Sunday, February 1, 2015

ಅಭಿನೇತ್ರಿ : ಸಿನಿಮಾ ವಿಚಾರ

ಆ ಕಣ್ಮಣಿಯ ಜೀವನವೇ ಒಂದು ಅಶ್ರುಧಾರೆ. ನೋವು ತಿಂದು ಚಿತ್ರರಂಗಕ್ಕೆ ಒಳ್ಳೆಯ ಅಭಿನಯ ನೀಡಿ ಚಿರಸ್ಥಾಯಿಯಾದವರು ಕಲ್ಪನಾ. ಇಲ್ಲಿ ಪೂಜಾ ಗಾಂಧಿ ಪ್ರತಿಯೊಮ್ಮೆ ಪರದೆಯ ಮೇಲೆ ಬಂದಾಗಲೂ ಕಲ್ಪನಾ ಕಂಡಂತಾಗುತ್ತದೆ. ಆಕೆಯ ಮುಗ್ಧತೆ, ಆಕೆಯ ಸೆಡವು, ಆಕೆಯ ಯಾತನೆಯ ಕಡೆಯ ಪತ್ರ- ಎಲ್ಲವೂ ಆಕೆಯನ್ನೇ ಕಣ್ಮುಂದೆ ತರುತ್ತವೆ. ಬಹಳಷ್ಟು ನಿರೀಕ್ಷೆ ಮೂಡಿಸಿದ್ದ, ಹಲವಾರು ವಿವಾದಗಳಿಗೂ ಕಾರಣವಾಗಿದ್ದ ಅಭಿನೇತ್ರಿ ಅಂತೂ ತೆರೆ ಕಂಡಿದೆ. ಪೋಸ್ಟರ್ ನೋಡಿಯೇ ಚಿತ್ರದ ಬಗೆಗಿನ ನಿರೀಕ್ಷೆ ಇನ್ನೂ ಹೆಚ್ಚಾಗುತ್ತದೆ. ಮಿನುಗುತಾರೆ ಕಲ್ಪನಾರ ಜೀವನವನ್ನಾಧಾರಿಸಿದ ಚಿತ್ರ ಎಂದಮೇಲೆ ಅಲ್ಲಿ ಕಥೆಯನ್ನು ಯಥಾವತ್ ಚಿತ್ರಿಸುವ ಅನಿವಾರ್ಯತೆ ನಿರ್ದೇಶಕನ ಹೆಗಲೇರುತ್ತದೆ. ಅದೊಂದು ಬೃಹತ್ ಜವಾಬ್ದಾರಿ ಕೂಡ. ಈ ಪ್ರಯತ್ನಕ್ಕೊಂದು ಸಲಾಂ. ಆ ಜವಾಬ್ದಾರಿ ನಿಭಾಯಿಸುವಲ್ಲಿ ನಿರ್ದೇಶಕ ಸೋತಿಲ್ಲವಾದರೂ ಸಂಪೂರ್ಣ ಗೆಲ್ಲಲಾಗಿಲ್ಲ.

ಪ್ರತಿಯೊಬ್ಬ ಪಾತ್ರಧಾರಿಯೂ ತಮ್ಮ ಭಾಗವನ್ನು ಜೀವ ತುಂಬಿ ನಿಭಾಯಿಸಿದ್ದಾರೆ. ಸಣ್ಣ ದೃಶ್ಯಗಳಲ್ಲಿ ಬಂದು ಹೋಗುವ ರಮೇಶ್ ಭಟ್, ನೀತು, ಶ್ರೀನಗರ ಕಿಟ್ಟಿ, ಆರತಿ ಪಾತ್ರಧಾರಿ- ಇವರದೆಲ್ಲ ನೆನೆಯುವಂಥ ನಟನೆ. ಅತುಲ್ ಕುಲಕರ್ಣಿ ಹಾಗು ರವಿ ಶಂಕರ್ ಅಭಿನಯದಲ್ಲಿ ಸಹಜತೆಯಿಂದ ಮನಗೆಲ್ಲುತ್ತಾರೆ. ಮನೋಮೂರ್ತಿ ಸಂಗೀತ ಮಧುರವಾಗಿದೆ.

ನವರಸ ಅಭಿವ್ಯಕ್ತಿಯಲ್ಲಿನ ದೃಶ್ಯ, ಶರಪಂಜರದ ಕಾವೇರಿಯ ಅಭಿನಯ, ಕನ್ನಡಿಯ ಮುಂದೆ ಮೈಮರೆತು ನಿಂತು ಸಿನಿಮಾ ಡೈಲಾಗ್ ಹೇಳುವ ಧಾಟಿಗಳಲ್ಲಿ ಪೂಜಾ ಗಾಂಧೀ ಪರಿಶ್ರಮ ಸಾರ್ಥಕವಾಗಿದೆ. ಬೇರೆಲ್ಲಾ ಕಡೆಯಲ್ಲೂ ಮಿನುಗುತಾರೆಯ ಹಾವಭಾವವನ್ನು ಬಹುಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸಿದರೂ ಮಾತಿನ ವಾಯ್ಸ್ ಮಾಡ್ಯುಲೇಶನ್ ನಲ್ಲಿ ಹಲವಾರು ಬಾರಿ ಸಪ್ಪೆಯೆನಿಸಿಬಿಡುತ್ತಾರೆ. ಧ್ವನಿಯಲ್ಲಿನ ಮಾದಕತೆಯ ಕೊರತೆ ಬಹುವಾಗಿ ಕಾಣುತ್ತದೆ. ಆದರೆ ಹುಟ್ಟು ಕನ್ನಡಿಗಳಲ್ಲದಾಕೆ ಬೇರೆಯ ಡಬ್ಬಿಂಗ್ ಧ್ವನಿಯನ್ನು ಬಳಸದೇ ಕನ್ನಡ ಸ್ಫುಟವಾಗಿ ಆಡಿರುವುದು ಶ್ಲಾಘನೀಯ.


ನಿರೀಕ್ಷೆಗಳ ಮಹಾಪೂರವನ್ನು ತಣಿಸಬಂದು ಪ್ರೇಕ್ಷಕರ ಕಣ್ಗಳನ್ನೊದ್ದೆ ಮಾಡುವಲ್ಲಿ ಮಾತ್ರ ಚಿತ್ರ ಯಶಸ್ವಿಯಾಗಿದೆ. ವಿರಾಮದ ನಂತರದ ಕಥೆಗೊಂದು ಓಘವಿಲ್ಲ. ಸಹ ಪ್ರೇಕ್ಷಕರು ಆಕಳಿಸುತ್ತಾ ಕೂರುವ, ಅಕ್ಕಪಕ್ಕದವರು ಎದ್ದು ಹೋಗುವುದನ್ನು ನೋಡಬೇಕಾದ, ಜೊತೆಯಲ್ಲಿ ಬಂದವರ “Whats this yaar?” ನೋಟವನ್ನು ಸಹಿಸುತ್ತಾ ಸಿನಿಮಾ ನೋಡಬೇಕಾದ ಸಂದರ್ಭ ಸೃಷ್ಟಿಯಾಗಿ ಬಿಡುತ್ತದೆ. ಕಲ್ಪನಾರ ಪಾತ್ರಕ್ಕೆ ರಮ್ಯಾ ಇನ್ನೂ ಹೆಚ್ಚಿನ ಪರಕಾಯ ಪ್ರವೇಶ ಮಾಡಿ ನ್ಯಾಯ ಸಲ್ಲಿಸುತ್ತಿದ್ದರೇನೋ, ಇದು ಬರಿಯ ಕಲಾತ್ಮಕ ಚಿತ್ರಗಳ ಸಾಲಿಗೆ ಸೇರಿ ಪ್ರಶಸ್ತಿ ಭಾಜನ ಮಾತ್ರವಾಗದೆ ಮಾಸ್ ಹಿಟ್ ಆಗುತ್ತಿತ್ತೇನೋ ಅಂತ ಅನ್ನಿಸಿದ್ದು ಮಾತ್ರ ಸುಳ್ಳಲ್ಲ.

2 comments:

ranju said...

sup...ಆದ್ರೆ ಯಾವ್ದೋ ಇಂಟರ್ವ್ಯೂ ಲಿ ಇದು ಕಲ್ಪನಾ ರ ಜೀವನ ಅಲ್ಲ,,.ಎಲ್ಲ 70 's ನಾಯಕಿಯರ ಜೀವನದ ತುಣುಕುಗಳನ್ನಆಧರಿಸಿ ಮಾಡಿದ್ದು ಅಂತೆಲ್ಲ ಹೇಳಿದ ಹಾಗಿತ್ತು.... ಹೌದ?

Suprabha S M said...

houdu.. adella summane ashte. Its clear in the movie..