Wednesday, June 15, 2011

ವಧು

ಹೆಣ್ಣೊಂದು ವಧುವಾಗಿ
ಹುಟ್ಟುಮನೆ ತೊರೆದು
ಹೊಸ್ತಿಲಲಿ ನಿಂತು
ಹಿಂತಿರುಗಿ ನೋಡಲು,

ಹುಟ್ಟಿದಾ ಮನೆಯದು,
ಅತ್ತಾಗ ತಾಯಿ
ಕೊಟ್ಟಾಗ ಮುತ್ತನ್ನು,
ಮೂಗೆಳೆದು ಸುಮ್ಮನಾದ
ದಿನವದನು ಮರೆಯುವಳೆ

ಸೋದರನು ಜಡೆ ಹಿಡಿದು
ರೇಗಿಸಿ ಕಾಡಿಸಿ
ಓಡಿಯಾಡಿಸಿದ ಕ್ಷಣಗಳದು
ರೆಪ್ಪೆಯಲಿ ಭದ್ರ

ಒಲ್ಲೆಂದರೂ ತಂದೆ
ಪಾಠ ಕಲಿಸಿ
ಅಕ್ಷರ ತಿದ್ದಿದ ದಿನಗಳವು
ಎಲ್ಲಕಿಂತ ಮೇಲು

ಜತನದಿ ಒಂದೊಂದೆ
ತನ್ನ ವಸ್ತುಗಳನು ಕೂಡಿಸಿ
ಗಂಡನೊಡೆ ಕಳೆವ 
ಮಧುಚಂದ್ರದಾ 
ಕನಸ ಕಾಣುತ
ವಧುವಾಗುವ ದಿನ
ಹತ್ತಿರಕೆ ಬರಲು

ಎಷ್ಟು ನೆನಪಿಸಿಕೊಂಡರೂ
ಉಳಿವುದಿನ್ನೂ
ಎಷ್ಟು ಜತನ ಮಾಡಿದರೂ
ಮರೆವುದಿನ್ನೂ

ಗಡಿಬಿಡಿಯ ದಿನಗಳವು 
ಹೇಗೆ ಉರುಳಿತೆಂದೇ
ತಿಳಿಯದ ಸಮಯ
ತಂದೇಬಿಟ್ಟಿತು
ಓಲಗದ ದಿನವನ್ನು;
ಹೊಸ ಮನೆಗೆ ಹೋಗುವ
ಕಾತರವನ್ನು.

ಎಲ್ಲ ನೆನಪಾಗಿಂದು
ತನ್ನವರ ತೊರೆದು
ತನ್ನವನಿಗಾಗಿ
ಮರೆತೆಲ್ಲವನು
ಬಿಕ್ಕಿ ಹೊರಟಿಹಳು
ಹೊಸ ಹಾದಿಗೆ,
ಹೊಸ ಬಾಳಿಗೆ,
ಹೊಸ ಮಾಡಿಗೆ..

Friday, June 3, 2011

ಲೇರಿಯೊಂಕ

ಕೀನ್ಯಾದ ಮಾಸಯಿ ಜನಾಂಗದ ಹುಡುಗನಾದ ಲೇರಿಯೊಂಕನ ಶಾಲೆಗೆ ಹೋಗುವ ಕಥೆಯನ್ನೊಳಗೊಂಡಿರುವ ಈ ಪುಸ್ತಕ 1950-1963ರ ನಡುವೆ ಚಿತ್ರಿಸಲಾಗಿದೆ. ಲೇರಿಯೊಂಕ ತನ್ನ ಎಲ್ಲ ಹಿರಿಯರ ವಿರೋಧದ ನಡುವೆಯೂ ತಾನು ವಿದ್ಯೆ ಕಲಿಯುತ್ತಾನೆ. ಸಂಪ್ರದಾಯಸ್ಥ, ನಂಬಿಕೆ ಹಾಗೂ ಮೂಢನಂಬಿಕೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಜಾಗತೀಕರಣವನ್ನ ವಿರೋಧಿಸುವ ಮನಸ್ಥಿತಿಯನ್ನು ಸಮಗ್ರವಾಗಿ ಚಿತ್ರಿಸಿರುವ ಜೊತೆಗೆ ಮಾಸಯಿ ಸಂಪ್ರದಾಯ ಅನಾವರಣಗೊಂಡಿದೆ.

{ ಪ್ರಮುಖವಾಗಿ ಜಾನುವಾರುಗಳನ್ನು ಅವಲಂಬಿಸಿ ಬದುಕೋ ಜನಾಂಗ, ಮಾಸಯಿ ಬುಡಕಟ್ಟು ಜನಾಂಗ. ಅಂತರ್ಜಾಲದಲ್ಲಿ ಈ ಬುಡಕಟ್ಟು ಜನಾಂಗದ ಬಗ್ಗೆ ಹುಡುಕ್ತಾ, ಒಂದು ವಿಚಿತ್ರ ಮಾಹಿತಿ ಸಿಕ್ತು. ಮಾಸಯಿ ಜನರು ಮುಖಂಡರ ಶವವಲ್ಲದೆ ಬೇರೆಯವರ ಶವವನ್ನು ಹೂಳೋದೂ ಇಲ್ಲ, ಸುಡೋದೂ ಇಲ್ಲ. ಬದಲಿಗೆ, ಶವವನ್ನು ಪ್ರಾಣಿಗಳು ತಿನ್ನದಿದ್ದರೆ ಊರಿಗೆ ಕೇಡು ಅಂತ ನಂಬೋ ಈ ಜನ, ಶವದ ಮೇಲೆ ಹಸುವಿನ ರಕ್ತ, ಕೊಬ್ಬನ್ನು ಚೆಲ್ಲಿ, ಕಾಡಿನಲ್ಲಿ ಎಸೆಯುತ್ತಾರೆ. ಹೀಗೆ ಮಾಡಿದರೆ, ಪ್ರಾಣಿಗಳು ತಪ್ಪದೇ  ಶವದೆಡೆ ಆಕರ್ಷಿತವಾಗುತ್ತವೆ ಅಂತ. ಶವಸಂಸ್ಕಾರ ಮಣ್ಣಿನಲ್ಲಿ ಮಾಡಿದರೆ, ಮಣ್ಣು ಹಾಳಾಗುತ್ತದೆ ಅನ್ನೋದು ಇವರ ನಂಬಿಕೆ.}

ಕಥೆ ಬರಿಯ ಕಥೆಯಾಗಿ ಉಳಿಯದೆ, ಓದುಗನ ಕಲ್ಪನೆಗೆ ಬಣ್ಣ ಕಟ್ಟಿಕೊಡುತ್ತದೆ. ಲೇರಿಯೊಂಕನ ಓದು ಮುಗಿಯುವ ಹೊತ್ತಿಗೆ ಕೀನ್ಯಾದ ಸ್ವಾತಂತ್ರ್ಯ ಹೋರಾಟ ಉಚ್ಛ್ರಾಯ ಸ್ಥಿತಿಯಲ್ಲಿರುತ್ತದೆ. ಅಧಿಕಾರಿಗಳಿಂದ ಒತ್ತಾಯಿಸಿಕೊಳ್ಳದೆ ಶಾಲೆಗೆ ತಿರುಗಿ ಬಂದ ಒಬ್ಬನೇ ಮಾಸಯಿ ವಿದ್ಯಾರ್ಥಿ ಲೇರಿಯೊಂಕ ಓದಿನ ನಂತರ ಕೆಲಸವಿಲ್ಲದೇ ಕೆಲಕಾಲ ಪರದಾಡಬೇಕಾಗುತ್ತದೆ. ಈ ಮಧ್ಯ ಒಗ್ಗಟ್ಟಾದ ಕೀನ್ಯಾಕ್ಕೆ ಕೊನೆಗೂ ಸ್ವಾತಂತ್ರ್ಯ ಬರುತ್ತದೆ. ಕೊನೆಗೆ ಲೇರಿಯೊಂಕನ ತಂದೆ "ನಾವು ಮುದುಕರು ಕೊಡಬಹುದಾದ ಒಂದೇ ಒಂದು ಸಲಹೆ ಅಂದರೆ ನಮ್ಮನ್ನು ನಿಧಾನವಾಗಿ ಕರೆದುಕೊಂಡು ಹೋಗಿ. ಅವಸರ ಮಾಡಬೇಡಿ. ಏಕೆಂದರೆ ಇದೆಲ್ಲಾ ನಮಗೆ ಹೊಸತು" ಎನ್ನುವಲ್ಲಿ ಅಭಿವೃದ್ಧಿ ತೆರೆ ತೆರೆಯಾಗಿ ಹೊನಲು ಬರಲಿ ಅನ್ನುವ ಆಶಯ ವ್ಯಕ್ತವಾಗುವುದು ಮನಸ್ಸಿಗೆ ನಾಟುತ್ತದೆ.


(ಪ್ರಶಾಂತ್ ಬೀಚಿಯವರು ಬರೆದಿರೋ (ಮೂಲ: ಹೆನ್ರಿ ಆರ್. ಓಲೆ ಕುಲೆಟ್) ಈ ಪುಸ್ತಕ ನನ್ನ ನೆಚ್ಚಿನ ವಸುಧೇಂದ್ರ, ಪ್ರೊ. ಗಣೇಶಯ್ಯ ರವರ ಪುಸ್ತಕಗಳನ್ನ ಅಚ್ಚು ಮಾಡಿದ ಛಂದ ಪ್ರಕಾಶನದಿಂದ ಹೊರಬಂದಿದೆ..)