ಜೀವನದ ಮೇಲಿನ ಆಸ್ಥೆ-ಸಾವಿನ ಬಗೆಗಿನ ಆಕರ್ಷಣೆಯ ಅಂಚಿನಲ್ಲಿ ನಡೆಯುತ್ತ, ಇತ್ತ ಮುಗಿಸದೆ, ಅತ್ತಲೂ ನಿಲ್ಲದೆ ಹೆಣಗುವ, ಕಥಾವಸ್ತು - ಅಂಚು. ಇದರ ಕಥಾ ಹಂದರವನ್ನು ಮೊದಲು ತಿಳಿಸಿದರೆ, ಮುಂದೆ ಹೇಳುವ ಅಂಶಗಳಿಗೆ ಅದೇ ಬೆನ್ನೆಲುಬಾಗುತ್ತದೆಂದೆನಿಸುತ್ತದೆ.
ಡಾಕ್ಟರ್ ಅಮೃತಾ ಪಿ.ಎಚ್.ಡಿ ಪದವೀಧರೆ, ಉಪನ್ಯಾಸಕಿ. ತಂದೆ - ತಾಯಿ ಇಲ್ಲದ ಈಕೆ ತನ್ನ ಆಸ್ತಿವಿಚಾರದಲ್ಲಿ ಸ್ವಂತ ಚಿಕ್ಕಮ್ಮನಿಂದಲೇ ಚಿಕ್ಕಂದಿನಿಂದಲೂ ನಯವಂಚನೆಗೊಳಗಾಗಿ, ಆಕೆಯ ತಮ್ಮನನ್ನೇ ಮದುವೆಯಾಗಿ, ತಾನು ಮೋಸಕ್ಕೊಳಗಾದದ್ದು ಬೋಧೆಯಾದಾಗಿಂದ ಗಂಡನಿಂದ ದೂರವಿರುವ ಎರಡು ಮಕ್ಕಳ ತಾಯಿ. ಆಗಾಗ ತನ್ನ ಅಸ್ತಿತ್ವದ ಬಗ್ಗೆ ಕಾಡುವ ಶೂನ್ಯಭಾವ ಸದಾ ಆಕೆಯನ್ನು ಸಾವಿನೆಡೆಗೆ ಆಕರ್ಷಿಸುತ್ತಿರುತ್ತದೆ. ಈ ಮಧ್ಯೆ ಸೋಮಶೇಖರನೆಂಬ ಆರ್ಕಿಟೆಕ್ಟ್ ನೊಂದಿಗಿನ ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿಯಾಗಿ ಬಲಿತು ಗೋಜಲಾಗುವ ಕಥೆ.
ಪುಸ್ತಕದ ಹಲವಾರು ಭಾಗಗಳಲ್ಲಿ ಕಥೆಯೇ ಮಾಸುವಷ್ಟು ಸಂಭಾಷಣೆ- ತಗಾದೆ- ಭಾವನೆಗಳ ವಿಸ್ತಾರ ಇರುವುದರಿಂದ ಒಡನೆಯೇ ಈ ಕಥೆಯ ವಿಸ್ತಾರ ಅರಿವಾಗುವುದು ಸುಲಭಸಾಧ್ಯವಲ್ಲ. ಈ ಕಾರಣಕ್ಕಾಗಿಯೇ ಎಸ್ ಎಲ್ ಭೈರಪ್ಪನವರ ಇತರೆ ಹಲವು ಕಾದಂಬರಿಗಳನ್ನೋದಿದವರೂ ಅಂಚುವನ್ನು ತಡವಾಗಿ ಓದಿರುತ್ತಾರೆ - ಅಥವಾ ಮಧ್ಯದಲ್ಲೇ ನಿಲ್ಲಿಸಿರಲಿಕ್ಕೂ ಸಾಕು; ನನ್ನ ಹಾಗೆ.
ಏಳು ವರ್ಷಗಳ ಹಿಂದೆ ಓದಲು ತಂದಿಟ್ಟುಕೊಂಡೂ, ಓದದೇ ಅರ್ಧದಲ್ಲೇ ಕೈಬಿಟ್ಟಿದ್ದ ಪುಸ್ತಕ - ಎಸ್ ಎಲ್ ಭೈರಪ್ಪನವರ "ಅಂಚು". ಸಂಕಲ್ಪವಿದ್ದರೂ ಸಂಕಲ್ಪವನ್ನು ಹಸಿರಾಗಿಟ್ಟು ಪುಸ್ತಕದ ಉದ್ದಗಲವನ್ನೂ ಓದುವ, ಓದಿದ್ದನ್ನು ವಿಶ್ಲೇಷಿಸಿ ಅರಗಿಸಿಕೊಳ್ಳುವ ಭಾವ ಬಹುಶಃ ಬಲಿತಿರದ ದಿನಗಳವು. ಬಸುರಿನಲ್ಲಿ ಹಿಡಿದ ಈ ಪುಸ್ತಕದ ಅಭಿವ್ಯಕ್ತಿಯ ಧ್ವನಿ, ಸನ್ನಿವೇಶಗಳ ಪೋಣಿಸುವಿಕೆ ನನ್ನ ತಾಯ್ತನದ ಹೊಸ್ತಿಲಿನ ದಿನಗಳಲ್ಲಿ ಅತಿ ಭಾವುಕತೆಯನ್ನು ತಂದು ಪಾತ್ರಗಳ ನೋವಿನೊಡನೆ ಸಮೀಕರಿಸಿಕೊಳ್ಳುವ ಮನಸ್ಥಿತಿಯೊಡೆದು ಪಕ್ಕಕ್ಕಿಟ್ಟಿದ್ದೆ; ದೂರವಿಟ್ಟು ಮರೆತಿದ್ದೆ. ವರ್ಷಗಳ ನಂತರ, ಇದೇ ಲೇಖಕರ "ಯಾನ" ಸಂವಾದವನ್ನು ಶತಾವಧಾನಿ ಗಣೇಶರು ನಡೆಸಿಕೊಡುವಾಗ ಪ್ರಶ್ನೋತ್ತರ ಸಮಯದಲ್ಲಿ ಶ್ರೋತೃಗಳೊಬ್ಬರು "ಅಂಚು"ವಿನಲ್ಲಿ ನಾಯಕಿ ಆತ್ಮಹತ್ಯೆಯ ಪ್ರಯತ್ನವನ್ನು ಇಡೀ ಪುಸ್ತಕದಲ್ಲಿ ಇಪ್ಪತ್ತೊಂದೋ ಇಪ್ಪತ್ಮೂರೋ ಸಲ ಮಾಡಿಕೊಳ್ಳುತ್ತಾಳೆ ಅನ್ನುವ ಅಂಶ ಚರ್ಚೆಗೆ ಬಂದಾಗ ಗಣೇಶರು ಹೇಳಿದ್ದ ಉತ್ತರದ ಭಾಗವೊಂದು ನಿಜಕ್ಕೂ ಚಕಿತಗೊಳಿಸಿತ್ತು - ಅಂಚು ಕಾದಂಬರಿ ಮದುವೆಯನ್ನೊಳಗೊಂಡ ನಂಬಿಕೆಯನ್ನು ಕಳೆಯುವಂಥದಲ್ಲ, ಮದುವೆಯಾಗಲು ಪ್ರೇರೇಪಿಸುವಂಥದ್ದು, ಮದುವೆಯ ತಳಹದಿಯಲ್ಲಿ ನಂಬಿಕೆಯನ್ನು ಗಟ್ಟಿಮಾಡುವಂಥದ್ದು ಅಂದದ್ದು ಮನಸ್ಸಿನಲ್ಲಿ ಉಳಿದಿತ್ತು.
ಕೊರೋನಾ ಮಹಾಮಾರಿಯ ದೆಸೆಯಿಂದ ದೇಶಕ್ಕೆಲ್ಲಾ lockdown ಸೂಚನೆ ಹೊರಟ ನಂತರ ಬಿಡುವಿನ ಸಮಯದಲ್ಲಿ ಓದಲು ಆರಿಸಿಕೊಂಡದ್ದು - "ಅಂಚು" ಕಾದಂಬರಿಯನ್ನು.
ಅಂಚುವಿನ ಅಮೃತಾ ಉತ್ತಮ ಅಧ್ಯಾಪಕಿ- ಅಪನಂಬಿಕೆಯ ನಂಜುಂಡರೂ ಆಕೆಯ ಚಿಕ್ಕಮ್ಮ ಮತ್ತು ಮನೆಯವರಿಗೆ ಮನದೆಲೆಲ್ಲೋ ಕಿತ್ತೊಗೆಯಲಾಗದ ಅಸಹಾಯಕ ಆರ್ದ್ರತೆ. ಇನ್ನು ತನ್ನೆರಡು ಮಕ್ಕಳಿಗೆ ಒಳ್ಳೆಯ ತಾಯಿಯಾದರೂ, ತಾನು ಸೆಳೆಯಲ್ಪಟ್ಟಿರುವ ಸೋಮಶೇಖರನೊಂದಿಗೆ ಮಾತ್ರ ಅದ್ವಿತೀಯ ಲಹರಿಯವಳು. ಒಮ್ಮೊಮ್ಮೆ ನಿರಾತಂಕ ಪ್ರೀತಿ, ಹಿಂದೇ ಸುತ್ತಿ ಕವುಚಿಬರುವ ಮೌನ- ಶೂನ್ಯತೆ! ಶೂನ್ಯತೆಯ ಪರಮಾವಧಿ ಅಕಾರಣ ಸಿಟ್ಟಿನತ್ತ ಹಲವೊಮ್ಮೆ ಎಳೆದೊಯ್ದರೆ, ಕೆಲವೊಮ್ಮೆ ಮುಗಿಸಿಕೊಂಡುಬಿಡಬೇಕೆನ್ನುವ ಆತ್ಮಹತ್ಯಾ ತುಡಿತ, ಇನ್ನು ಕೆಲವೊಮ್ಮೆ ಪ್ರೀತಿಸಿದವನ ಮೇಲೆ ಕ್ರೌರ್ಯಕ್ಕೂ ತಿರುಗುವ ಮೌಢ್ಯ! ಈ ಭಾವನೆಗಳ ಅಲಗು ಮೊನೆಗಳ ಮೇಲಿನ ಹೊಯ್ದಾಟದಲ್ಲೇ ಕಥೆ ಸಾಗುತ್ತದೆ.
ಕಥಾನಾಯಕಿ ಅಮೃತಾಳಂತಹಾ ಪಾತ್ರವನ್ನು ನಾವು ನಿಜಜೀವನದಲ್ಲೂ ನೋಡಿರಬಹುದು; ಕೆಲವರು ಇಡೀ ಜಗತ್ತಿಗಿದ್ದಷ್ಟು ಉದಾರವಾಗಿ, ತಮ್ಮವರೊಡನೆ, ತಮಗೆ ಕಷ್ಟ-ಸುಖಗಳಲ್ಲಿ ಸಮಪಾಲು ಇರುವವರೊಡನೆ ಭಾವ ಕಳೆದವರಂತಿರುತ್ತಾರೆ. ಹೊರಗಿನವರೆನಿಸಿಕೊಂಡ ಬೇರೆಲ್ಲರೊಂದಿಗೂ ನಗುನಗುತ್ತ ಬೆರೆತಂತಿದ್ದು ತಮ್ಮ ಮೇಲೆ ಭಾವುಕವಾಗಿ ಅವಲಂಬಿತರಾದವರ ಮೇಲೆ ಕೊಂಕುಗೆದರಿಸುತ್ತ ತಪ್ಪಿತಸ್ಥ ಭಾವ ಮೂಡಿಸುತ್ತಲೋ, ಆಪಾದನೆ ಹೊರಿಸುತ್ತಲೋ ಇದ್ದುಬಿಡುತ್ತಾರೆ. ಅವರ ಅಭಿವ್ಯಕ್ತಿ ತಮ್ಮವರೆನಿಸಿಕೊಂಡವರ ಮೇಲಾಗಲಿ, ಕಾರಣ ಏನೇ ಇರಲಿ, ಕ್ರೌರ್ಯ, ಆತ್ಮಾವಹೇಳನ, ಕೊಂಕಿನ ಮೂಲ- ಇವೆಲ್ಲ ನಿಲುಕಿಗೂ ಸಿಕ್ಕದ ಅಂತರದಲ್ಲೆಲ್ಲೋ ಹೂತುಹೋಗಿರುತ್ತದೆ. ಆಳದಲ್ಲೆಲ್ಲೋ ಆದ ವ್ರಣ ಮೇಲುಮೇಲಿನ ಸಿಡುಕು - ದ್ವಂಧ್ವಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ.
ತೀವ್ರ ಭಾವಸ್ಪಂದನ, ಅದರಿಂದುಂಟಾಗುವ ದಣಿವು - ಸೋಮಶೇಖರನಿಗೆ ಹಿಂಸೆಯೆನಿಸಿದಷ್ಟೂ, ಬಿಡಿಸಿಕೊಳ್ಳಬೇಕೆನಿಸಿದಷ್ಟೂ ತೊರೆಯಲಾರದ ಅಂಟಾಗಿ, ಬಂಧವಾಗಿ, ಆಕರ್ಷಣೆಯಾಗಿ, ಕಡೆಗೆ ವೃತ್ತಿಗಿಂತಲೂ ಮುಖ್ಯವಾಗಿ ವೃತ್ತಿಯಲ್ಲಿ ಸೋಲುತ್ತ ಬಂದು, ಅಮೃತಾಳನ್ನು ಕಳೆದುಕೊಳ್ಳುವ ಸಂಕಲ್ಪವೇ ಭಯತರಿಸಿ, ಈ ಬಂಧವನ್ನು ನಿಭಾಯಿಸಿಯೇ ತೀರುವೆನೆಂಬ ಸ್ಪೂರ್ತಿಯಾಗಿ ಮಜಲು ಮಜಲಾಗಿ ಬಿಡಿಸಿಕೊಳ್ಳುವುದು ಕಾಣುತ್ತದೆ.
ಇಲ್ಲಿ ಸೋಮಶೇಖರನಂಥಾ ತಾಳ್ಮೆಯುಳ್ಳವರ ಪ್ರೀತಿ-ಕಾಳಜಿಯ ಇಂಧನ ಯಾವುದು? ಪ್ರೀತಿಸಿದವರನ್ನು ಪಡೆದೇ ತೀರಬೇಕೆಂಬ ಹಂಬಲವೋ, ಪ್ರೀತಿಸಿದವರು ಸಂತೋಷವಾಗಿಯೇ ಬದುಕಬೇಕೆಂಬ ಛಲವೋ? ಕೋಮಲ ಹೃದಯಿಯಾದ ಅಮೃತಾಳ ನಾಡಿಹಿಡಿಯಲಾರದ, ಭಾರ ಬಲಿಯದೆಯೂ ಇಕ್ಕೆಲಗಳಿಗೆ ಯಾವ ಮುನ್ಸೂಚನೆಯೂ ಇಲ್ಲದೆ ತೂಗಾಡುವ ತಕ್ಕಡಿಯಂಥಾ ಸ್ವಭಾವಕ್ಕಿರುವ ತಲ್ಲಣದಲ್ಲಿ- ಪ್ರಸ್ತುತದ ಕ್ಷುಲ್ಲಕ ಕಾರಣಗಳು ಸತ್ಯವೋ, ಅಥವಾ ಜೀವನದಲ್ಲಿ ಹಿಂದೆಲ್ಲೋ ಮನಸ್ಸಿಗೆ ಬಿದ್ದ ಪೆಟ್ಟು ತಾಳಲಾರದ ಏಟುಗಳೋ? ಇವೆಲ್ಲ ಪದರಗಳೊಳಗೂ ಜೀಕುತ್ತ ಸಾಗುವುದು - "ಅಂಚು".
ಶತಾವಧಾನಿ ಗಣೇಶರು ಹೇಳಿದಂತೆ, ವಿವರಣೆಗಳಿಗೆ ಮಾತ್ರ ಪಕ್ಕಾಗದೆ ಪ್ರೀತಿ, ಸಂಬಂಧ, ವಿವಾಹದ ಮೂಲಧನಕ್ಕೊಂದು ಧಾತು - "ಅಂಚು".