Disclaimer: ಇಷ್ಟ್ ದಿನ ಆದ್ಮೇಲೆ ಈಗ್ಯಾಕೆ ನೋಡ್ಬೇಕನ್ನಿಸ್ತೋ ಗೊತ್ತಿಲ್ಲ. ಬಿಡುಗಡೆಯಾಗಿ ೬ವಾರ ಆದ್ಮೇಲೂ ಚಿತ್ರಮಂದಿರದ ತುಂಬಾ ಜನ ನೋಡಿ ಖುಷಿಯಾಯ್ತು. ನೋಡಿದೋರೆಲ್ಲ ಫೇಸ್ ಬುಕ್ಕಲ್ಲಿ "ನೋಡಿ. ಮಿಸ್ ಮಾಡ್ಬೇಡಿ" ಅಂತ ಹೇಳಿದ್ದು ಓದಿಯೇ ಹೋದ್ವೇನೋ. ಹುಡುಗಿಯೊಬ್ಬಳು ಐಟಂ ಸಾಂಗ್ ಥರ ಎಂಟರ್ಟೈನಿಂಗ್ ಸಂಭಾಷಣೆಗಳ ಸಿನಿಮಾ ಒಂದರ ವಿಮರ್ಶೆ ಬರೀತಿದ್ದಾಳೆಂದ ಮಾತ್ರಕ್ಕೇ ತಾವು ಪೂರ್ವಗ್ರಹಿಕೆ ಇಟ್ಟುಕೊಂಡು ನನ್ನ ಅಭಿಪ್ರಾಯ ಓದುವ ಅವಶ್ಯಕತೆಯಿಲ್ಲ ಅಷ್ಟೇ.
ನೀರ್ ದೋಸೆನೋ ಮಸಾಲ್ ದೋಸೆನೋ ಅಂತ ಟೈಟ್ಲೆ ಕನ್ಫ್ಯೂಸ್ ಆಗೋ ಮಟ್ಟಿಗಿನ ಸಂಭಾಷಣೆ. ಓಪನಿಂಗ್ ದೃಶ್ಯಗಳಲ್ಲೇ ಪಕ್ಕಾ ದ್ವಂಧ್ವಾರ್ಥಗಳು. ಆದ್ರೆ ದತ್ತಣ್ಣ-ಜಗ್ಗೇಶ್ ಸಿನಿಮಾ ನೋಡ್ತಾ ಹೋದಹಾಗೆಲ್ಲಾ ಇಷ್ಟವಾಗ್ತಾ ಹೋಗ್ತಾರೆ. "ಸಪೂರ ಕಟಿ" ನೋಡ್ತಾ ಇದ್ಯಾಕಿಂಥಾ ಪಾತ್ರಕ್ಕೆ ಹರಿಪ್ರಿಯಾ ಒಪ್ಪಿದ್ರೋ ಅನ್ನಿಸುತ್ತೋ, ಅದೇ ಪಾತ್ರದ ಪ್ರಾಮುಖ್ಯ ಮುಂದೆ ಅರಿವಾಗ್ತಾ ಹೋಗ್ತದೆ. ಸಾಧಾರಣ ಜನರನ್ನ ನೀರ್ ದೋಸೆಯ ಎಳೆಯಿಂದ ಕಟ್ಟಿಕೊಟ್ಟಿರುವ ಚಿತ್ರ ಇದು. ಎಷ್ಟು ನಗಿಸುತ್ತೋ ಅಷ್ಟೇ ಒತ್ತರಿಸುವ ಫೀಲ್ ತರುವ ನಾಲ್ಕಾದರೂ ಸಂದರ್ಭಗಳು. ದತ್ತಣ್ಣ ತನ್ನ ಅಕ್ಕನನ್ನು ನೆನೆಸಿಕೊಳ್ಳುವ, ಅರ್ಥಮಾಡಿಕೊಂಡಿರುವ, ಕರ್ಮಗಳನ್ನು ನೆರವೇರಿಸುವ ಪರಿ-touchy ಮತ್ತು ಅರ್ಥಪೂರ್ಣ. ಜಗ್ಗೇಶ್ ಗೆ ತನ್ನ ತಂದೆಯೊಡನಿರುವ ಭಾವದ ನಂಟೂ ತಂದೆ-ಮಗನ ಮಧ್ಯೆ ಅಪರೂಪದ್ದು. ತಂದೆಯ ಪುಟ್ಟಪುಟ್ಟ ಆಸೆಗಳನ್ನೂ ಮರೆಯದೆ ನೆಮ್ಮದಿಯಾಗಿ ಕೊನೆ ಕ್ಷಣಗಳನ್ನು ಕಳೆವಂತೆ ಮಾಡುವುದು, ಕ್ಯಾಬರೆ ಡ್ಯಾನ್ಸರ್ ಹರಿಪ್ರಿಯಾಳ ಗತವನ್ನು ಕೆದಕದೆ ಆ ಸ್ವೇಚ್ಛೆಯ ಪಾತ್ರಕ್ಕೂ ನೀಡಿರುವ ಮಾನವೀಯ ಮೆರುಗು, ಮೂಲಾ ನಕ್ಷತ್ರದಲ್ಲಿ ಹುಟ್ಟಿ ಮೂವತ್ತಾರಾದರೂ ಮದುವೆಯಾಗದೆ ಉಳಿದು ಜಗ್ಗೇಶ್ ನನ್ನು ಇಷ್ಟಪಡುವ ಸುಮನ್ ಹಾಗು ಏನೇ ಆದರೂ ಹೆಣದ ಗಾಡಿಯ ಚಾಲಕನಿಗೆ ಮದುವೆ ಮಾಡಲಿಚ್ಛಿಸದೆ ಜಗ್ಗೇಶ್-ಹರಿಪ್ರಿಯಾ-ದತ್ತಣ್ಣನ ಗುಂಪು ಕಂಡು ಗಲಿಬಿಲಿಯಾಗಿ ಹೌಹಾರುವ ಅವಳ ಅಪ್ಪ - ಎಲ್ಲವೂ ಸರಳ ಸಂಬಂಧಗಳ ಜಟಿಲ ವ್ಯಕ್ತಿತ್ವಗಳಿಂದೇರ್ಪಡುವ ನವಿರು ಹಾಸ್ಯದ ಕಥೆ-ಅಗತ್ಯ ದ್ವಂದ್ವ ಸಂಭಾಷಣೆ. ಕಳೆದು ಹೋಗ್ತಿರೋ ಮಾನವೀಯ ಸಂಬಂಧಗಳನ್ನ, ಬದುಕಿನಲ್ಲಿ ಹತ್ತಿರವಾಗುವ ಜನಗಳನ್ನ ಹೇಗೆ ಸಹಜವೆನ್ನುವಂತೆ, ಸಂಬಂಧಗಳ ಮೌಲ್ಯ ಹಾಸ್ಯದಲ್ಲೂ ಉಳಿಸಿಕೊಂಡು ಬದುಕೋ ಸರಳತೆ ತೋರಿಸಿಕೊಡೋ ಸಿನಿಮಾ ಇದು.
ಕಥೆಯ ಓಘ ಒಂದೇ ಸಮನಾಗಿಲ್ಲ. ಕೆಲವು ಕಡೆ ಅನಾವಶ್ಯಕವೆನ್ನಿಸುವಷ್ಟು ಉದ್ದದ ದೃಶ್ಯಗಳು. ಆದರೆ ಎಲ್ಲಕಡೆಯೂ ಸಿನಿಮಾ ಪ್ರೇಕ್ಷಕರ ಆಸಕ್ತಿ ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. ನಿರೂಪಣೆಯೇ ಈ ಚಿತ್ರದ ಬಂಡವಾಳ. ಅಲ್ಲಿಗೆ ಕಥೆಯ ಪೂರ್ಣ ಹೆಚ್ಚುಗಾರಿಕೆ ವಿಜಯ ಪ್ರಸಾದ್ ಗೇ ಸಲ್ಲಬೇಕು. ದತ್ತಣ್ಣ ಅಂತೂ ಸಿಂಪ್ಲಿ ಸುಪರ್ಬ್. ಕಲಾವಿದರೆಲ್ಲರೂ ತಂತಮ್ಮ ಪಾತ್ರಗಳಲ್ಲಿ ಛಾಪೊತ್ತುತ್ತಾರೆ.
ಕೊನೆಗಂತೂ ನೀರ್ ದೋಸೆ ನೋಡಿದೋರ್ಯಾರಿಗೂ ಸಿನಿಮಾ ನಿರಾಸೆ ಅಂತೂ ಮಾಡೋದಿಲ್ಲ. ಮುಜುಗರ ತರಿಸುವ ಸಂಭಾಷಣೆಗಳೆಲ್ಲಾ ಕೊನೆಕೊನೆಗೆ ಇವು ಈ ಸಿನಿಮಾಗೆ ಅವಶ್ಯಕ ಅನ್ನಿಸುವಂಥಾ ಚಿತ್ರ. ನನ್ನ ಹಾಗೆ A ಸಂಭಾಷಣೆಗಳು ಅನ್ನುವ ಕಾರಣಕ್ಕೇ ಇನ್ನೂ ನೋಡದಿರೋ ಮಂದಿ ಇದ್ರೆ, ಆದಷ್ಟ್ ಬೇಗ ನೋಡಿ ಬನ್ನಿ. ಶುರುವಿನಲ್ಲಿ ಅತಿರೇಕ ಅನ್ನಿಸಿದರೂ ಸಿನಿಮಾ ಇಷ್ಟವಾಗದಿರಲು ಕಷ್ಟಸಾಧ್ಯ.
No comments:
Post a Comment