ಮಹದಾಯಿ ಹೋರಾಟವಿನ್ನೂ ಹಸಿಯಾಗಿರುವಾಗಲೇ ಕಾವೇರಿ ನೀರಿಗಾಗಿ ಮತ್ತೊಮ್ಮೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಮರ ಶುರುವಾಗಿದೆ. ನೆನ್ನೆಯಿಂದ whatsapp ನಲ್ಲಿ ಮತ್ತೆ ಕುಹಕಗಳು, ರಾಜಕಾರಣಿಗಳ ಕುರಿತ ವಕ್ರೋಕ್ತಿಗಳು ಹರಿದಾಡುತ್ತಿವೆ. ನಮ್ಮ ಮನೆಯ ಮಕ್ಕಳು ಹಸಿದಿರುವಾಗ ಪಕ್ಕದ ಮನೆಯವರಿಗೆ ಉಣಿಸಲು ಬಡಿದಾಡಬೇಕಾಗಿರುವ ಹೀನತನ ನೋಡಿ ರೈತರಿಗೆಲ್ಲ ಕಣ್ಣೀರಿನ ಬದಲು ಸರ್ಕಾರ, ಆಡಳಿತ, ನ್ಯಾಯಾಲಯದೆಡೆಗಿನ ತಿರಸ್ಕಾರವೇ ಹೆಚ್ಚಾಗಿ ಬಂಡಾಯವೇಳುವಂತೆ ಮಾಡಿದೆ.
ಪೂರ್ಣಚಂದ್ರ ತೇಜಸ್ವಿಯವರು ಎಂದೋ ಹೇಳಿದ "ಯಾವುದೇ ಭೂಭಾಗಕ್ಕೆ ಅದರದ್ದೇ ಆದ ಅನುಕೂಲ ಹಾಗು ಅನಾನುಕೂಲಗಳಿರುತ್ತವೆ. ಅಲ್ಲಿಯ ನೈಸರ್ಗಿಕ ಸಂಪತ್ತಿನ ಒಡೆತನ ಮತ್ತು ಅದರ ಮೊದಲ ಬಳಕೆಯ ಹಕ್ಕು ಆಯಾ ಪ್ರದೇಶದ ಜನ ಸಮುದಾಯದ್ದಾಗಿರುತ್ತದೆ. ಭೂಮಿಯೊಳಗಿನ ಖನಿಜ ಸಂಪತ್ತು, ಭೂಮಿಯ ಮೇಲಿನ ಅರಣ್ಯ ಉತ್ಪನ್ನಗಳು ಹೇಗೆ ಆಯಾ ಸರ್ಕಾರದ ಆಸ್ತಿಯೋ ಹಾಗೆಯೇ ಆಯಾ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಹರಿಯುವ ನೀರಿಗೂ ಆ ಪ್ರದೇಶದ ಜೀವ ವೈವಿಧ್ಯವೇ ಪ್ರಥಮ ಹಕ್ಕುದಾರನಾಗಿರುತ್ತಾನೆ. ಹಾಗಾಗಿ ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ಮೇಲಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ" ಎಂಬ ಮಾತು ಸುಪ್ರೀಂ ಕೋರ್ಟ್ ಮನಗಾಣಲು ಇನ್ನೆಷ್ಟು ಕಾಲ ಬೇಕೋ ತಿಳಿಯೆವು.
ಏತನ್ಮಧ್ಯೆ ಏಳುವ ಪ್ರಶ್ನೆಯೆಂದರೆ- ಮೈಸೂರು, ಮಂಡ್ಯ, ಬೆಂಗಳೂರಿನವರೆಗಿನ ಜನರೆಲ್ಲಾ ತಮಗೆ ಉಪಯೋಗಿಸಿಕೊಳ್ಳಲು ದಕ್ಕುತ್ತಿರುವ ಕಾವೇರಿ ನೀರನ್ನು ಸಮರ್ಥವಾಗಿ ಪೋಲಾಗದಂತೆ ಬಳಸಿಕೊಳ್ಳುತ್ತಿದ್ದಾರೆಯೇ? ಅನ್ನುವುದು. ನದಿಯ ನೀರುಬಳಕೆ ಬಿಡಿ, ತಮಗೆ ಬೆಳೆ ಬೆಳೆಯಲು ನೀರು ಸಾಲುತ್ತಿಲ್ಲವೆನ್ನುತ್ತಿರುವ ಎಷ್ಟು ರೈತರು ತಂತಮ್ಮ ಹೋಬಳಿ, ತಾಲ್ಲೂಕುಗಳಲ್ಲಿ ನೆರೆಹೊರೆಯ ರೈತರನ್ನು ಒಗ್ಗೂಡಿಸಿಕೊಂಡು ನೀರು ಸಂಗ್ರಹಣಾ ಪ್ರದೇಶಗಳಲ್ಲಿ (catchment area) ಮಳೆನೀರು ಹಾಗು ಪೋಲಾಗುವ ಕಾಲುವೆ ನೀರನ್ನು ಉಳಿಸಲು ಪುಟ್ಟ ಕೆರೆಗಳಂಥಾ ಪ್ರಯತ್ನ ಕೈಗೊಂಡಿದ್ದಾರೆ ಎನ್ನುವುದು. ಈ ಮಳೆ ಕುಯ್ಲು ರೈತರು ಹಾಗು ಸರ್ಕಾರ ಇಬ್ಬರೂ ಕೈಜೋಡಿಸಿ ಮಾಡಬೇಕಾಗಿರುವಂಥದ್ದು. ರೈತ ಸಮುದಾಯವೊಂದಕ್ಕೇ ಇದು ಅಸಾಧ್ಯ. ಎಲ್ಲೆಲ್ಲಿ ತಗ್ಗು ಪ್ರದೇಶಗಳಿವೆಯೋ ಅವನ್ನು ಗುರುತಿಸಿ ಅಲ್ಲೆಲ್ಲ ನೀರು ಸಂಗ್ರಹಣೆಗೆ ಕ್ರಮ ತೆಗೆದುಕೊಳ್ಳಬೇಕಾದದ್ದು ಅತ್ಯವಶ್ಯ.
ಇದರೊಡನೆ, ಕೃಷಿ ಅಧಿಕಾರಿಗಳಿಗೆ ರಸಗೊಬ್ಬರ, ರಾಸಾಯನಿಕಗಳನ್ನು ಇಂತಿಷ್ಟು ಮಾರಲೇ ಬೇಕೆಂಬ ಟಾರ್ಗೆಟ್ ಬದಿಗೊತ್ತಿಸಿ ನೀರು ಹಾಗು ಇತರೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಬೇಕಾದ್ದು ಅನಿವಾರ್ಯ;ಅವಶ್ಯ.
ನೀರು ಕಾಪಾಡಿಕೊಳ್ಳುವತ್ತ ನಮ್ಮ ಆಸ್ಥೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಆಸ್ಥೆ ಇರುವ ಸಂಪನ್ಮೂಲಗಳ ಬಳಕೆಗೆ ನೀಡಬೇಕಾಗಿದೆ. ಕಾವೇರಿ ಹೋರಾಟವನ್ನ ರಾಜಕೀಯಕ್ಕೆ ಮಾತ್ರ ಬಳಸಿಕೊಂಡು ಕಡೆಗೆ ರೈತ ಮತ್ತೆ ನಿರ್ಲಕ್ಷಿತನಾಗದೇ ಇರಲಿ. ಸುಪ್ರೀಂ ಕೋರ್ಟಿಗಲೆಯುವುದು ಮಾತ್ರ ವಕೀಲರ ಕೆಲಸವಾಗದೆ ಶೀಘ್ರ ತೀರ್ಪಾಗುವತ್ತ ಗಮನ ಕೊಟ್ಟರೆ ಒಳ್ಳೆಯದೇನೋ. ಎಲ್ಲರೂ ಬಂಗಾರಪ್ಪನವರನ್ನು ನೆನೆಸಿಕೊಂಡು ಆಗ ಸುಗ್ರೀವಾಜ್ಞೆ ಹೊರಡಿಸಿ ತಮಿಳು ನಾಡಿಗೆ ಸುಖಾಸುಮ್ಮನೆ KRS ಬತ್ತಿದ್ದರೂ ಮೆಟ್ಟೂರು ಜಲಾಶಯಕ್ಕೆ ನೀರು ಹರಿಸುವುದನ್ನು ಧಿಕ್ಕರಿಸಿದನ್ನು ಕೊಂಡಾಡುವಾಗ ಸರ್ಕಾರದ ಜವಾಬ್ದಾರಿ ಕಣ್ಣಿಗೆ ರಾಚುತ್ತಿದೆ. ಬಂದ್ ನಂತರ ಮುಂದಿನ ಪರಿಣಾಮ ಏನಾಗುತ್ತದೆ, ಕಾದು ನೋಡುವುದೊಂದೇ ಮಾರ್ಗ!
No comments:
Post a Comment