Monday, October 4, 2010

ಸೀಳುಗವಲು!!


      ಇತ್ತೀಚೆಗಷ್ಟೇ laser treatment ಆಗಿ, ಕಣ್ಣುಗಳು "readable" ಆದ ತಕ್ಷಣ ಹಿಡಿದ ಪುಸ್ತಕ, "ಕವಲು". ಭಾರೀ ನಿರೀಕ್ಷೆಯಿಂದಲೇ ಓದಿದ ನಂಗೆ ಅಷ್ಟೇನೂ ಖುಷಿ ಕೊಡಲಿಲ್ಲ 'ಕವಲು'.
      ಕಾರಣ, ಭೈರಪ್ಪನವರು ಓದಿಸುವ ಮೊದಲೇ ಅವಲತ್ತುಗೊಂಡಿರುವಂತೆ, ಇದು ಸಮಕಾಲೀನ ಸಂಬಂಧಗಳನ್ನ ಎಳೆಎಳೆಯಾಗಿ ಬಿಡಿಸಿಡೋ ಪ್ರಯತ್ನ. ಫ್ರಾಯ್ಡ್ ಸಿದ್ಧಾಂತಗಳ ಭಾವಸರಣಿಯ ಪರಿಚಯ. ಕಥಾವಿಷಯವೇ ಸಂಬಂಧಗಳ ಬಗ್ಗೆಯಾದ್ದರಿಂದ ಸಂಬಂಧಗಳ ಕವಲು, ಭಾವ ತುಮುಲ, ಸಹಜ. ಒಪ್ಪಬಲ್ಲಂಥದ್ದೆಯೇ .ಆದರೆ ತೀರ ಒಂದೆರಡು ಪಾತ್ರಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಪಾತ್ರಗಳೂ ಕವಲಿಗೀಡಾದ ಸಂಬಂಧಗಳ ಒಡನಾಡಿಯಾಗಿರುವುದು, ಸಮಾಜದ ಋಣಾತ್ಮಕ ಮುಖವನ್ನು ಎತ್ತಿ ಹಿಡಿಯುವಂಥದ್ದಾಗಿದೆ. "ದೂರ ಸರಿದರು" ಕಾದಂಬರಿಯ ಹಾಗೆ ವಿಶ್ಲೇಷಣೆಗಳು ಹರಿಯುತ್ತಾ ಹೋಗುತ್ತದೆ. ಆದರೆ 'ಕವಲು'ವಿನಲ್ಲಿ, ಇಂದಿನ ಸಮಾಜದ ಬಗೆಗೆ, ಈಗಿನ ಸಂಬಂಧಗಳ ಬಗೆಗೆ, ನಂಬಿಕೆಯೇ ಅಲುಗಾಡುವಂತಿದೆ. ಕಾದಂಬರಿಯ ಹರಿವಿನುದ್ದಕ್ಕೂ, ಶೋಷಿತಗೊಳ್ಳದೆ ಹೋರಾಡಿ (ಆ ಹೋರಾಟ ಅನೈತಿಕವಾಗಿದ್ದರೂ ಸಹ) ನ್ಯಾಯ(!) ದೊರಕಿಸಿಕೊಳ್ಳುವ ಮಹಿಳೆಯರ ದೃಷ್ಟಾಂತಗಳಿವೆ. ಇದು ಎಷ್ಟರ ಮಟ್ಟಿಗೆ ಪ್ರಸ್ತುತ? ನಮನಿಮಗೆ ಕಾಣುವ ಹೆಣ್ಣುಮಕ್ಕಳಲ್ಲಿ ಎಷ್ಟು ಜನ domestic voilence ಗೆ ಒಳಗಾಗಿದ್ದರೂ ಸಹ ನ್ಯಾಯ ತಮ್ಮ ಪರವಾಗಿದೆ ಎಂದು ತಿಳಿಯದೆಯೋ ಅಥವಾ ಮುಂದೇನು? ಎಂಬ ಅಭದ್ರತೆಯಿಂದಲೋ ಕಾನೂನಿನ ಮೊರೆಹೋಗುತ್ತಾರೆ? ತಮ್ಮ ಗಂಡನಿಗೆ ವಿವಾಹೇತರ ಸಂಬಂಧವಿದೆಯೆಂದು ತಿಳಿದೂ ಮಕ್ಕಳಿಗೋಸ್ಕರವೋ, ಮರ್ಯಾದೆಗೋಸ್ಕರವೋ  ಅಂಜಿ ಎಷ್ಟು ಹೆಣ್ಣುಮಕ್ಕಳು ಮದುವೆ  ಬಂಧನವಾದರೂ ಅದರೊಳಗೆ ಭದ್ರತೆ ಕಂಡುಕೊಂಡಿಲ್ಲ? ಇನ್ನು ತಮಗೆ ವಿವಾಹೇತರ ಸಂಬಂಧವಿದ್ದೂ ತನ್ನ ಗಂಡನೊಂದಿಗೆ ಇರಬೇಕೆಂದೋ,ಅಥವಾ ಹಣದಾಸೆಗೆ ಜೀವನಂಶಕ್ಕೆಂದೋ ಎಷ್ಟು ಜನ ಕಟಕಟ್ಟೆ ಏರುತ್ತಾರೆ?
      ಭೈರಪ್ಪನವರ ಕಾದಂಬರಿ ಈ ವಿಷಯದಲ್ಲಿ ಆಪ್ಯಾಯತೆಯಿಂದ ದೂರವೇ ಉಳಿಯುತ್ತದೆ. ಹೆಣ್ಣಿನ (ಭಂಡ!?) ಧೈರ್ಯದಲ್ಲಿ ಗಂಡಿನ ಧ್ವನಿ ಕಂಡೀತಷ್ಟೇ. ಸಮಾಜದ ಪರಿಚಯ ಎಂದಿಗೂ ಸ್ವಾಗತಾರ್ಹ. ಪ್ರತಿ ಕಾದಂಬರಿಯಲ್ಲಿಯೂ ಸಂಚಲನ ಉಂಟುಮಾಡುವಷ್ಟು  ಸತ್ವ ಉಳ್ಳ ಭೈರಪ್ಪನವರು, ಧನಾತ್ಮಕ ಸರಣಿಯ ಆಲೋಚನೆಗಳನ್ನು, ಇನ್ನೂ ಕೆಲವು ಸಂಬಂಧಗಳ ಬೆಸುಗೆಯಲ್ಲಿ ಇನ್ನೂ ಕೊಂಚ ಎತ್ತಿಹಿಡಿಯಬಹುದಿತ್ತೇನೋ. ಮುತ್ಸದಿಗಳಿಗೆ ಸಮಾಜ ತಿದ್ದಬಲ್ಲ ಶಕ್ತಿಯಿರುತ್ತದೆ. ಆ ಶಕ್ತಿಯ ಬಳಕೆ ಇನ್ನೂ ಸಮರ್ಪಕವಾಗಿ ಆಗಿದ್ದಿದ್ದರೆ ಚೆನ್ನಿತ್ತು. ಇಲ್ಲಿ ಮಾತ್ರ ಪ್ರೀತಿಪಾತ್ರತೆಯಿಂದ ದೂರ ನಿಲ್ಲುತ್ತದೆ "ಕವಲು". ಮೊಸಕ್ಕೊಳಗಾಗಿ ಮೋಸಮಾಡುವ ಪಾತ್ರಗಳಿಗಿಂತ ಸಮಾಜ ತಿದ್ದಬಲ್ಲ ಪಾತ್ರಗಳೂ ಇದ್ದಿದ್ದರೆ ಮಿನುಗುತ್ತಿತ್ತು 'ಕವಲು'. ಮಿಕ್ಕಿದ್ದು, ಓದುಗರಿಗೆ ಬಿಟ್ಟದ್ದು...

1 comment:

Suprabha Suthani Matt said...

ನನ್ನ ಅಭಿಪ್ರಾಯವನ್ನು ಬದಲಾಯಿಸುವಂತ ಘಟನೆಗಳ ಬಗ್ಗೆ ಕೇಳಿದೆ.. ಹಾಗಾಗಿ, ಈ ಬರಹದ ಮೇಲೆಯೇ contradictory ಕಮೆಂಟುತ್ತಿದ್ದೇನೆ.. ಹೌದು, ಇರುತ್ತಾರೆ ಹೆಂಗಸರು; ತಮ್ಮ ಗಂಡನ ಮನೆಯವರನ್ನು law ತಮ್ಮ ಕಡೆ ಇದೆ ಎಂದು ಕಿರುಬೆರಳಿನಲ್ಲಿ ಕುಣಿಸುವಂಥ ಜನ.. ಅರಿವಾಗಲು ಅನುಭವ ಬೇಕಷ್ಟೇ.. ಒಂದು ಉದಾಹರಣೆ-



ಬೇರೆ ಹೋಗಿರುವ ಒಬ್ಬನೇ ಮಗ ಹೆಂಡತಿಯೊಂದಿಗೆ ತಿರುಗಿ ಮನೆಗೆ ಬರುತ್ತಾನೆ. ಹೆಂಡತಿಯೂ ತನ್ನ ಅತ್ತೆ ಮಾವನ ಜೊತೆ ಹೊಂದಿಕೊಂಡೇ ಇರುತ್ತಾಳೆ, ಇದೆಲ್ಲ, ಎಂಟು ದಿನ ಮಾತ್ರ.. ಆಮೇಲೆ ಸೀದಾ ಪೋಲೀಸರ ಹತ್ತಿರ ಹೋಗುವ ಹೆಂಡತಿ, ತನ್ನ ಮೈ ಮೇಲೆ ತಾನೇ ಮಾಡಿಕೊಂಡ ಪರಚು ಗಾಯಗಳನ್ನ ತೋರಿಸಿ ವರದಕ್ಷಿಣೆ ಕಿರುಕುಳದ ಕೇಸ್ ಹಾಕುತ್ತಾಳೆ. ತನಿಖೆ ನಡೆಸಿದ ಮೇಲೆ ಪೊಲೀಸರಿಗೆ ಇದೆಲ್ಲಾ ಆಕೆಯ ಸಂಚು ಎನ್ನುವುದು ತಿಳಿಯುವ ಹೊತ್ತಿಗೆ, ಗಂಡನ ಮನೆಯವರು ಜೈಲಿನ ಮೆಟ್ಟಿಲು ಹತ್ತಿ ಅವಮಾನಿತರಾಗುತ್ತಾರೆ. ಈ ಘಟನೆಯಲ್ಲಿ ಸೊಸೆ ತಮ್ಮ ಮನೆಗೆ ಬಂದಿದ್ದೇ ತಮ್ಮ ಮೇಲೆ ಆರೋಪ ಹೊರಿಸಲು ಎನ್ನುತ್ತಾರೆ ಆಕೆಯ ಅತ್ತೆ ಮಾವ.



ಭೈರಪ್ಪನವರು ಬರೆದಿರುವ "ಕವಲು" ಮಹಿಳಾವಾದಿಗಳನ್ನು ಫಕ್ಕನೆ ಕೆರಳಿಸಬಹುದು. ಚರ್ಚೆಗಳಾಗಬಹುದು. ಒಟ್ಟಾರೆ ಅಭಿಪ್ರಾಯದಲ್ಲಿ ನಾನು ಬರೆದಿರೋ ಹಾಗೆ, ಸಮಾಜಕ್ಕೆ ಸ್ವಸ್ಥ ಕಥೆಯನ್ನು ಭೈರಪ್ಪ ಕೊಟ್ಟಿಲ್ಲ ಅನ್ನಬಹುದು. ಕವಲಿಗೀಡಾದ ಸಂಬಂಧಗಳಲ್ಲೂ, ಕಿರುಕುಳದ ದಾವೆ ಹಾಕುವ ಹೆಂಡಂದಿರಲ್ಲೂ ನಾವು ನೈತಿಕತೆ ಹುಡುಕುವುದಕ್ಕಿಂತ, ವಾಸ್ತವ ಹುಡುಕಿದರೆ ಮೇಲೇನೋ.. domestic violence ಸಹಿಸಿಕೊಳ್ಳುವ ಹೆಂಗಸರಿದ್ದಾರೆ ನಿಜ. ಆದರೆ ಮಹಾನಗರಗಳಲ್ಲಿ, 'educationally elite' ವರ್ಗದವರಲ್ಲಿ ನ್ಯಾಯ, ವಕಾಲತ್ತುಗಳ ಅರಿವಿದ್ದವರಲ್ಲಿ ಕೊಂಚ ಅಸ್ವಸ್ಥ ಮನಸ್ಥಿತಿಯವರಾದರೂ, ಮದುವೆಯಾಗಿ ಹೊಕ್ಕ ಮನೆಯ ಶಾಂತಿಯನ್ನು ಹಾಳುಗೆಡವಬಹುದು. ಅಂತಹ ಉದಾಹರಣೆಗಳೂ ಸಮಾಜದ ಪ್ರತಿಫಲನಗಳೇ. ಇಲ್ಲಿ, ಹೆಣ್ಣುಮಕ್ಕಳು ಬೆಳೆದ ವಾತಾವರಣ, ಅವರ ಬಾಲ್ಯದ ಹಾಗು ಕೌಮಾರ್ಯದ ಒಡನಾಟ, ಇವೆಲ್ಲ ಪ್ರಭಾವವನ್ನುಂಟು ಮಾಡುತ್ತವೆ. ಅನುಭವಕ್ಕೆ ಬಾರದೆ ಏನನ್ನೂ ನಂಬದವರು ತುಂಬ ಬೇಗ ಈ 'ಕವಲು' ವಿಷಯದ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ತಾಳುವ ಸಂಭವವಿದೆ. ಕವಲಿಗೀದಾದ ವ್ಯಕ್ತಿತ್ವದ ಪರಿಚಯವಿದೆ ಪುಸ್ತಕದಲ್ಲಿ. ಇದೆಲ್ಲ ನನಗೂ ಮನದಟ್ಟಾದದ್ದು ಮತ್ತೊಮ್ಮೆ 'ಕವಲು'ವನ್ನು ಓದಿ, ವಿಮರ್ಶೆ ಮಾಡಿಕೊಂಡಾಗಲೇ. ಪುಸ್ತಕದ ಭಾವವನ್ನು ಗ್ರಹಿಸಿದರೆ, ಇಂಥವರೂ ಇದ್ದಾರೆಂದು ವಿದಿತಮಾಡಲು ವ್ಯಕ್ತಿತ್ವಗಳನ್ನು ಆರಿಸಿಕೊಂಡಿದ್ದಾರೆ ಅನ್ನಿಸಿತು. ಹಾಗಾಗಿ, ನಾ ಬರೆದಾದ ನಂತರ, ಅಲ್ಲಿ ನಾನೇ ವಿರೋಧಾಭಾಸ ಕಾಮೆಂಟಬೇಕಾಯಿತು..