Friday, September 12, 2014

ವೀಣೆ ಮಿಡಿವ ಕೈ

ಚಿತ್ರ ಕೃಪೆ :
http://www.mayurveena.com
ಹಸಿರ ತೋಟ ಉಲಿವ ಶಬ್ಧ ಒಂದೆ ಸಿರಿಯ ಬಯಲಲಿ
ವೀಣೆ ಹಿಡಿದು ದೇವಿಯಂತೆ ಬಂದೆ ನೀನು ಬಾಳಲಿ

ತಟಸ್ಥಗಿವಿಯ ಮರುಳು ಮನಕೆ ವೀಣೆ ಸ್ವರವು ಕೇಳಿತು
ಕಲೆಯ ಕಲ್ಪ ಜಡದ ಕಿವಿಯೊಳಾಲಾಪವ ಧ್ವನಿಸಿತು

ಎಲ್ಲಿ ಹುದುಗೆ ಬಿಡದೆ ಭಾವ ಕಂಪನಗಳು ಏಳಲು
ದಣಿವು ಜಾರಿ ಸ್ವನವ ಹೀರಿ ಮಧುರ ರಾಗದುಂಬಲು

ತೇನೆಹಕ್ಕಿ ಗಾನ ಕೇಳೆ  ಮೆಲ್ಲನದುವು ಉಲಿಯಲು
ಅಲ್ಲೆ ಕಾಂಬ ಹಸುವದೊಂದು ಕೊರಳ ಗಂಟೆ ಧ್ವನಿಸಲು

ನಿನ್ನ ಬೆರಳ ಮೋಡಿ ಮತ್ತೆ ವೀಣೆಯಲ್ಲಿ ಸ್ಫುರಿಸಲು
ಸುಯ್ದು ಸುಳಿವ ಗಾಳಿ ಕೂಡ ಕೇಳಲದನು ನಿಲ್ಲಲು

ಆಲಾಪದಿ ಮುಳುಗೇಳೆ ಭಕ್ತಿ ಚಿಮ್ಮುವಂದದಿ
ಷಡ್ಜಕಿಳಿಯುವಲ್ಲಿ ಅರೆರೆ! ದೇವ ಕಂಡ ತಾನದಿ!

ಧನ್ಯನೆಂದೆ ಮನದೊಳೆಲ್ಲ ಆರ್ದ್ರ ಭಾವ ತುಂಬಿದೆ
ಕೈಯ್ಯ ಹಿಡಿದು ಗಾನದೇವನನ್ನೆ ಚಣದಿ ತೋರಿದೆ!

(ಗೋರೂರು ರಾಮಸ್ವಾಮಯ್ಯಂಗಾರರ "ಊರ್ವಶಿ"ಯಿಂದ ಪ್ರೇರಿತ)

No comments: