Wednesday, July 3, 2013

ಹನಿ

ಕತ್ತಲಲ್ಲು ಪ್ರೀತಿ ಹೊಳಪ ಕಾಯ್ದುಕೊಂಡಿರೆ
ಚಿಲುಮೆ ಕಂಡ ತೆರದಿ ಬಾಹು ತಾನು ಬಿಡಿಸಿರೆ
ಮಿಂಚಿನ ನಗೆ ಸಂಚು ತೋಳ ಚಾಚಿ ಕಾದಿರೆ
ತಬ್ಬಿಕೊಳಲು ಹೋದರದುವೆ ಮಾಯವಾಗಿದೆ
ಇನಿಯನೆಂದುಕೊಳಲು ಬರಿಯ ದಿಂಬೆ ಸಿಕ್ಕಿದೆ!!!!!

Monday, July 1, 2013

ಗಾಳ

ಮಾಯದಾ ಮಾತಾಡಿ ಮರುಳಾಗಿ ಹದಗೊಳಲು ವಿಷವ ಉಣಿಸುವರೆಲ್ಲ
ವಿಷಯದಾ ಬಾಯಾರಿ ತಮ್ಮ ಚಪಲಕೆ ಗುರಿ ಯಾರಾದರೂ ಅಚ್ಚರಿಯಿಲ್ಲ
ಸತ್ಯವಾ ಸುಳ್ಳೆನಿಸಿ, ಮಾತಿನಾ ಮುಸುಗೆಳೆದು ಮತಿ ಮಂಕುಗವಿಯಿತಲ್ಲ;

ಅರಗಿನರಮನೆ ಗಿಣಿಗೆ ಪಂಜರವೆಂಬುದರಿವಾಗಿಯೇ ಇಲ್ಲ
ಪ್ರೀತಿಯಾ ದೂಡಿ ತನಗೇ ತಿಳಿವಿದೆಯೆಂದು ಬೀಗಿ ಹೊರಟಿತಲ್ಲ
ಸಂಗಾತಿಯಿಂದೆನ್ನ ದೂರವಿರಿಸಲು ಎಲ್ಲ ಕಪಟಯೆಂದರಿಯದಲ್ಲ;

ದೂರವಾಗಿಹ ಸಂಗಾತಿ ಎಂತು ದನಿಮಾಡಿದರೂ ಕೇಳಲೊಲ್ಲ;
ಇನಿದನಿಯ ನೆನೆವು ಕಾಡದೆ ಜೀವ ತತ್ತರಿಸಿ ಸೊರಗಲಿಲ್ಲ

ಬರುವಾಗ ಬರಲೆಂದು ಕೈಚೆಲ್ಲಿ ಸಂಗಾತಿ ಸಮಯ ದೂಡಿತಲ್ಲ..