Tuesday, September 25, 2012

ನಮ್ಮ ಮೊದಲ ಭೇಟಿ..


ಎರಡು ವರ್ಷ ಆಯ್ತು..
ಅವತ್ತು ಸೆಪ್ಟೆಂಬರ್ ೧೯. ಕಣ್ಣಗಳು ಲೇಸರ್ ಗೆ ಒಳಪಟ್ಟು ಒಂದು ವಾರ. ಕನ್ನಡಕ ಇಲ್ಲದೆ ಪುಟಿಯುತ್ತಾ ಓಡಾಡ್ತಿದ್ದ ದಿನಗಳು. ಬ್ಯಾಂಕ್ ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೊರಬಂದು ಒಂದು ತಿಂಗಳ ಮೇಲಾಗಿತ್ತು. ಮುಂದೇನು? ಅಂದ್ರೆ "ನಿನ್ನ ಮದುವೆ" ಅಂದಿದ್ರು ಅಪ್ಪಾಮ್ಮ..

ಮೂರ್ನಾಲ್ಕು ಹುಡುಗರನ್ನ ಆಗಲೇ ಭೇಟಿ ಮಾಡಿದ್ದರೂ ಯಾರೂ ಇಷ್ಟವೇ ಆಗಿರ್ಲಿಲ್ಲ. ನಿತಿನ್ ತಾಯಿ ನನ್ನ ಅಮ್ಮನನ್ನ ಅಪ್ಪ್ರೋಚ್ ಮಾಡಿ ಸುಮಾರು ದಿನಗಳಾಗಿತ್ತು. ಅವತ್ತು ಭಾನುವಾರ, ಗಂಡಿನ ಕಡೆಯವರು ನೋಡುವ ದಿನ ಅಂತ ಗೊತ್ತು ಮಾಡಿದ್ರು. ನನಗೇನೋ ಧಾವಂತ. ಇನ್ನೂ ತಯಾರಾಗಿರಲಿಲ್ಲ. ನಿಧಾನವಾಗಿ ರೆಡಿಯಾದರಾಯ್ತು ಅಂತ ತಡವಾಗಿತ್ತು. ಮತ್ತೆ "ಉಪ್ಪಿಟ್ ಪಾರ್ಟಿ"ಗೆ ಕೂರೋಕೆ ತಳಮಳ.. ನನ್ನಕ್ಕ, ಅಣ್ಣ ಇವರ್ಯಾರೂ ಊರಿಂದ ಬರಲಾಗದೆ ನಾನು ಒಂಟಿ ಅನ್ನಿಸ್ತಿತ್ತು. ಅಮ್ಮ, ಆಂಟಿ ತಿಂಡಿಯನ್ನೆಲ್ಲ ಮಾಡಿಟ್ಟಿದ್ದರು.. ಇನ್ನು ಪ್ರಹಸನ ಶುರುವಾಗೋಕೆ ಗಂಡು ಬರೋದೊಂದೇ ಬಾಕಿ. ಆಮೇಲೆ, "ಆಕ್ರಮಣ"ವೇ!

ಅಷ್ಟರಲ್ಲಿ ನಿತಿನ್ ತನ್ನ ತಂದೆ ತಾಯಿ, ಹಾಗೂ ತಾಯಿಯ ಸ್ನೇಹಿತೆಯ ಜೊತೆ ಬಂದೇ ಬಿಟ್ರು.. ಮುಂಚಿನ ಉಪ್ಪಿಟ್ ಪಾರ್ಟಿಗಳಲ್ಲಿ ನಾನು ಮನೆಯವರೆಲ್ಲರ ಜೊತೇನೆ ಹೋಗಿ ಬಂದವರನ್ನ ಇದಿರುಗೊಳ್ಳುತ್ತಿದ್ದೆ. ಈ ಸರಿ ನಾನಿನ್ನೂ ಪೂರ್ತಿ ಸಿಂಗಾರ ಮಾಡ್ಕೊಂಡೇ ಇರ್ಲಿಲ್ಲ. ಹಾಗಾಗಿ ಇರುಸು-ಮುರುಸಾಗಿಹೋಯ್ತು ಹೊರಗೆ ಹೋಗೋದಕ್ಕೆ. ಆಂಟಿ ಒಳ ಬಂದು ಹುಡುಗ ಚೆನ್ನಾಗಿದ್ದಾನೆ ಕಣೆ.. ಅಂತ ರಾಗವಾಗಿ ಹೇಳಿದವರು ನಿಲ್ಲದೇ ತಿಂಡಿ ಸರ್ವ್ ಮಾಡೋಕೆ ಹೋಗೇಬಿಟ್ರು. ನಾನು ಅಡುಗೆ ಮನೆಗೆ ಹೋಗಬೇಕಾದ್ರೆ ಹಾಲ್ ದಾಟಿಯೇ ಹೋಗಬೇಕಾಯ್ತು, ಯಾರು ನನ್ನ ನೋಡಿದ್ರೋ, ಯಾರು ನೋಡ್ಲಿಲ್ಲವೋ, ನಾ ಕಾಣೆ. ಕಾಫಿ ಎಲ್ಲರಿಗೂ ಕೊಡುವಾಗ ನಿತಿನ್ "ಹಾಯ್!" ಅಂದು ಮುಗುಳ್ನಕ್ಕರು.. ಬೇರೆ ಗಂಡುಗಳ ಹಾಗೆ ಧಿಮಾಕು ತೋರಿಸುತ್ತ ಕೂರಲಿಲ್ಲವಾದ್ದರಿಂದ ಅಲ್ಲಿಯೇ ಇಂಪ್ರೆಷನ್ ಬಿತ್ತು. ನನ್ನ ಬಗ್ಗೆ ಎಲ್ಲ ವಿಚಾರಿಸಿದ್ದಾದ ನಂತರ ನಮ್ಮಿಬ್ಬರನ್ನೇ ಮಾತಾಡಲು ಹೇಳಿದರು.. ಇಷ್ಟು ದಿನ ಹೀಗೇನೆ ಹೆಣ್ಣು ನೋಡಲು ಬಂದವರ ಜೊತೆ ಯಾವತ್ತೂ ಮಾತಾಡಲು ಅನುವು ಮಾಡಿಕೊಡದಿದ್ದುದರಿಂದ ನಂಗೆ ಅರ್ಥವಾಯ್ತು. ಹುಡುಗ ಇಷ್ಟವಾಗಿದ್ದಾನೆ ಮನೆಯವರಿಗೆ, ಅಂತ. ನನ್ನ ತಂದೆ ಬೇರೆ ಎರಡೆರಡು ಸಾರಿ, ನಿಮ್ಮ ಪ್ರಸನ್ನ ಭಾವ ಇದ್ದಹಾಗೆ ಇದ್ದಾನಲ್ವಾ, ಅಂತ ಅಂದಿದ್ರು, ಎಲ್ಲರ ಮುಂದೇನೆ.. ನಮ್ಮ ಭಾವನ ಹಾಗೆ ಗುಣವಿರೋ ಹುಡುಗ ಅಳಿಯನಾಗಿ ಬರಬೇಕು ಅನ್ನೋದು ಅಪ್ಪಾಜಿಯ ಆಸೆ.

ನನ್ನ ಅಂಕಲ್ ಕುರ್ಚಿ ಹಾಕಿಕೊಡೋಕೆ ಹೋದ್ರೆ, "ಅರೆರೆ, ಇದೇನಿದು  ಫಾರ್ಮಾಲಿಟೀಸ್ ಎಲ್ಲ ಬೇಡ.. ಕೊಡಿ ಇಲ್ಲಿ,ಅಂಕಲ್" ಅಂದ ನಿತಿನ್, ಚೇರ್ ನ ತಾವೇ ಹಾಕಿಕೊಂಡರು. ಅಂಕಲ್ ಕಡೆ ನೋಡಿ ನಕ್ಕೆ ನಾನು. ಅವರ ಮುಖದಲ್ಲೂ ನಗು ಇತ್ತು. 

ರೂಂ ತುಂಬೆಲ್ಲ ಬೇಗೊಮ್ಮೆ ಕಣ್ಣಾಡಿಸಿದರು ನಿತಿನ್. ನನ್ನನ್ನ ಅಳೆಯುವಂತೆ ನೋಡದೇ ಸ್ನೇಹಿತರಂತೆ ಮಾತಿಗಾರಂಭಿಸಿದ್ರು. ತಮ್ಮ ಓದಿನ ಬಗ್ಗೆ, ಕೆಲಸದ ಬಗ್ಗೆ, ಹವ್ಯಾಸಗಳ ಬಗ್ಗೆ ಹೇಳ್ತಾ ಹೋದರು. ಕೇಳ್ತಾ ಕೇಳ್ತಾ ನಂಗೂ ಈ ಹುಡುಗ ನಂಗೆ ಸರಿಯಾದವರು ಅನ್ನಿಸಿದ್ರು. ಕುಟುಂಬಕ್ಕೆ ತುಂಬಾ ಮಹತ್ವ ಕೊಡೋವ್ರು ಅಂತ ಅನ್ನಿಸ್ತು. ಅವರು ಮಿಕ್ಕೆಲ್ಲ ಕಡೆ ಸರಸದಿಂದಲೇ ಹಗುರವಾಗಿ ಮಾತಾಡಿ, ನಿಮಗೆ ಹೊರದೇಶದಲ್ಲೇ ಸೆಟ್ಟಲ್ ಆಗ್ಬೇಕು ಅಂತ ಇದೆಯಾ? ಯಾಕಂದ್ರೆ ನಾನು ನನ್ನ ತಂದೆ ತಾಯಿನ ಬಿಟ್ಟು ಹೋಗ್ಬೇಕಾಗೊದ್ರಿಂದ, ನಂಗೆ ಹೊರದೇಶದಲ್ಲಿ ಉಳಿಯೋ ಆಸೆಯಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ರು. ಹಾಗೆ ಹೇಳುವಾಗ ಇದ್ದ ಅವರ ಮುಖಭಾವವೇ ಬೇರೆ. ಈಗ ತೂಗಿ ನೋಡ್ತಿದ್ರು ಅವರು ನನ್ನ ಸ್ವಭಾವವನ್ನ. ಅವರು ಸಡಿಲ ಮನಸ್ಸಿನ ಹುಡುಗ ಅಲ್ಲ ಅಂತ ಆ ಮಾತಿನಿಂದ ವ್ಯಕ್ತವಾಯ್ತು.
ನನ್ನ ತಂದೆ ತಾಯಿಯನ್ನೂ ನಾನು  ನೋಡಿಕೊಳ್ಳಬೇಕಿರುವುದರಿಂದ ನನಗೂ ಆ ವಿಷಯದಲ್ಲಿ ಒಲವಿಲ್ಲವೆಂದಮೇಲೆ ಅವರ ಮೊಗದಲ್ಲಿ  ಮೂಡಿದ ಮುಗುಳ್ನಗೆ ನಾನು ಅವರಿಗೆ ಒಪ್ಪಿಗೆ ಅಂತ ಸ್ಪಷ್ಟವಾಗಿ ಹೇಳ್ತಾ ಇತ್ತು.

ಆದರೂ, ಮೊದಲ ನೋಟದ ಆ ಸಂಗೀತದಂಥಾ "ಹಾಯ್ " ಎಷ್ಟು ಬಾರಿಯಾದರೂ ಮತ್ತೆ ಅವರು ಇಲ್ಲಿನ ವರೆಗೆ ಅದೇ ರೀತಿ ಹೇಳಲು ಸಾಧ್ಯವಾಗಿಲ್ಲ.. ಅಥವಾ ಆ ಕ್ಷಣದ ಮಾಯೆ ನನ್ನನ್ನ ಆ ಪದದೊಂದಿಗೆ ಕಟ್ಟಿ ಹಾಕಿದೆಯೇನೋ 

5 comments:

Prashanth Bichi said...

ಬಹಳ ಚೆನ್ನಾಗಿ ಅರ್ಥೈಸಿದ್ದೀಯ ಸುಪ್ರಭ. ನಿತಿನ್ ಹಾಗು ನೀನು ಹೀಗೆ ನಗು ನಗುತ್ತಾ ಎಲ್ಲರನ್ನು ಸಂತೋಷಿಸುತ್ತಾ ನೂರು ಕಾಲ ಸುಖವಾಗಿ ಬಾಳಿ.

ಇಷ್ಟರಲ್ಲೆ ನಾವು ಅಲ್ಲೆ ಬಂದು ವಾಸಿಸುವರಿದ್ದೇವೆ.

Suprabha Suthani Matt said...

ತುಂಬಾ ಧನ್ಯವಾದ ಅಣ್ಣ.. Will be waiting to see u all soon then!

Vikas U M said...

It's Really nice.

Vikas U M said...
This comment has been removed by the author.
Suprabha Suthani Matt said...

Dhanyavaada Vikas..