Tuesday, May 31, 2022

ಕುಡಿಯರ ಕೂಸು - ಶಿವರಾಮ ಕಾರಂತ

ಕುಡಿಯರ ಕೂಸು
ಮಲೆಗಳಲ್ಲಿ ಮನತಣಿಯುವಂತೆ ತಡವುತ್ತ ಓಡಾಡುವ ಅನುಭವ ನೀಡುವ ಪುಸ್ತಕ - ಕುಡಿಯರ ಕೂಸು. ಕಾರಂತರು ಈ ಕಾದಂಬರಿಯಲ್ಲಿ ಸುಬ್ರಹ್ಮಣ್ಯದ ಬಳಿಯ ಹಿರಿಮಲೆ, ಕಿರಿಮಲೆಯ ಕುಡಿಯರ ಜೀವನ ಬಿಂಬಿಸುವ ಕಥೆ ಹೆಣೆದಿದ್ದಾರೆ. ಇದ್ದೊಬ್ಬ ಮಗನನ್ನೂ ಸೊಸೆಯನ್ನೂ ಕಳೆದುಕೊಳ್ಳುವ ಕೆಂಚಜ್ಜ ತನ್ನ ಮೊಮ್ಮಗು ಕರಿಯನನ್ನು ಬೆಳೆಸುವ ಕಥೆಯ ಜಾಡು ಹಿಡಿದು,  ಕರಿಯನ ಜೀವನ ಹೇಗೆ ರೂಪುಗೊಂಡಿತೆಂಬ ಬಗ್ಗೆ ಚಿತ್ರಣ ಕಟ್ಟಿಕೊಡುತ್ತ ಹೋಗುತ್ತಾರೆ ಕಾರಂತರು. 

ಏಲಕ್ಕಿ ಸೊಂಪಾಗಿ ಬೆಳೆಯುವ ಮಲೆಯ ಮೂಲ ನಿವಾಸಿಗಳೂ, ಅಲ್ಲಿನ ಮಲೆಯನ್ನು ಕೊಳ್ಳುವ ಧಣಿಗಳಿಗೆ ವಿಧೇಯರೂ ಆಗಿರುವ ಕುಡಿಯರು ಬಯನಿಯ ದಿಂಡು ತಿನ್ನುತ್ತಲೂ, ಗೆಡ್ಡೆ ಗೆಣಸು ಸೇವಿಸುತ್ತಲೂ, ಹರಿಯುವ ಜೀವನದಿಯ ತೊರೆಯಲ್ಲಿ ಮೀನು-ಏಡಿಗಳನ್ನು ಹಿಡಿದು, ಬೇಟೆಯಾಡಿ  ಜೀವನ ಮಾಡಲು ಬಲ್ಲರು. ಅವರ ಇತರೆ ಅವಶ್ಯಕತೆಗಳಿಗೆ ಮಲೆಯ ಧಣಿಗಳಿಂದ ಬರುವ ಹಚ್ಚಡ, ಉಪ್ಪು, ಚಿಮಣಿ ಎಣ್ಣೆಯೇ ಸಾಕೆನ್ನುವಂಥವರು. 

ಕಲ್ಲೊಂದಕ್ಕೆ ದೈವತ್ವವನ್ನು ಕೊಟ್ಟು ಆದರಿಸುವ ಮುಗ್ಧರು ತಮ್ಮ ಪೂಜಾರಿಯ ಮೈಮೇಲೆ ಬರುವ ಕಲ್ಕುಡ ದೈವಕ್ಕೆ ನೇಮದಿಂದಿರುತ್ತಾರೆ. ಇವರ ಜೀವನದಲ್ಲಿ ಕಲ್ಕುಡನ ಮಹಿಮೆ- ಆತನ ಒಲುಮೆಗಾಗಿ ಇವರೆಲ್ಲರ ನಿಷ್ಠೆ, ಇವೆಲ್ಲ ಕಲ್ಕುಡನು ಕಲ್ಲಿನಲ್ಲೋ, ಮೈದುಂಬುವ ಪೂಜಾರಿಯಲ್ಲೋ ಇಲ್ಲದೆ, ತಂತಮ್ಮ ಮನದ ಒಳಗಣ ತಿಳಿವಾಗಿ ತೋರುವುದು ಸುಸ್ಪಷ್ಟ.

ಮಳೆಗಾಲದಲ್ಲಿ ಕಾಡು ಸವರಿ ಕುಮರಿಯಲ್ಲಿ ಭತ್ತದ ಬೇಸಾಯ ಮಾಡುವ, ಉಳಿದಂತೆ ಹಲವು ಉರುಳುಗಳನ್ನು ಒಡ್ಡಿ ಬೇಟೆಯಾಡುವ ಇವರು ಒಬ್ಬರಿಟ್ಟ ಉರುಳಿಗೆ ಬಿದ್ದ ಪ್ರಾಣಿಯನ್ನು ಇನ್ನೊಬ್ಬರು ಕದಿಯಲು ಕೈ ಹಾಕದ ನಿಯಮದವರು. ಎಲ್ಲ ಮನುಷ್ಯರಂತೆಯೇ ಮಸೆಯುವ ಮಾತ್ಸರ್ಯ, ಅಧಿಕಾರದ ಆಸೆ ಇವರ ಜೀವನದಲ್ಲಿ ತಿರುವುಗಳನ್ನು ತರುತ್ತ ಮನೋರಂಜಕ ಅಧ್ಯಾಯಗಳನ್ನು ತೆರೆಯುತ್ತ ಹೋಗುತ್ತದೆ.

ಈ ಪುಸ್ತಕದಲ್ಲಿ ಮೂಡಿರುವ ನಿಸರ್ಗದ ವರ್ಣನೆ, ಕಾಡಿನ ಉತ್ಪನ್ನಗಳ ವರ್ಣನೆ, ಆನೆಗಳ ನಡವಳಿಕೆ, ಕರಡಿಯ ಬೇಟೆ,  ನರಭಕ್ಷಕವಾಗುವ ಚಿರತೆಯ ಬೇಟೆ, ಇವ್ಯಾವುವೂ ಉದ್ದೇಶಪೂರ್ವಕವಾಗಿ ತೋರದೆ, ಕಥೆಗೆ ಪೂರಕವಾಗಿ ಎಂದು ಮಾತ್ರ ಕಾಣುವುದೇ ಈ ಕಥೆಯ ಅಂದವನ್ನು ಇನ್ನೂ ಹೆಚ್ಚಿಸಿವೆ. 

ಇಲ್ಲಿ ಮೂಡಿ ಬಂದಿರುವ ಕುಡಿಯರ ಸರಳ ಜೀವನ, ಕನಿಷ್ಠ ಅವಶ್ಯಕತೆಗಳ ಬಗ್ಗೆ ಓದುವ ಈಗಿನ ಪೀಳಿಗೆಗೆ ಆಗಿನ ಸರಳತೆಯೇ, ಅವರ ಸ್ವಾವಲಂಬಿ ಜೀವನವೇ ಒಂದು ಕೌತುಕವಾಗಿ ಕಂಡು ಪುಸ್ತಕ ನಿರರ್ಗಳವಾಗಿ ಓದಿಸಿಕೊಂಡು ಹೋಗುವುದರಲ್ಲಿ ಸಂದೇಹವಿಲ್ಲ. 

No comments: