Monday, December 29, 2014

ನಾನೊಬ್ಬ ಹಿಂದೂವಾದಿ. ಆದರೂ PK ಇಷ್ಟವಾಗಿದ್ದಾನೆ

PK ಅನ್ನೋ ಸಿನಿಮಾ ಬಿಡುಗಡೆಯಾಗಿದೆ. ಆಮೀರ್ ಖಾನ್ ಚಿತ್ರ ಅಂತ ಜನರೆಲ್ಲಾ ಮುಗಿಬಿದ್ದು ನೋಡ್ತಿದ್ದಾರೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೀತಿದೆ ಚಲನಚಿತ್ರ.

ಈ ಮಧ್ಯದಲ್ಲೊಂದು ಧರ್ಮದ ಕುರಿತ ಮಾರ್ಮಿಕ ಚರ್ಚೆ. ಇತರೆ ಧರ್ಮಗಳಿಗಿಂತ ಹೆಚ್ಚಾಗಿ ಹಿಂದೂ ಧಾರ್ಮಿಕ ಆಚರಣೆಗಳನ್ನ ಮಾತ್ರ ಅಲ್ಲಗೆಳೆಯಲಾಗಿದೆ, ಅವಹೇಳನಕಾರಿಯಾಗಿ ಬಿಂಬಿಸಿದ್ದಾರೆ, ಅನ್ನೋದು ಚರ್ಚೆಯ ಒಂದು ಮಗ್ಗುಲಾದ್ರೆ, ಪಾಕಿಸ್ತಾನಿ ಯುವಕ ಭಾರತೀಯ ಹಿಂದುವನ್ನು ಪ್ರೀತಿಸಿ ಮೋಸಮಾಡಿದ ಅಂದುಕೊಂಡಾತ  ಆಕೆಗೆ ಕೊನೆಗೆ ಸಿಕ್ಕಿಬಿಡೋದ್ರಿಂದ, ಇದು ಲವ್ ಜಿಹಾದ್-ಅನ್ನು ಬೆಂಬಲಿಸುತ್ತೆ ಅನ್ನೋದು ಚರ್ಚೆಯ ಇನ್ನೊಂದು ಮಗ್ಗುಲು. 

ಗದರ್- ಚಿತ್ರ ಬಂದಿತ್ತು  ವರ್ಷಗಳ ಹಿಂದೆ. ಹೀಗೇ ಮುಗಿಬಿದ್ದು ನೋಡಿದ್ರು ಜನ. ಖಾನ್ ಗಳ್ಯಾರೂ ನಾಯಕನಾಗಿರದ ಚಿತ್ರ. ಪಾಕಿಸ್ತಾನ ಮತ್ತು ಭಾರತದ ವಿಭಜನೆಯ ಸಮಯದ ರಕ್ತಕಣ್ಣೀರಿನ ಚಿತ್ರಣ. ಜೊತೆಯಲ್ಲಿ ಪಾಕಿಸ್ತಾನೀ ಯುವತಿಯನ್ನ ಭಾರತೀಯ ಸಿಖ್ ಯುವಕನೊಬ್ಬ ಮದುವೆಯಾಗುವ ಕಥೆ. ಇದಕ್ಕೆ ಯಾಕೆ ಪ್ರತಿಭಟನೆಗಳು ನಡೀಲಿಲ್ಲ? ಓಹ್! ಲವ್ ಜಿಹಾದ್ ಅಂದ್ರೆ ಹುಡುಗ ಮುಸ್ಲಿಮನಾಗಿರಬೇಕಲ್ವೇ? ಷಾರುಖ್ ಖಾನ್ ಗೌರಿಯನ್ನ ಮದುವೆಯಾದದ್ದೂ ಲವ್ ಜಿಹಾದೇನೆ ಹಂಗಾದ್ರೆ? ಆಮೀರ್ ಖಾನ್ ತನ್ನ ಮೊದಲ ಹೆಂಡತಿಗೆ ತಲಾಖ್ ನೀಡಿ ವರಿಸಿದ್ದು ಕಿರಣ್ ಎಂಬಾಕೆಯನ್ನ. ಹಾಗಾದ್ರೆ ಅದೂ ಜಿಹಾದ್ ಬಿಡಿ. ಐಶ್ವರ್ಯಳನ್ನ ನೋಡಿ. ಎಚ್ಚೆತ್ತುಕೊಂಡ್ಳು. ಕೊನೆಗಾಕೆ ಸಲ್ಮಾನ್ ಖಾನ್ ಎನ್ನುವ ಜಿಹಾದಿಯ ಬಲೆಯಿಂದ ಅರುಗಾದಳು ಪಾಪ. ಹೆಸರಿಸ್ತಾ ಹೋದರೆ ಇಂಥಾ ಸೆಲಿಬ್ರಿಟಿ ಜೋಡಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಮ್ಮೆ ಅಂತರ್ಜಾಲ ಬೆದಕಿ ನೋಡಿ. 

ನಾನಿಲ್ಲಿ ಲವ್ ಜಿಹಾದ್ ಒಂದು ವ್ರಣವಲ್ಲ ಅಂತ ಹೇಳಲು ಹೊರಟಿಲ್ಲ. ಲವ್ ಜಿಹಾದ್ ನ ಕೋನದಲ್ಲಿ PKಯ ಜಗ್ಗು- ಸರ್ಫಾರಾಜ್ ರ ಪ್ರೇಮಕಥೆಯನ್ಯಾಕೆ ನೋಡೋಣ ಅಂತ ಕೇಳ್ತಿದ್ದೇನೆ. ಹಾಗಾದಲ್ಲಿ ಮುಸ್ಲಿಮರೂ PK ವಿರುದ್ಧ ಕೂಗಬೇಕು ಬಿಡಿ. ಜಗ್ಗುವಿನ ಒಂದು ಕರೆಗಾಗಿ ಸರ್ಫಾರಾಜ್ ಯಾಕಾಗಿ ವರ್ಷಗಟ್ಟಲೆ ಹಪಹಪಿಸುತ್ತಾ ಕಾದ? ಈಗಾಗಲೇ ಆ ಸಿನಿಮಾ ನೋಡಿರುವಿರಾದರೆ, ಆ ಪ್ರೇಮ ಕಥೆ ನಿಮ್ಮ ಮನದಲ್ಲಿ ಆರ್ದ್ರ ಭಾವ ಮೂಡಿಸಲೇ ಇಲ್ಲವೇ? ಕೋಮು ದ್ವೇಶವುಕ್ಕಿ ಮೂಗು ಕೆಂಪಗಾಗಿ ಕಣ್ಣಿಗೆ ರಕ್ತ ನುಗ್ಗಿದಂತಾಗಲಿಲ್ಲ ಯಾಕೆ? 

ಇದಕ್ಕೆ ಮುಂಚೆಯೂ ಪಾಕಿಸ್ತಾನದ-ಕಂಡರಿಯದ ಯಾವುದೋ ಮೂಲೆಯಿಂದ-ಬೆದಕಿ ನೋಡಿದರೂ ಸಿಕ್ಕದ- "ಅಂತಃಕರಣವಿರುವವರು" ತೆರೆಯ ಮೇಲೆ ಪಾತ್ರವಾಗಿ ಬಂದೇ ಇಲ್ಲವೇ? ಅಥವಾ ಒಂದು ಕಾಲ್ಪನಿಕ ಪಾತ್ರ ಬರಲೇ ಬಾರದೇ? ಸಿನಿಮಾ ನೋಡಿ ನಾವು ಮುಸ್ಲಿಮರು ಅದೆಷ್ಟು ಒಳ್ಳೆಯವರು ನೋಡಿ ಅಂತಂದುಕೊಂಡರೇನಡ್ಡಿ? ಐತಿಹಾಸಿಕವಲ್ಲದ ಕಾಲ್ಪನಿಕ ಚಿತ್ರಕ್ಕಷ್ಟು ಪ್ರಾಮುಖ್ಯ ಬೇಕಾ? 

ಇನ್ನು ಧರ್ಮ ಜಿಜ್ಞಾಸೆಯ ವಿಚಾರ. ಓಹ್ ಮೈ ಗಾಡ್ ಎನ್ನುವ ಚಲನಚಿತ್ರ ಬಹಳಷ್ಟು ಯಶಸ್ವಿಯಾಗಿತ್ತು. ಅದರಲ್ಲಿಯೂ ಧಾರ್ಮಿಕ ವಿಧಿಗಳನ್ನು ಚರ್ಚಿಸಲಾಗಿತ್ತು. ದ್ಹೊಂಗಿ ಗುರುಗಳ, ಭಕ್ತರ ಭಯವನ್ನು Encash ಮಾಡಿಕೊಳ್ಳುವ ಹಿಂದೂ ಗುರುಗಳ ಪಾತ್ರವೂ ಇತ್ತು. PK ಯಲ್ಲಿ ಹಲವಾರು ಮಾತುಗಳು, ದೃಶ್ಯಗಳು ಕೂಡ ಇದೇ ಚಿತ್ರದ ಪುನರಾವರ್ತನೆ ಎನ್ನಿಸುವುದು ಖಂಡಿತಾ. ನಿರೂಪಣೆ ಬದಲಾಗಿದೆಯಷ್ಟೇ. ಓಹ್ ಮೈ ಗಾಡ್ ಮೆಚ್ಚುಗೆಗ್ಯಾಕೆ ಪಾತ್ರವಾಯ್ತು ಮತ್ತೆ? ಪಾತ್ರಧಾರಿಗಳು ಹಿಂದೂಗಳೆಂದಲ್ಲವಷ್ಟೇ? ಬುದ್ಧಿಜೀವಿಗಳ ಮಾತು ಒತ್ತಟ್ಟಿಗಿರಲಿ. ಅನ್ಯಾಯವನ್ನ ಖಂಡಿಸಲೇಬೇಕು ಹಿಂದೂಗಳು. ಇಲ್ಲದೇ ಹೋದಲ್ಲಿ ಜಿಹಾದ್ ಎಲ್ಲೆಲ್ಲೂ ತಾಂಡವವಾಡಿ ಹಿಂದುತ್ವವನ್ನೇ ಮುಗಿಸಿಹಾಕುವ ದಾರ್ಷ್ಯ ತೋರಲು ಹವಣಿಸೀತು ಎಚ್ಚರ! 

ಆದರೆ ಒಂದು ಉದಾತ್ತ ಉದ್ದೇಶವುಳ್ಳ ಸಿನಿಮಾವನ್ನು ಕೋಮು ತಾರತಮ್ಯ ಮಾಡಿದೆಯೆಂದು ಅಪಾದಿಸೋದು ಎಷ್ಟು ಸರಿ? ದಯಮಾಡಿ ಆ ಚಿತ್ರವನ್ನೊಮ್ಮೆ ನೋಡಿ ವಿಮರ್ಶಿಸಿಕೊಳ್ಳಿ. ದೊಡ್ಡ ಸಮಸ್ಯೆಯೊಂದನ್ನ ಮೆಲುವಾಗಿ ಪ್ರಶ್ನಿಸಹೊರಟಿದೆ PK. ಉತ್ತರಿಸುವ ದಾರ್ಷ್ಯ ಎಲ್ಲೂ ತೋರಿಲ್ಲ. ವಿಮರ್ಶೆಗೊಳಪಡದ ಯಾವ ಧರ್ಮವೂ ಇಲ್ಲ PKಯಲ್ಲಿ. ಬೇರೆಯವರು ಹೇಳೋದನ್ನ, ಕಮೆಂಟಿದ್ದನ್ನ ನೋಡಿ PK ನೋಡದಿದ್ದರೆ ಅದರ ಗ್ಲೋಬಲ್ ಕಾನ್ಸೆಪ್ಟ್ ನಿಂದ ವಂಚಿತರಾಗುತ್ತೀರ. ನೋಡಿದಲ್ಲಿ ನಿಮ್ಮೊಳಗೊಬ್ಬ PK ಕಂಡು ಒಳಮನಸ್ಸಿಗೆ ಎಂದೋ ಗೋಚರವಾದ ಪ್ರಶ್ನೆಗಳಿಗೆ ಉತ್ತರ ತಡಕಿಕೊಳ್ಳುತ್ತೀರೇನೋ. ಎಲ್ಲಾ ಪೂರ್ವಾಗ್ರಹ ಮರೆತು PKಯನ್ನೊಮ್ಮೆ ನೋಡಿ, ಅದರಲ್ಲೊಬ್ಬರಾಗಿ ಜೀವಿಸಿ ಬನ್ನಿ ಅಂತ ನನ್ನ ವಿವೇಚನೆಯುತ ಪ್ರಾರ್ಥನೆ.

No comments: