಾಗುವ ಪ್ಯಾಪಿ ಓದುಗನ ಸ್ಫೂರ್ತಿಯಾಗುತ್ತಾನೆ. ಆತನ ಬಾಳಿನಲ್ಲಿ ಬರುವ ಹೆಂಗಳೆಯರೆಲ್ಲರೂ ತಮ್ಮ ಪ್ರತಿಫಲ ಅರಸದ ಪ್ರೀತಿ, ಮಾತುಗಳಿಂದ ಆತನ ಮನಸ್ಥಿತಿ, ಸ್ಥಿಮಿತ ತಪ್ಪದಂತೆ ಮುನ್ನಡೆಸುವ ಮಾರ್ಗದರ್ಶಿಗಳಾಗುತ್ತಾರೆ.

ಪ್ಯಾಪಿಯ ಮಾತುಗಳಲ್ಲಿ—ಇಂದು ಇದೇ ಆತ್ಮಕಥೆಯನ್ನು ಮುಗಿಸುವ ಹೊತ್ತಿಗೆ ನನಗನ್ನಿಸುತ್ತಿದೆ ಅದು ದುರ್ದಷೆ ಅಲ್ಲ, ಕಠಿಣವಾದ ಅದೃಷ್ಟ ಪರೀಕ್ಷೆ. ಜೀವಕೋಟಿಗಳ ಪ್ರತಿನಿತ್ಯದ ಜೀವನಸಂಗ್ರಾಮದಲ್ಲಿ ನನ್ನದೂ ಒಂದು ಹೋರಾಟ. ವಿಶ್ವವೆಂಬ ಚದುರಂಗದಲ್ಲಿ ನನ್ನದೂ ಒಂದು ಆಟ. ಅದೃಷ್ಟ ಚೆನ್ನಾಗಿತ್ತು. ಉರುಳಿಸಿದ ದಾಳ, ನಡೆಸಿದ ನಡೆಗಳು ಫಲಕೊಟ್ಟವು. ನಾನು ಪರೀಕ್ಷೆಯಲ್ಲಿ ಗೆದ್ದು ಬಂದೆ ಅಷ್ಟೇ!


((ಇದು ಈ ಸರಣಿಯ ಮೊದಲೆರೆಡು ಪುಸ್ತಕಗಳ ಬಗೆಗಿನ ನನ್ನ ನೋಟ. 
http://suprabhasulthanimatt.blogspot.in/2013/03/blog-post_21.html))


Friday, September 12, 2014

ವೀಣೆ ಮಿಡಿವ ಕೈ

ಚಿತ್ರ ಕೃಪೆ :
http://www.mayurveena.com
ಹಸಿರ ತೋಟ ಉಲಿವ ಶಬ್ಧ ಒಂದೆ ಸಿರಿಯ ಬಯಲಲಿ
ವೀಣೆ ಹಿಡಿದು ದೇವಿಯಂತೆ ಬಂದೆ ನೀನು ಬಾಳಲಿ

ತಟಸ್ಥಗಿವಿಯ ಮರುಳು ಮನಕೆ ವೀಣೆ ಸ್ವರವು ಕೇಳಿತು
ಕಲೆಯ ಕಲ್ಪ ಜಡದ ಕಿವಿಯೊಳಾಲಾಪವ ಧ್ವನಿಸಿತು

ಎಲ್ಲಿ ಹುದುಗೆ ಬಿಡದೆ ಭಾವ ಕಂಪನಗಳು ಏಳಲು
ದಣಿವು ಜಾರಿ ಸ್ವನವ ಹೀರಿ ಮಧುರ ರಾಗದುಂಬಲು

ತೇನೆಹಕ್ಕಿ ಗಾನ ಕೇಳೆ  ಮೆಲ್ಲನದುವು ಉಲಿಯಲು
ಅಲ್ಲೆ ಕಾಂಬ ಹಸುವದೊಂದು ಕೊರಳ ಗಂಟೆ ಧ್ವನಿಸಲು

ನಿನ್ನ ಬೆರಳ ಮೋಡಿ ಮತ್ತೆ ವೀಣೆಯಲ್ಲಿ ಸ್ಫುರಿಸಲು
ಸುಯ್ದು ಸುಳಿವ ಗಾಳಿ ಕೂಡ ಕೇಳಲದನು ನಿಲ್ಲಲು

ಆಲಾಪದಿ ಮುಳುಗೇಳೆ ಭಕ್ತಿ ಚಿಮ್ಮುವಂದದಿ
ಷಡ್ಜಕಿಳಿಯುವಲ್ಲಿ ಅರೆರೆ! ದೇವ ಕಂಡ ತಾನದಿ!

ಧನ್ಯನೆಂದೆ ಮನದೊಳೆಲ್ಲ ಆರ್ದ್ರ ಭಾವ ತುಂಬಿದೆ
ಕೈಯ್ಯ ಹಿಡಿದು ಗಾನದೇವನನ್ನೆ ಚಣದಿ ತೋರಿದೆ!

(ಗೋರೂರು ರಾಮಸ್ವಾಮಯ್ಯಂಗಾರರ "ಊರ್ವಶಿ"ಯಿಂದ ಪ್ರೇರಿತ)