ಚಿಟ್ಟೆ ಕಚಗುಳಿಯಿಟ್ಟವೇನೋ,
ಬೆಳ್ಳ ಮುಗಿಲು ಹಿಂಜಿ ಕನಸಲಿ-
ಕುಹುಕುಹೂ ಎಂದಿತೆ ಮುದದಲಿ?
ಮೃದುವ ಹುಲ್ಲಿನ ಹಾಸ ತಂಪು
ಮೆಲ್ಲ ಪಾದಕೆ ತಾಕಿತೇನೋ,
ಹೂವ ನುಣುಪಿನ ಪಕಳೆ ಅದುವೆ
ಕೈಗಳಿಗೆ ತಾ ಸೋಂಕಿತೋ?
ಘಲ್ಲೆನುವ ಝೇಂಕಾರವೊಂದು
ಪುಟ್ಟ ಕಿವಿಗಳದುಂಬಿತೇನು?
ಸವಿದ ಅಮೃತದ ರುಚಿಯು ಮತ್ತೆ
ನಾಲಗೆಗೆ ಮುದ ನೀಡಿತೋ?
ಮಳೆಯ ದಪ್ಪನೆ ಹನಿಯದೊಂದು
ಎಲೆಯ ಮೇಲ್ಗಡೆ ಜಾರಿ ಹನಿದು-
ನಿಂತ ನೀರೊಳು ಎಬ್ಬಿಸಿದ ಆ
ಸುರುಳಿ ಕನಸಲಿ ಕಂಡಿತೋ?
ಉದಯರವಿಯು ಆಕಳಿಸುತಲಿ
ಕರಿಯ ತೆರೆಯನು ಸರಿಸಿ ಎದ್ದು-
ಬೆಳಕ ಕೋಲ್ಗಳ ಪಸರಿ ಹರಡಿದ
ಬಣ್ಣಗಳು ಅವು ಕಂಡವೋ?
ಏನ ಕಂಡೆಯೊ ನನ್ನ ಕಂದನೆ
ನಗುವ ಸಿರಿಯದು ಎಂಥ ಚಂದ;
ನೀನು ನಿದ್ದೆಯೊಳದ್ದಿ ಬೀರಿಹ
ಮುಗುಳ ಮುದವೇ ಮೋಡಿಯೋ...
2 comments:
ಚಪ್ಪಾಳೆ... ಚಪ್ಪಾಳೆ... ಚಪ್ಪಾಳೆ... ಚಪ್ಪಾಳೆ...
ಅದ್ಭುತ ಪ್ರಸ್ತುತಿ ಕಣ್ರೀ. ಆ ನಗೆಯ ಹಿಂದೆ ಸಾವಿರ ಝಳಕುಗಳ ದೀಪಾವಳಿ.
http://badari-poems.blogspot.in
ಸೊಗಸಾದ ಕವನ
Post a Comment