Tuesday, October 15, 2013

ಸಂತಸದ ಶರಧಿ

ಅರಳುಗ‌‍‌ಣ್ಣಲಿ ನಿನ್ನ ನಗುವು
ತುಟಿಗಳಂಚಲಿ ಮಿಂಚಿ ತುಳುಕಿ
ಮೆಲ್ಲ ನಿನ್ನನು ದಾಟಿ ನಡೆದು
ನೋಡುಗರಿಗದು ಪಸರಿದೆ

ಮುಗುಳು ನಗುವಿನ ಮೂಕ ಭಾಷೆ
ಬಿಡದ ಅಳುವಿನ ನಿನ್ನ ಆಜ್ಞೆ
ಮಾತ ಹೊನಲನು ಹರಿಸಿದೆ

ಭವದ ಭಾಷ್ಯವ ಅಳಿಸಿ ಹಾಕಿ
ಪುಟ್ಟ ಮುಷ್ಠಿಯೊಳೆಮ್ಮ ಜಗವನು
ನಿನ್ನ ಸುತ್ತಲೆ ಕಟ್ಟಿ ಹಾಕಿ
ನಿನ್ನೊಳೆಮ್ಮನು ಬಿಗಿದಿರೆ

ಮೃದುವ ಪಾದದಿ ಮೀಟಲೆಮ್ಮನು
ನಿಜದ ಚಿಂತೆಗಳೆಲ್ಲ ಸ್ಪರ್ಶದಿ
ತಿಳಿಗೈದು ಲೀನಗೊಂಡಿದೆ

ಮುಗ್ಧತೆಯ ಪ್ರತಿರೂಪ ನಿನ್ನನು
ಮಾತ ಮರೆತೆಮ್ಮೆಲ್ಲ ಜೀವಕು
ತಣ್ಪ ಶರಧಿಯ ತೋರಲೆಂದೇ
ದೇವ ನಿನ್ನನು ಕಳಿಸಿಹ

ಯಶವು ಸಿಗಲಿ ಎನ್ನ ಕಂದನೆ
ನಿನ್ನ ನೆರಳು ಸೋಂಕೆ ಎಂದಿಗು
ಹಾಲುನಗುವೆ ಉಕ್ಕಲಿ

1 comment:

Badarinath Palavalli said...

ನಮ್ಮ ಹಾರೈಕಗಳನ್ನೂ ತಲುಪಿಓ ಜವಾಬ್ದಾರಿ ನಿಮಗೇ ಕೊಡುತ್ತಿದ್ದೇವೆ.

ಆ ದಿವ್ಯ ಪಾದದ ಸೋಕಿಗೇ ಪಾವನವೂ ನೂರು ಜನ್ಮವೂ!