Thursday, August 6, 2015

ರಂಗಿತರಂಗ: ವಿಮರ್ಶೆಯಲ್ಲ; ಮೆಚ್ಚುಗೆ

ಬಣ್ಣದ ಅಲೆಗಳು- ರಂಗಿತರಂಗ. ತುಳುನಾಡ ಸೀಮೆಯ ಮಳೆಯಲ್ಲಿ ತೊಳೆದು ಬಣ್ಣ ಬಳಿದಂತಿರುವ ಹಚ್ಚ ಹಸಿರು, ಬ್ರಹ್ಮರಾಕ್ಷಸ ವಾಸವಾಗಿರುವ ನಂಬಿಕೆ ಉಳಿಸಿಕೊಂಡ ಆ ಸಿರಿ ಮೊಳಕೆಗಳು ಇಣುಕುವ ತಳಗಾಣದ ಬಾವಿ, ಯಕ್ಷಗಾನದ ಸದ್ದು -ಇವುಗಳಲ್ಲಿ ಅದ್ದಿ ತೆಗೆದ ಸವಿ ಈ ಚಲನಚಿತ್ರಕ್ಕೆ. ಅನುಪ್ ಭಂಡಾರಿ ಇದರ ನಿರ್ದೇಶನ ಮತ್ತು ಹಾಡುಗಳ ಸೂತ್ರಧಾರರು. ಈ ಇಲೆಕ್ಟ್ರಾನಿಕ್ ಯುಗದಲ್ಲಿ ನಾವೆಲ್ಲಾ ಮರೆತೇ ಬಿಟ್ಟಿರುವ Post- ಕರೆವ-ಓಲೆ --ಕರೆಯೋಲೆಯ ಬಗ್ಗೆ ಹಾಡು ಕೇಳಲು ಇಂಪು- ಅರ್ಥಗರ್ಭಿತ. ಅರ್ಥ ಕಳೆದುಕೊಂಡರೂ ಜನಪ್ರಿಯವಾಗಲೇಬೇಕೆಂಬ ಹಟಕ್ಕೆ ಬಿದ್ದವರಂತೆ, ಮನಸ್ಸಿಗೆ ತೋಚಿದ್ದನ್ನೆಲ್ಲಾ ಗೀಚಿ ಅದೇ ಸಾಹಿತ್ಯವೆನ್ನುವ ಪರಮ ಅಸಹ್ಯಿಗಳ ಮಧ್ಯೆ ಅನುಪ್ ಭಂಡಾರಿಯ ಸಾಹಿತ್ಯ (ಉದಾಹರಣೆ:"ಕರದಲ್ಲಿ ಕಲಮಾ ಹಿಡಿದು ಕರಿಶಾಹಿ ಬರೆದೋಲೆ") ತೊಳೆದ ಮುತ್ತಿನಂತೆ ಕಾಣುವುದು ಸತ್ಯ. ಇತರೆ ಹಾಡುಗಳೂ ಮತ್ತೆ ನೆನೆಸಿಕೊಂಡು ಗುನುಗುವಂತಿವೆ.

ರಂಗಿತರಂಗ ಅನ್ನುವುದು ಅನಷ್ಕು ಹೆಸರಿನಲ್ಲಿ ಕಥಾನಾಯಕ ಹೊರತರಬೇಕೆಂದಿರುವ ಕಾದಂಬರಿ. ಕಮರೊಟ್ಟು ಅನ್ನುವ ನಾಲ್ಕಾರು ಮನೆಗಳ ಊರಿಗೆ ಹೆಂಡತಿಯೊಂದಿಗೆ ಬರುವ ನಾಯಕ ಅಲ್ಲಿನ ಪೋಸ್ಟ್ ಮಾಸ್ಟರ್ ಮತ್ತು ಹೈಸ್ಕೂಲ್ ಹೆಡ್ ಮಾಸ್ತರರೊಂದಿಗೆ ಗೆಳೆತನ ಮಾಡುತ್ತಾನೆ. ಬಂದ ಕ್ಷಣದಿಂದಲೂ ಅಧೀರಗೊಳಿಸುವ ಘಟನೆಗಳು ಕಮರೋಟ್ಟುವಿನಲ್ಲಿ ನಡೆಯುತ್ತಲೇ ಇರುತ್ತವೆ. ಆ ಗ್ರಾಮದಲ್ಲಿ ಇರುವ ಪ್ರಭಾವಿ ವ್ಯಕ್ತಿಗಳ ವಿರೋಧವನ್ನೂ ನಾಯಕ ಗೌತಮ್ ಎದುರಿಸಬೇಕಾಗುತ್ತದೆ. ಮುಂದೇನಾಗುತ್ತೆ? - ನೋಡಿ ತಿಳೀರಿ. 

ಇತ್ತೀಚಿಗೆ ಬಂದ ಭಯ-ಭೀಭತ್ಸ ಚಿತ್ರಗಳಲ್ಲಿ ರಂಗಿತರಂಗ ಅತ್ಯುತ್ತಮ. ನಿರೂಪ್ ಭಂಡಾರಿ ಸಹಜ ಅಭಿನಯದಲ್ಲಿ ಗೆದ್ದಿದ್ದಾರೆ. ಮೊದಲರ್ಧದಲ್ಲಿ ರಾಧಿಕ ಚೇತನ್ ಅಭಿನಯ ಇಷ್ಟವಾದರೆ ಉಳಿದರ್ಧದಲ್ಲಿ ಅವಂತಿಕಾ ಶೆಟ್ಟಿ ಮನಗೆಲ್ಲುತ್ತಾರೆ. ಅರವಿಂದ್ ರಾವ್ ಖಡಕ್ ಮತ್ತು corrupt ಪೋಲಿಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ಸಾಯಿಕುಮಾರ್ ನಟನೆಯ ಬಗ್ಗೆಯಂತೂ ಎರಡು ಮಾತಿಲ್ಲ. ಸಂವೇದನಾಶೀಲ ಸಾಹಿತ್ಯ ಹಾಗು ನಟನೆ ಈ ಚಿತ್ರದ ಜೀವಾಳ. ಪ್ರೇಕ್ಷಕರನ್ನು ದೃಶ್ಯಗಳು ಕೆಲವಾರು ಬಾರಿ ಬೆಚ್ಚಿ ಬೀಳಿಸುತ್ತವೆ.

ರಂಗಿತರಂಗಕ್ಕೆ IMDB ranking 9.5. ಈ ವರ್ಷದ ಅತ್ಯುತ್ತಮ ranking. ಬಾಹುಬಲಿ ತೆರೆಗೆ ಬರುವ ವಾರದ ಮುಂಚೆಯಷ್ಟೇ ಈ ಹೊಸ ಮುಖಗಳ ಚಿತ್ರ ಬಂದದ್ದು ಹಲವಾರು ಜಿಲ್ಲಾಕೆಂದ್ರಗಳಿಂದಲೂ ರಂಗಿತರಂಗ ಎತ್ತಂಗಡಿಯಾಗಲು ಕಾರಣವಾಗಿದೆ. ಬಾಹುಬಲಿಯ ನಂತರ ಬಜರಂಗಿ ಭೈಜಾನ್, ಇನ್ನು ಮುಂದೆ ಶ್ರೀಮಂತುಡು ಗುಂಗು, ಹೊಸ ಕನ್ನಡ ಚಿತ್ರಗಳ ಮಳೆ. ಇಷ್ಟೆಲ್ಲ ಸಹಿಸಿಕೊಂಡೂ ಜನರ ಬಾಯಿಂದ ಬಾಯಿಗೆ ಹರಡುತ್ತ, ಮಾಲ್ ಗಳಲ್ಲಿ ಇರುವ ಎರಡು ಮತ್ತೊಂದು ಅವಕಾಶದಲ್ಲಿ ಪ್ರತಿ ಪ್ರದರ್ಶನಕ್ಕೂ ಹೌಸ್ ಫುಲ್ ಕಾಣುತ್ತ ನಡೆಯುತ್ತಿರುವ ರಂಗಿತರಂಗಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಅಂತ ಹಾರೈಸೋಣ. ಕನ್ನಡ ಸಿನಿಮಾಗಳೆಂದರೆ ತುಚ್ಛವಾಗಿ ಕಾಣುವ ಮಂದಿ ನೋಡಲೇ ಬೇಕಾದ ಚಿತ್ರ. ಮೆಚ್ಚದಿರಲು ಸಾಧ್ಯವಾದರೆ ಮಾತ್ರ ಮಾತಾಡಿ...    

No comments: