ಹೆಣ್ಣೊಂದು ವಧುವಾಗಿ
ಹುಟ್ಟುಮನೆ ತೊರೆದು
ಹೊಸ್ತಿಲಲಿ ನಿಂತು
ಹಿಂತಿರುಗಿ ನೋಡಲು,
ಹುಟ್ಟಿದಾ ಮನೆಯದು,
ಅತ್ತಾಗ ತಾಯಿ
ಕೊಟ್ಟಾಗ ಮುತ್ತನ್ನು,
ಮೂಗೆಳೆದು ಸುಮ್ಮನಾದ
ದಿನವದನು ಮರೆಯುವಳೆ
ಸೋದರನು ಜಡೆ ಹಿಡಿದು
ರೇಗಿಸಿ ಕಾಡಿಸಿ
ಓಡಿಯಾಡಿಸಿದ ಕ್ಷಣಗಳದು
ರೆಪ್ಪೆಯಲಿ ಭದ್ರ
ಒಲ್ಲೆಂದರೂ ತಂದೆ
ಪಾಠ ಕಲಿಸಿ
ಅಕ್ಷರ ತಿದ್ದಿದ ದಿನಗಳವು
ಎಲ್ಲಕಿಂತ ಮೇಲು
ಜತನದಿ ಒಂದೊಂದೆ
ತನ್ನ ವಸ್ತುಗಳನು ಕೂಡಿಸಿ
ಗಂಡನೊಡೆ ಕಳೆವ
ಮಧುಚಂದ್ರದಾ
ಕನಸ ಕಾಣುತ
ವಧುವಾಗುವ ದಿನ
ಹತ್ತಿರಕೆ ಬರಲು
ಎಷ್ಟು ನೆನಪಿಸಿಕೊಂಡರೂ
ಉಳಿವುದಿನ್ನೂ
ಎಷ್ಟು ಜತನ ಮಾಡಿದರೂ
ಮರೆವುದಿನ್ನೂ
ಗಡಿಬಿಡಿಯ ದಿನಗಳವು
ಹೇಗೆ ಉರುಳಿತೆಂದೇ
ತಿಳಿಯದ ಸಮಯ
ತಂದೇಬಿಟ್ಟಿತು
ಓಲಗದ ದಿನವನ್ನು;
ಹೊಸ ಮನೆಗೆ ಹೋಗುವ
ಕಾತರವನ್ನು.
ಎಲ್ಲ ನೆನಪಾಗಿಂದು
ತನ್ನವರ ತೊರೆದು
ತನ್ನವನಿಗಾಗಿ
ಮರೆತೆಲ್ಲವನು
ಬಿಕ್ಕಿ ಹೊರಟಿಹಳು
ಹೊಸ ಹಾದಿಗೆ,
ಹೊಸ ಬಾಳಿಗೆ,
ಹೊಸ ಮಾಡಿಗೆ..
2 comments:
nimma blog nnu odi khushi aytu... keep writing....
ಧನ್ಯವಾದ, ಪ್ರವರರವರಿಗೆ.
Post a Comment