Saturday, December 7, 2013

ಕಾಲದ ನೆನಹು

ಕಾಲಚಕ್ರ ಹಿಂದೆ ತಿರುಗಿ
ಅಮ್ಮನೆಂಬ ಪಟ್ಟಿ ಕಳಚಿ
ಇನಿಯನೆಳೆಸಬೇಕು; ಸತಿಯು ಮಾತ್ರವಾಗಬೇಕು

ಬಿಗುವ ಬಿಟ್ಟು ಬಿಡುವ ಸುರಿದು
ನಲ್ಲೆಮಾತ್ರವಾಗಿ ನಿಮ್ಮ
ಭುಜದಳೊರಗಬೇಕು; ಮತ್ತೆ ಪ್ರೀತಿಯುಕ್ಕಬೇಕು

ಭ್ರಮಿತ ಜಗವು ನಿಜದ ಜಗವ
ದಾಟಿನಡೆದು ನಾನು ಮತ್ತೆ
ಮಗುವೆ ಆಗಬೇಕು; ಸಮಯ ಹಿಂದೆ ತಿರುಗಬೇಕು

ಮಗುವು ನಾನು ನಿಮ್ಮಲಿನ್ನು
ನಿಮ್ಮ ನಗುವು ನನ್ನ ದಿನದ
ಸೂರ್ಯನಾಗಬೇಕು; ಬೆಳಕ ಮತ್ತೆ ಹರಿಸಬೇಕು

ನಿಮ್ಮ ಹೊರತು ಜಗವೆ ಕಾಣ್ದೆ
ಬಿಡುಗಂಗಳಿಂದಲೆನ್ನ-  
-ಕ್ಕರೆ ತಿಳಿಸಬೇಕು; ನಾನು ಮಗುವೆ ಆಗಬೇಕು

ಸರಿನುಡಿಗಳ ಸುಳಿವಿಲ್ಲದೆ
ಅರ್ಥವಿಲ್ಲದರೆನುಡಿಗಳ
ಮತ್ತೆ ಹೇಳಬೇಕು; ಎನಗೆ ಲಾಲಿ ಹಾಡಬೇಕು

ರಚ್ಚೆ ಹಿಡಿದು ಅಳಲು ನಾನು
ಕಣ್ಣನೊರೆಸಿ ನೀವು ಮತ್ತೆ
ನನ್ನನಗಿಸಬೇಕು; ಮುಗುಳ ಮತ್ತೆ ತರಿಸಬೇಕು