ನಮ್ಮ ತೇಜಸ್ವಿ |
ಗುಂತಕಲ್ಲಿನ ಕಾಡುಗಳಲ್ಲಿನ ನರಭಕ್ಷಕ ಹುಲಿಗೆ ಈಗಲೂ ಕೆನೆತ್ ಆಂಡರ್ಸನ್ ಮಣ್ಣು ಕೊರೆದು, ಕಲ್ಲುಗಳನ್ನು ಸುತ್ತಲೂ ಹುಲಿಗೆ ಅನುಮಾನ ಬರದಂತೆ ದೂರದಿಂದ ತಂದು ಹರಡಿ ಕಾದು ಕುಳಿತಾಗ ಅವರ ಹಿಂದಿನ ಕಾಡಿನಿಂದ ಕೇಳಿಸಿದ ಗರ್ಜನೆ ಹತ್ತಿರವಾಗುತ್ತಾ ಹೋದಂತೆ ಉಗುರು ಕಚ್ಚುತ್ತ ಓದುತ್ತಿದ್ದ ಜ್ಞಾಪಕ. ಪಕ್ಷಿಯೊಂದು ಇವರೊಡನೆ ಮಾಡಿದ ಗೆಳೆತನದ ಕಾರಣವಾಗಿ ಕೊನೆಯುಸಿರೆಳೆದಾಗ ಕಣ್ಣೀರಾದ ನೆನಪು. ಚಂದ್ರನ ಮೇಲಿಳಿದ ಮಾನವನ ಕಥೆ ಹೇಳುವಾಗಲೋ, ಮಿಸ್ಸಿಂಗ್ ಲಿಂಕ್ ಗಾಗಿ ಹುಡುಕಾಟ ನಡೆಸುವಾಗ ಬೆರಗುಗೊಂಡು ಪುಸ್ತಕದಲ್ಲೇ ಇಳಿದು ಪುಸ್ತಕ ಓದಿದ್ದಲ್ಲ - ಪ್ರತಿ ಸಂಗತಿಯನ್ನೂ ನೋಡಿದ ಭಾಸ. ಅದೇ ಜುಗಾರಿ ಕ್ರಾಸ್ ನಲ್ಲಿನ ಹೇಲು ತುಂಬಿದ ಗುಂಡಿಯೊಳಕ್ಕೆ ಮೂಗು ಮುಚ್ಚಿ ಕೂರುವ ಸಂಗತಿ, ಕಿರಗೂರಿನ ಗಯ್ಯಾಳಿಗಳು ಕೆಲಸಕ್ಕೆ ಬಾರದ ಗಂಡಂದಿರನ್ನ ಬಯನೆ ಕಟ್ಟುಗಳಲ್ಲಿ ಭೂತ ಬಿಡಿಸಿದ ಸಂಗತಿ - ಓದಿ ಜೋರಾಗಿ ನಕ್ಕು, ಮನೆಯವರಿಗೆಲ್ಲ ಇವಳೇನು ಓದುತ್ತಿದ್ದಾಳೋ, ಹಾಸ್ಯದ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಳೋ ಅಂತ ಗೊಂದಲವಾಗಿದ್ದು ನೆನೆದರೆ ಈಗಲೂ ನಗು.
ಅವರ ಸುಲಭ ಬರವಣಿಗೆ ಹಾಗು ತುಂಬಾ relate ಆಗಿಸುವ ಶೈಲಿಯ ಪುಸ್ತಕಗಳಿಂದ ಎಷ್ಟೋ ಹೊಸ ಓದುಗರನ್ನು ಕನ್ನಡಕ್ಕೆ ತರುತ್ತಲೇ ಇರುವವರು ತೇಜಸ್ವಿ. ಹೆಚ್ಚೇನೂ ಹೇಳುವುದು ಇಲ್ಲ. ಯಾಕೆಂದರೆ, ಇನ್ನು ಮುಂದೂ ಓದಿಸಲಿಕ್ಕೆ ತೇಜಸ್ವಿಯವರೇ ಇಲ್ಲ. ಅವರೆಲ್ಲ ಪುಸ್ತಕಗಳನ್ನೂ ಬಿಡುವಾದಾಗ ಮತ್ತೆ ಮತ್ತೆ ಓದಿ ಖುಷಿ ಪಡೋಣ. ಈ ರೀತಿ ತೇಜಸ್ವಿಯವರು ಸದಾ ನಮ್ಮೊಂದಿಗೇ ಉಳಿಯೋದರಲ್ಲಿ ಸಂಶಯವೇ ಇಲ್ಲ.
No comments:
Post a Comment