ಒಗ್ಗರಣೆ ಸಿನಿಮಾ ನೋಡಿದ ನನ್ನ ಸ್ನೇಹಿತರೆಲ್ಲರೂ ಈ ಸಿನಿಮಾ ನೋಡದೇ ಬಿಡಬೇಡೆಂದು ಹೇಳಿದವರೇ. ಪ್ರಕಾಶ್ ರಾಜ್ ಮುಖ್ಯಭೂಮಿಕೆಯಲ್ಲಿ ಅಂದ ಮೇಲೆ ವಿಮರ್ಶೆ ಓದದೇ ಸಿನಿಮಾ ನೋಡಿದಾಗಲೇ ಚಂದವೆಂದು, "ಚೆನ್ನಾಗಿದೆ; ಹೋಗು" ಅಂದ ಕೂಡಲೇ ನೋಡುವ ಮನಸ್ಸು ಮಾಡಿದೆ. ಮನಸ್ಸು ಮಾಡಿದಾಕ್ಷಣ ಮುಗಿಯಿತೇ? ಒಂದು ಭಾನುವಾರ ಮಗನ ಆಯುಷ್ಕರ್ಮ; ಇನ್ನೊಂದು ಭಾನುವಾರ ಅವನ ಕಿವಿ ಚುಚ್ಚಿಸುವ ಶಾಸ್ತ್ರ. ಎರಡೂ ರಜೆಗಳು ಅವನ "ಹೀಗ್ಯಾಕೆ ಮಾಡಿದಿರಿ....?!!"ಅನ್ನುವ ಅಳು ಸಮಾಧಾನಿಸಿ ಮರೆಸುವುದರಲ್ಲೇ ಕಳೆದು ಹೋಯ್ತು.
ಮೂರು ವಾರಗಳಿಂದ ಕಾದು ಕೊನೆಗೂ ಒಗ್ಗರಣೆಯನ್ನು ನೋಡಿದಾಗ ಸಾರ್ಥಕ್ಯಕ್ಕಿಂತ ಹೆಚ್ಚಾಗಿ ಖುಷಿ ಆಗಿತ್ತು. ಕಥಾಹಂದರ ನಿರೂಪಣೆಯಲ್ಲಿನ ತಾಜಾತನ ಮನಕ್ಕೆ ಮುದ ನೀಡುವಂತಿದೆ. ಪ್ರಕಾಶ್ ರಾಜ್ ರ ನಿರ್ದೇಶನ ಯಾವ ಪಳಗಿದ ನಿರ್ದೇಶಕರಿಗಿಂತಲೂ ಕಡಿಮೆಯಿಲ್ಲ. ಹುಡುಕಬೇಕೆಂದರೂ ಒಂದೂ ಜಾಳು ಕೊನೆ ಇಲ್ಲ ಚಿತ್ರಕಥೆ- ನಿರ್ದೇಶನದಲ್ಲಿ. ಕಾಯ್ಕಿಣಿಯವರ ಸಾಲುಗಳು- ಇಳಯರಾಜರ ಸಂಗೀತ, ಚಿತ್ರಕಥೆಯಲ್ಲಿ ಬೆರೆತು ಹೋಗುತ್ತವೆ.
((ಕಥೆಯ ಎಳೆ :
ಒಂದು ರಾಂಗ್ ಫೋನ್ ನಿಂದ ಪುರಾತತ್ವ ಇಲಾಖೆಯ ನೌಕರ ಕಾಳಿದಾಸ (ಪ್ರಕಾಶ್ ರಾಜ್) ಮತ್ತು ಧ್ವನಿ ಕಲಾವಿದೆ ಗೌರಿ (ಸ್ನೇಹ) ಮಧ್ಯೆ ಪರಿಚಯ ಬೆಳೆಯುತ್ತದೆ. ಪರಿಚಯ ಸ್ನೇಹವಾಗಿ ಪ್ರೇಮ ನಿವೇದನೆಯವರೆಗೆ ಬರುವಷ್ಟರಲ್ಲಿ ಕೀಳಿರಿಮೆಯ ಕಾರಣ ಭೇಟಿಯಾಗಲು ಕಾಳಿದಾಸ ತನ್ನ ಸೋದರಳಿಯ ನವೀನ್ ನನ್ನು ಕಳಿಸಿದರೆ, ಮೇಘನಾಳನ್ನು ಕಳಿಸುತ್ತಾ ಳೆ ಗೌರಿ. ))
ಗೌರಿ ತನ್ನಮ್ಮನ ಅಡುಗೆಯನ್ನು ನೆನೆಸಿಕೊಂಡು ಇದ್ದಕ್ಕಿದ್ದಂತೇ ಅಳಲು ತೊಡಗಿದಾಗ ಎಂದಿಗೂ ಅಂಥಾ ಸನ್ನಿವೇಶ ಇದಿರುಗೊಳ್ಳದ ಕಾಳಿದಾಸ್ ಹೆದರಿ ಕೈಯ್ಯಿಂದ ಫೋನ್ ಕೊಡವಿ ಕೂತುಬಿಡುವಾಗ, ಆದಿವಾಸಿ ಜಕ್ಕಯ್ಯ ಕಾಳಿದಾಸನಿಗೆ ಒದಗಬಹುದಾದ ತೊಂದರೆ ಮನಗಂಡು ಮಾತೇ ಆಡದೆ ತನ್ನ ಮಗ-ಫ್ಯಾಕ್ಟರಿಯವರ ಜೊತೆ ಹೋಗಿಬಿಡುವಾಗಿನ ಬೇಸರ- ತುಮುಲ, ಎರಡನೇ ಮಹಾಯುದ್ಧದ ಪ್ರಸಂಗ ವಿವರಿಸುತ್ತಾ ಫ್ರೆಂಚ್ ಮಹಿಳೆ ಜುವಾನ್ - ಆಕೆಯ ಪ್ರಿಯತಮ ಆಲ್ಬರ್ಟ್ ನ ಕಥೆ ಹೇಳುವಾಗಿನ ಧ್ವನಿಯಲ್ಲಿನ ಆ ತೂಕ, ಅಡುಗೆ ಭಟ್ಟನ ಮೇಲೆ ವಿನಾಕಾರಣ ಸಿಡುಕಿ ಮನೆಯಿಂದ ಹೊರಹೋಗೆಂದು ಕೂಗಿ ಕೊನೆಗೆ ತಾನೇ ದಿನಗಟ್ಟಲೆ ಮನೆಯಿಂದ ದೂರವುಳಿದು ಬಿಡುವ ಕಾಳಿದಾಸ ನಲ್ಲಿನ ಪ್ರಕಾಶ್ ರಾಜ್ ರ ನಿರಾಡಂಬರ ಅಭಿನಯ ಎಂದಿಗಿಂತಲೂ ಆಪ್ಯಾಯವೆನಿಸುತ್ತದೆ.
ಸಂಭಾಷಣೆಗಳ ಕಚಗುಳಿಯಿಡುತ್ತಲೇ ಎಲ್ಲಾ ಆಯಾಮಗಳಲ್ಲೂ ತೆರೆದುಕೊಳ್ಳುತ್ತದೆ ಕಥೆ. ಎಲ್ಲಿಯೂ ಅತಿರೇಕವೆನಿಸುವ ತಿರುವುಗಳಿಲ್ಲ. ಮಧ್ಯದಲ್ಲಿ ನವೀನ್ - ಮೇಘನಳ ಯುವ ಪ್ರೇಮದ ಹರವಿನಲ್ಲಿ ಆಧುನಿಕತೆಯಿದೆ; ಹುಡುಗಾಟಿಕೆಯಿದೆ. ಕಾಳಿದಾಸ-ಗೌರಿಯ ಪ್ರೇಮದ ವಾಸ್ತವಿಕತೆ ಮನ ಮುಟ್ಟುವಂತಿದೆ. ಇವರಿಬ್ಬರ ಊಟದೆಡೆಗಿನ ಅಭಿರುಚಿ ನೋಡುಗರ ಅಭಿರುಚಿ ಸುಧಾರಿಸುವಂತಿದೆ.
ವಿ.ಸೂ: ಸಿನಿಮಾಕ್ಕೆ ಮೊದಲು ಚೆನ್ನಾಗಿ ಹೊಟ್ಟೆ ತುಂಬಿಸಿಕೊಂಡು ಹೊರಡಿ. ಮಧ್ಯಂತರದ ವರೆಗಾದರೂ ಸಿನಿಮಾ ನೋಡಿಯೂ ಬಾಯಲ್ಲಿ ನೀರೂರಿಸದೆ ಇರಬಲ್ಲಿರೇನೋ!!!
No comments:
Post a Comment