Wednesday, June 26, 2013

ಕಲ್ದವಸಿ – ಡಾ. ಕೆ. ಏನ್. ಗಣೇಶಯ್ಯ

ಗಣೇಶಯ್ಯನವರ ಇತರೆ ಪುಸ್ತಕಗಳಾದ ‘ಶಾಲಭಂಜಿಕೆ’, ‘ಪದ್ಮಪಾಣಿ’, ‘ಕಪಿಲಿಪಿಸಾರ’, ‘ಚಿತಾದಂತ’ ಪುಸ್ತಕಗಳಂತೆ ಕಲ್ದವಸಿಯನ್ನೂ ಓದಿ ಮುಗಿಸುವ ವರೆಗೆ ಕೆಳಗಿಡಲಾಗಲಿಲ್ಲ. ಅವರ ಬರವಣಿಗೆಯ ವಸ್ತುವೇ ಅಂಥವು.

ರಾಜರು ಸಾಮಾನ್ಯವಾಗಿ ತಂದೆಯ ಹೆಸರಿನಿಂದ ಗುರುತಿಸಲ್ಪಟ್ಟರೆ ಶಾತವಾಹನರನ್ನು ಸೋಲಿಸಿ ಅಮರಾವತಿಯನ್ನಾಳಿದ ಹಿಂದೂ ಧರ್ಮೀಯರೂ ರಘುವಂಶೀಯರೂ ಆದ ಇಕ್ಷ್ವಾಕು ವಂಶಸ್ಥರು ಕೂಡ ಬೌದ್ಧ ರಾಜರಂತೆ (ಗೌತಮಿ ಪುತ್ರ ಯಜ್ಞ ಶತಕರ್ಣಿ, ಗೌತಮಿ ಪುತ್ರ ವಿಜಯ ಶತಕರ್ಣಿ..) ತಾಯಿಯ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಎರಡನೇ ಬುದ್ಧನೆಂದು ಪ್ರಖ್ಯಾತರಾದ ನಾಗಾರ್ಜುನ ಆಚಾರ್ಯರ ಜೀವನದ ಬಗ್ಗೆ ಸ್ಥೂಲವಾಗಿ ಬೆಳಕು ಚೆಲ್ಲಲಾಗಿದೆ. ಮೊದಲ ಕಥೆ ಅಮರಾವತಿಯನ್ನು ಆಳಿದ ಶಾತವಾಹನರು ಹಿಂದೂ ಧರ್ಮೀಯರಾಗಿದ್ದೂ ಜೈನ ಸ್ತೂಪಗಳ, ವಿಶ್ವವಿದ್ಯಾಲಯ ಸ್ಥಾಪನೆ ಹಾಗು ಜೈನ ಧರ್ಮಕ್ಕೆ ಪ್ರೋತ್ಸಾಹ, ಅದರ ಪ್ರಚಾರಕ್ಕೆ ಕಾರಣವಾಗಿದ್ದು ಏಕೆಂದು ಹೇಳುತ್ತಾ ಇತಿಹಾಸವನ್ನು ಕಥೆಯಾಗಿ ಬಿಚ್ಚಿಡುತ್ತದೆ. ಇತಿಹಾಸವನ್ನು ಕಂಠಪಾಠ ಮಾಡಿ ಕಾಟಾಚಾರಕ್ಕೆ ಪಾಸಾದ ನಮಗೆ ಹೀಗೆ ಇತಿಹಾಸವನ್ನು ಕಥೆಯಾಗಿ ತೋರಿಸಿ ಕುತೂಹಲ ಕೆರಳಿಸಿದ್ದರೆ ಇನ್ನಷ್ಟು ಉತ್ಸುಕತೆಯಿಂದ ಓದುತ್ತಿದ್ದೆವೇನೋ ಎನ್ನಿಸದೆ ಇರಲಿಲ್ಲ.

ನಂತರದ ಕಥೆ ಹಿಂದುತ್ವದ ರಕ್ಷಣೆಯ ವಿಚಾರ ಹಾಗು ಉಗ್ರಗಾಮಿ ಸಂಘಟನೆಗಳ ವಿತ್ತ ವ್ಯವಹಾರಗಳ ಬಗ್ಗೆ ಒತ್ತು ಕೊಟ್ಟಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಸ್ವಾರ್ಥಿ ರಾಜಕಾರಣಿಗಳ ಬೆಂಬಲಕ್ಕೆಂದೇ ಬದುಕೇನೊ ಅನ್ನುವಂತೆ ಅನ್ಯ ಕೋಮಿನವರ ಬಗೆಗೊಂದು ಮೃದು ಧೋರಣೆ ಬೆಳೆಸಿಕೊಂಡು ಇತಿಹಾಸದ ಸತ್ಯಗಳೆಡೆ ಜಾಣಕುರುಡರಾಗುವ ಬುದ್ಧಿಜೀವಿಗಳಿಗೆ ಅಂಕಿ-ಅಂಶ ಸಹಿತ ವೈಚಾರಿಕತೆಯ ವಿಮರ್ಶೆ ಇದೆ.

ನನ್ನ ತಂದೆ ಈ ಪುಸ್ತಕವನ್ನ ತಂದ ಕೂಡಲೇ ಹೆಸರಿನ ಅರ್ಥವೇ ಆಗಲಿಲ್ಲ. ಇದೊಂದು ೩ ಕಥೆಗಳ ಸಂಕಲನ. ಕಲ್ದವಸಿ ಅನ್ನೋ ಕಥೆ ಅವುಗಳಲ್ಲಿ ಕಡೆಯದು. ಶ್ರೀ ರಾಮಾಯಣ ದರ್ಶನಂ ರಚಿಸುವಾಗ ಕುವೆಂಪುವಿಗೆ ಪ್ರೇರಣೆಯಾದ ಹಲವು ಸಂದರ್ಭಗಳಲ್ಲಿ ಒಂದರ ಬಗ್ಗೆ ಹೇಳುತ್ತಾ ಲೇಖಕರು ನಮ್ಮನ್ನು ರಾಮಾಯಣದ ವೈಭವೀಕರಣದ ಪ್ರಸ್ತುತತೆಯ ಬಗ್ಗೆ ಚಿಂತನೆಗೆ ದೂಡಿಬಿಡುತ್ತಾರೆ. ತನ್ನ ಗಂಡನೊಂದಿಗೆ ವನವಾಸಕ್ಕೆ ಹೋಗದೆ ಭಾವನೆಗಳನ್ನು ಹತ್ತಿಕ್ಕಿ ಕಾದ ಊರ್ಮಿಳೆ ಕಲ್ಲಿನಂತಹಾ ತಪಸ್ವಿನಿಯಾಗಿ, ಸೀತಾರಾಮರ ಹೃದಯದಲ್ಲಿ ಲಕ್ಷ್ಮಣನ ಸ್ಥಿತಿಗೆ ನೆನಪಾಗಿ ವನವಾಸದಲ್ಲಿನ ಪರ್ಣಶಾಲೆಯ ಬಳಿಯ ಕಲ್ಲುಬಂಡೆಯಾಗಿ ನಿಲ್ಲುತ್ತಾಳೆ. ಆಕೆಯೇ ಕಲ್ದವಸಿ. ಇಲ್ಲಿ ಮನಮಂಥನಕ್ಕೆ ಅವಕಾಶವಿದೆ. ಮತ್ತೆ ಮತ್ತೆ ಕೇಳಿ, ಓದಿ, ಹೇಳಿದ ರಾಮಾಯಣದ ತಿರುಳು ಮತ್ತೊಮ್ಮೆ ಒರೆಗಲ್ಲಿಗೆಳೆಯಲ್ಪಡುತ್ತದೆ. ಕಾಲಗರ್ಭದಲ್ಲಿ ಹೂತು ಹೋದ ವೈಚಾರಿಕತೆ ತಾನೇ ಮೈವೆತ್ತು ಬಂದಂತಿದೆ.

ವಿವಿಧ ವಿಚಾರಗಳ ಬಗ್ಗೆ ವಿಶದವಾಗಿ ತಿಳಿಸುತ್ತಾ ತೌಲನಿಕತೆಯನ್ನು ಬೆಳೆಸಿಕೊಳ್ಳುವಲ್ಲಿ ಈ ಪುಸ್ತಕ ಸಹಾಯಕವಾಗಿದೆ. ಪ್ರಾಧ್ಯಾಪಕರಾಗಿದ್ದುಕೊಂಡೂ ಸಂಶೋಧನಾತ್ಮಕ ಮನೋಭಾವವಿರುವ ಲೇಖಕರು ಮೆಚ್ಚುಗೆಯಾಗದೆ ಇರಲು ಕಷ್ಟಸಾಧ್ಯ. ನಮ್ಮ ಕೃಷಿ ವಿಶ್ವವಿದ್ಯಾಲಯದ ಬೋಧಕರಾದ ಗಣೇಶಯ್ಯನವರ ಪ್ರಯತ್ನ ಈ ನಿಟ್ಟಿನಲ್ಲಿ ಶ್ಲಾಘನೀಯ. 

2 comments:

Badarinath Palavalli said...

ಪುಸ್ತಕವನ್ನು ಓದಲು ಪ್ರೇರೇಪಿಸುವ ನಿಮ್ಮ ಸದ್ಗುಣಕ್ಕೆ ನಮ್ಮ ಶರಣು. ಈ ಪುಸ್ತಕವನ್ನು ಓದಿ ನಂತರ ಮತ್ತೆ ಕಾಮೆಂಟ್ ಹಾಕುತ್ತೇನೆ.

http://badari-poems.blogspot.in

ವಿ.ರಾ.ಹೆ. said...

ಹೌದು. ಮೂರೂ ಕತೆಗಳು ಹೇಗೆ ಓದಿಸಿಕೊಂಡು ಹೋದವು ಅಂದರೆ ಪುಸ್ತಕವನ್ನು ಮುಗಿಸದೆ ಕೆಳಗಿಡಲಾಗಲಿಲ್ಲ. ಒಬ್ಬ ಲೇಖಕನನ್ನು ಆತ ಸೃಷ್ಟಿಸುವ ಪಾತ್ರಗಳ, ಪಾತ್ರಗಳ ವಿಚಾರಗಳ ಜೊತೆ ತಳುಕು ಹಾಕಬಾರದು ಎಂಬುದರ ಬಗ್ಗೆ ಗಣೇಶಯ್ಯನವರು ಬರೆದ ಟಿಪ್ಪಣಿಯೂ ಚೆನ್ನಾಗಿದೆ.