Wednesday, August 6, 2014

ಯಾನ - ಚಿಂತನೆಗಳ ಅನುರಣನೆ

ಭೂಮ್ಯಾಕಾಶಗಳ ವಿಸ್ತಾರವನ್ನು ಭಾವದ ನಿಲುಕಿಗೆ ತಂದು ವೈಜ್ಞಾನಿಕ ವಿವರಣೆ ಕೊಡುತ್ತಲೇ, ಪಾತ್ರಗಳ ಮನಮಂಥನವನ್ನು ಸಮರ್ಥವಾಗಿ ತೆರೆದಿಡುವ ಭಾಷೆ ಈ ಕಾದಂಬರಿಯದು. ಯಾವುದೇ ವಿಷಯವೆತ್ತಿಕೊಂಡರೂ ಪೂರಕ ಅಧ್ಯಯನ ಮಾಡಿ ಬರೆಯುವ ಭೈರಪ್ಪನವರು ಐಐಎಸ್ ಸಿ - ಭಾರತೀಯ ವಿಜ್ಞಾನ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾಗಿನ ಸಂದರ್ಭವನ್ನು ಬಳಸಿಕೊಂಡು ಗಗನಯಾತ್ರೆ, ಅಂತರಿಕ್ಷಯಾನದ ಬಗೆಗೆಲ್ಲ ಮಾಹಿತಿ ಕಲೆಹಾಕಿದ್ದಾರೆ. ಅವರೇ ಹೇಳುವಂತೆ, ವಾಯುನೆಲೆ ಅಧಿಕಾರಿಗಳ ಒಡನಾಟದಿಂದ ವಾಯುಸೇನೆ ಮತ್ತದರ ಕಾರ್ಯವೈಖರಿಯ ಬಗ್ಗೆ ವಿಸ್ತಾರ ಮಾಹಿತಿ ಪಡೆದಿದ್ದಾರೆ. ವೈಜ್ಞಾನಿಕ ವಿವರಣೆಯನ್ನೆಲ್ಲ ಅಜೀರ್ಣವಾಗುವಂತೆ ಬರೆಯದೆ ಬೇಕಾದಲ್ಲಿ ಹೂರಣವಾಗಿ ಬಳಸಿದ್ದಾರೆ. ತಮ್ಮ  ನೆಚ್ಚಿನ ತತ್ವಶಾಸ್ತ್ರವನ್ನು ಸಂಬಂಧಗಳ ಮನಮಂಥನ, ಅವುಗಳ ಸ್ವರೂಪ, ವ್ಯಾಪ್ತಿ, ಸುಪ್ತ ಮನದ ಅಭಿವ್ಯಕ್ತಿಗಳಲ್ಲಿ ಕಥೆಯೊಳಗೆ ಬೆರೆತು ಹೋಗುವಂತೆ ಮೂಡಿಸಿದ್ದಾರೆ.

ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರದೆಡೆಗೆ ಕಳುಹಿಸುವ ಅಂತರಿಕ್ಷಯಾನವೇ ಕಥಾವಸ್ತು.

ಸಂಬಂಧದ ಅಂಟು-ನಂಟು ಎಲ್ಲಿಯವರೆಗೆ? ಯಾವ ಎಳೆತ ಮನಃಬಂಧಕ್ಕೆ ಕಾರಣ? ಅದರ ಮಿತಿ ಏನು? ಏಕರೂಪಿಯಾಗಿ ಎಷ್ಟು ಸಮಯ ಅದು ನಮ್ಮನ್ನು ಬಾಧಿಸಬಲ್ಲದು? ನಾವು ಒಳಪಡುವ ನೈತಿಕತೆಗೆ ಸೌರಮಂಡಲದ ಚೌಕಟ್ಟಿದೆಯಾ? ಅದರಾಚೆಗಿನ ಬಾಧ್ಯತೆಗಳೇನು? ಸೂರ್ಯನೇ ನಮ್ಮ ಆಲೋಚನೆಗಳ ಆಕರರೂಪಿಯೇ? ನಭೋಮಂಡಲದಾಚೆ ಸಾಗುವಾಗ ಮನದ ಸುಪ್ತ ದುಗುಡಗಳಾವು? ಆಧ್ಯಾತ್ಮದಿಂದಲೋ ಕೆಲಸದಿಂದಲೋ ಈ ಎಲ್ಲ ತುಮುಲಗಳನ್ನು ದೂರವಿರಿಸಲು ಸಾಧ್ಯವೇ?- ಈ ಎಲ್ಲ ಆಯಾಮಗಳನ್ನು ತಡಕುತ್ತ ಸಾಗುತ್ತದೆ ಯಾನ..

ಒಂಟಿತನದ ಸವಾಲುಗಳು, ಪಾತ್ರಗಳು ಅದನ್ನು ಬಗೆಹರಿಸಿಕೊಳ್ಳಲು ಹುಡುಕುವ ದಾರಿಗಳು, ಮತ್ತೂ ಅಂತರ್ಮುಖಿಗಳನ್ನಾಗಿ ಮಾಡುತ್ತ, ಹೊಸತನ್ನು ಕಲಿಯುತ್ತ, ತಮ್ಮನ್ನು ತಾವೇ ಕಂಡುಕೊಳ್ಳುವ ಪ್ರಯತ್ನವನ್ನು ಇನ್ನೂ ತೀವ್ರವಾಗಿಸುತ್ತದೆ ಯಾನ.

ಭೈರಪ್ಪನವರ ಚಾರ್ ಧಾಮ್ ಯಾತ್ರೆಯ ಅನುಭವವೂ ಇಲ್ಲಿ ಪಾತ್ರವೊಂದರ ಸನ್ನಿವೇಶವಾಗಿ ಮೂಡಿಬಂದಿದೆ. ಅವರ ಆತ್ಮಕಥೆ 'ಭಿತ್ತಿ' ಓದಿದ್ದರೂ ಕಾದಂಬರಿಯಾದ್ದರಿಂದಲೋ ಏನೋ ಯಾನದಲ್ಲಿಯ ಹಿಮಾಯಲಯದ ವರ್ಣನೆಯೇ ಮನಮುಟ್ಟಿತು.

ಯಾನದ ವಸ್ತುವಿನ ಬಗ್ಗೆ ಓದಿ ಇದು ವೈಜ್ಞಾನಿಕ ಕಾದಂಬರಿಯೆಂದುಕೊಂಡೆ. ಆದರೆ ಬರಿಯ ರಂಜನೆಯಾಗಿ ಉಳಿಯದೆ, ಬರಿಯ ವಿಜ್ಞಾನವೂ ತುಂಬಿರದೆ ಮನೋವಿಜ್ಞಾನ, ತತ್ವ, ಆಧ್ಯಾತ್ಮದ  ಹೊಳಹುಗಳಲ್ಲಿ ಹರಿದು ಬೇರೆಯದೇ ಸ್ತರದಲ್ಲಿ ನಿಲ್ಲುತ್ತದೆ ಯಾನ.

ನನ್ನ ಯಾನ ೨ನೇ ಮುದ್ರಣದ್ದು. ನಿಮ್ಮದು?..