Saturday, August 27, 2011

ಜಗಳದ ನೆಮ್ಮದಿ!!

ಒಮ್ಮೊಮ್ಮೆ ಹೀಗಾಗಿಬಿಡುತ್ತದೆ. ಎದ್ದಾಗಿನಿಂದ ದುಸುಮುಸು, ಅರ್ಥವಾಗದ ಭಾವವ್ಯಾವುದೋ ತರ್ಕಕ್ಕೆ ನಿಲುಕುತ್ತಿಲ್ಲವೆಂಬ ಅಸಮಾಧಾನ. ಕಂಡಲ್ಲಿ ಹರಿಹಾಯಬಹುದೇನೋ ಅನ್ನುವ ದುಗುಡ. ತೋರಲಾರದ ಕುದಿ. ಮನದೊಳಗಣ ಅನಾರೋಗ್ಯದ ಕೀವು ಹೇಗಾದರೂ ಹೊರ ಹಿಚುಕಿ ನೆಮ್ಮದಿಯಾಗಬೇಕೆಂದು ಕಾಯುವ ಸಮಯ. ಆಗ ಸಿಗಬೇಕು ನೋಡಿ, ಯಾರಾದರೂ ನಮ್ಮ ಸಿಟ್ಟಿನ ನೈವೇದ್ಯಕ್ಕೆ! ಒಳಗೆ ಸಿಟ್ಟು ಬೆಲೂನಿನಂತೆ ತುಂಬಿದ್ದಾಗ ಅದು ಹೊರಬರಲು ಎಂಥಹಾ ನಿಮಿತ್ತ ಮಾತ್ರವಾದರೂ ಸಾಕು. ಕೇಳಿದ ಬೆಲೆಗೆ ಕೊಡದ ತರಕಾರಿ ಮಾರುವವನೋ, ಕೊಂಚ ಅಜಾಗರೂಕತೆಯಿಂದ ಬಂದ ವಾಹನ ಚಾಲಕನೋ, ಉಪ್ಪು ಹೆಚ್ಚಾದ ಅಡುಗೆಯೋ,  ಕೊನೆಗೊಂದು ಅಂಕೆ ತಪ್ಪಿ ಬಂದ ಮೊಬೈಲ್ ಕರೆಯಾದರೂ ಸರಿಯೇ... ಲಾವಾರಸದಂತೆ ಹರಿಯುತ್ತದೆ ನಮ್ಮ ಕೋಪದ ನುಡಿಗಳು. ರಿಸರ್ಚ್ ಪ್ರಕಾರ, ಇಂತಹ 'ಸಿಕ್ ' ಭಾವ ಸೋಮವಾರದಂದೇ ಹೆಚ್ಚಂತೆ. ಅದೇನಾದರೂ ಇರಲಿ, ಕೆಲವೊಮ್ಮೆ ಇಂತಹಾ ಲಾವ ಕುದಿ ಹತ್ತಿದಾಗ ಅವಕಾಶವಿದ್ದಲ್ಲಿ ಹೊರಚೆಲ್ಲಿಬಿಡೋದೇ ಉತ್ತಮ ಅಂತ ಮನಸ್ಶಾಸ್ತ್ರಜ್ಞ್ಯರ ಅಂಬೋಣ.  

ನಾನು ಕೃಷಿ ಬಿಎಸ್ಸಿಯ ಅಂತಿಮ ವರ್ಷದಲ್ಲಿದ್ದಾಗ RWEP (Rural Agricultural Work Experience Program ಅಥವಾ ನಮ್ಮ ಭಾಷೆಯಲ್ಲಿ 'ರಾವೆ') ಅಂತ ಕೊನೆಯ ಸೆಮಿಸ್ಟರಿನಲ್ಲಿ ನಾವು ನಮಗೆ ನಮ್ಮ ಶಿಕ್ಷಕರು ಗೊತ್ತು ಮಾಡಿದ ಹಳ್ಳಿಯಲ್ಲೇ ಇದ್ದು, ರೈತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ, ಕೃಷಿಯ ಆಧುನಿಕ ವಿಧಾನಗಳ ಬಗ್ಗೆ ಅಲ್ಲಿನ ಜನರಿಗೆ ತಿಳಿಸಿಕೊಡಬೇಕಿತ್ತು. ರಾವೆಯ ಕಡೆಯ 10 ದಿನ  ಏನ್ಎಸ್ಸೆಸ್ ಕ್ಯಾಂಪಿನಲ್ಲಿ ನಮ್ಮ ಗುಂಪಿನ ಮುಖ್ಯ ಹಳ್ಳಿಯ (ಅಥವಾ ಹೋಬಳಿ) ಅಭಿವೃದ್ಧಿಗಾಗಿ ಮೀಸಲಿಡಬೇಕಿತ್ತು.   ಮಣ್ಣಿನಲ್ಲಿ ಗೆಯ್ದು ಅಭ್ಯಾಸವಾಗಿದ್ದರೂ ಸಹ ಕೊಚ್ಚೆ, ಚರಂಡಿ, ಮೋರಿಗಳನ್ನು ಎಂದೆಂದೂ ಮುಟ್ಟದವಳೇ ನಾನು. ಅದೊಂದು ದಿನ ನಮ್ಮ ಕ್ಯಾಂಪಿನಲ್ಲಿ ಕಡುಗಪ್ಪು ಗಬ್ಬು ಚರಂಡಿಯನ್ನು ಸ್ವಚ್ಛ ಮಾಡುವ ಸೌಭಾಗ್ಯ ನಮ್ಮ 12 ಜನರ ಗುಂಪಿಗೆ ಬಂದಿತ್ತು. ಹುರುಪಿನಿಂದ ಕೆಲಸ ಮಾಡಿ ಚರಂಡಿಯೇನೋ ಸ್ವಚ್ಚವಾಯಿತು. ಆಮೇಲೆ ಸ್ನಾನಕ್ಕೆ ನೀರೇ ಇಲ್ಲ. ಜಗ್ಗು ಕೊಳವೆಯಲ್ಲಿ ಕೈ ಕಾಲುಗಳನ್ನು ಎಷ್ಟು ಸ್ವಚ್ಛ ಮಾಡಿಕೊಂಡರೂ, tan ಆಗೀವೆಂಬ ಮುಂಜಾಗರೂಕತೆಯಿಂದ ಧರಿಸಿದ್ದ ಮುಂಗೈ ಮಟ್ಟದ ಶರ್ಟು, ಪಾದ ಮುಚ್ಚುವ ಪ್ಯಾಂಟಿನಿಂದ ವಾಸನೆಯೇ ಹೋಗಲೊಲ್ಲದು. ನಮ್ಮ ಕಣ್ಣಿಗೆ ಕಿಸಿರಂತೆ, ನಮ್ಮ ಕ್ಲಾಸಿನದೇ ಇನ್ನೆರೆಡು ತಂಡಗಳಿಗೆ ಮೋರಿ ಕಸವೆತ್ತುವ ಕೆಲಸ ಕೊಡಲೇ ಇಲ್ಲವೆಂಬ ಹೊಟ್ಟೆಯ ದಳ್ಳುರಿ. ಕೋಪ, ಅಸಹಾಯಕತೆ ಕುದಿಯಲು ಅಷ್ಟು ಕಾರಣ ಸಾಕಿತ್ತು. ಮೈಕೈ ನೋವಿನಲ್ಲಿ ನಾವು ಕುಳಿತಿದ್ದಾಗ ನನ್ನ ಮೊಬೈಲಿಗೆ ಮತ್ತದೇ ಅನಾಮಿಕ ಕರೆ ಬಂತು.ಈಗಿನಷ್ಟು ನಿಷ್ಟುರವಾಗಿ ಕರೆ ಅನಾಮಿಕವಾದರೆ, ಬೇಡವಾದುದಾದರೆ ಸ್ವೀಕರಿಸಿ ತೆಗೆದು ಪಕ್ಕದಲ್ಲಿರಿಸಿಯೋ, ಕಟ್ ಮಾಡಿಯೋ ಬಿಡುವ ದಾರ್ಷ್ಯವಾಗಲಿ, ಪ್ರೌಢತೆಯಾಗಲೀ ಇರಲಿಲ್ಲ. ಯಾರು ಅಂತ ಕೇಳಿ ಕೇಳಿ ನನಗೂ ರೋಸಿ ಹೋಗಿತ್ತು. ಆಗಾಗ ಬರುತ್ತಿದ್ದ ಕರೆಗೆ ಆ ಸಮಯ ಯಮಗಂಡವಾಗಿತ್ತು. ಇದ್ದುಬದ್ದ ಅಸಹನೆಯೆಲ್ಲಾ ಸುರಿದು ಬೈದು, ಸೈಬರ್ ಕ್ರೈಂ ಬಗ್ಗೆ ಬೈಗುಳದಲ್ಲೇ ತಿಳಿಸಿಕೊಟ್ಟು, ಪೋಲಿಸ್ ಗೆ ದೂರು ಕೊಡುವುದಾಗಿ ಬೆದರಿಸಿ, ಉಚ್ಚಸ್ಥಾಯಿಯಲ್ಲಿ ಉಗಿದ ನಂತರ ಮತ್ತೆಂದೂ ಆ ಅನಾಮಿಕ ಕರೆ ಮರುಕಳಿಸಲಿಲ್ಲ.

ಸಿಟ್ಟು ತಾನು ಸಲ್ಲುವಲ್ಲಿ ತೋರಿಸಿದರೆ, ಸಿಟ್ಟೂ ಸಹ ಪ್ರಯೋಜನಕಾರಿ ಆಗಬಲ್ಲುದೆಂದು ಆಗ ತಿಳಿಯಿತು ನನಗೆ. ಅಂದಿನಿಂದ, ಬೇಗುದಿಯ ಶಮನಕ್ಕೆ ಸಕಾರಣ ಸಿಟ್ಟನ್ನು ಬಳಸುತ್ತಿದ್ದೇನೆ. ನೀವೂ ಬಳಸಿ ನೋಡಿ. ಪರಿಣಾಮ ಪ್ರಯೋಜಕವಾದೀತು. ನಮ್ಮ-ನಮ್ಮವರ ಮೇಲೆಯೇ ಸಿಟ್ಟಾಗುವುದರ ಬದಲಿಗೆ, ಅಪರಿಚಿತರ ಮೇಲೆ ಸಕಾರಣ ಕೋಪ ತೋರಿಸುವುದೇ ಲೇಸು. ಮನೆಯವರು, ಸ್ನೇಹಿತರು, ನಮ್ಮ ಒಮ್ಮಿಲ್ಲೋಮ್ಮಿಗಿನ ಅಕಾರಣ ಸಿಟ್ಟಿಗೆ ನೊಂದುಕೊಳ್ಳುತ್ತಾರೆ. ಸಂಬಂಧ, ಭಾವ ಎರಡಕ್ಕೂ damage. ಅದರ ಬದಲು ಇತರರ ತಪ್ಪಿಗೆ ಸಿಟ್ಟು ತೋರಿಸಿ. ದಾಕ್ಷಿಣ್ಯಕ್ಕೆ ಬಿದ್ದು ನಗೆಗೆರವಾಗುವುದರ ಬದಲಿಗೆ ಸಮಾಜವೂ ಒಂದಿಷ್ಟು ಸುಧಾರಿಸೀತು.

No comments: