Tuesday, September 17, 2019

ಅರಿಕೆ


ಮೋಡದಂಚಲೆಲ್ಲೋ ಇದ್ದ ನನ್ನ ಸೆಳೆದು ತಂದು ನೀವು
ಮಿಣುಕುಹುಳವು ನಿಶೆಯ ಸೊಬಗ ಬೆಳಕಹಾಸಿ ನೋಡುವಂತೆ,
ಹಸುರಿನೊಳಗೆ ತನ್ನ ಸುತ್ತ ಪಸರಿಸಿರುವ ಇನಿತು ಬೆಳಕ-
ಬೀರಿ ಬೀರಿ ಮೇಲೆ ಹಾರಿ, ಕೊಂಚ ದೂರ ಮತ್ತೆ ಹೋಗಿ,
ಅಲ್ಲು ಬೆಳಕ ಮಿಣುಕಿ ಮಿಣುಕಿ ಬೆದಕಿ ಸರ್ಗಕಾಣುವಂತೆ
ಇತ್ತಿರೆನ್ನ ತಾಯಿಗೆ; ತಾಯ ಮಡಿಲ ಹುಡುಕುತ್ತಿದ್ದ ಜೀವಕೆ.

ಮಡಿಲ ಬೆದಕಿ ಕೊಂಚಕೊಂಚ ತೊದಲನಾಡಿ ಹಿಗ್ಗಿಹಾರಿ,
ತಾಯ ಮಡಿಲು ಸಾಲದೆನಗೆ ಮೇಲು ಹಾರಿ -
ಕೆಳಗು ನೋಡಿ ದೂರಸಾಗುವಾಸೆಯು;
ಬೆಳಕಿನಡಿಯು ಬೆರಗನೆಲ್ಲ ಇಲ್ಲೆ ಬಿತ್ತಿ ಬೆಳೆಸಿದಂತೆ 
ಕೊಟ್ಟ ಮನೆಗೆ ಬೆಳಕ ನೀಡಿ, ನೀನೇ ಉಸಿರೂ ಆಗಿರೆಂದು
ಉಜ್ಜುಗಿಸುವ ಕಾಂತಿಯಾಗು- ಮನಕೆ ಎಂದೂ ತಣ್ಪ ನೀಡು,
ಕಣ್ಣ ತುಂಬಿ ಹರಸಿ ಕಳಿಸೆ-ಮನವು ಆರ್ದ್ರವಾಗಲು..

ಮೆಲ್ಲ ಬಂದೆ ಮತ್ತೆ ನಾನು ಹೊಸತದೊಂದು ನಗೆಯ ತುಂಬಿ,
ಹಿರಿಮೆ ಹಿಗ್ಗಿ ಜಗಕದೆಲ್ಲ ನನ್ನ ಮಗುವ ಲಾಲಿಸುತ್ತ,
ನಿದಿರೆ ತೊರೆದು ಪುಟ್ಟ ಮಗುವ ರಂಜಿಸಿದಾ ರಾತ್ರಿಗಳಿಗೆ-
ಲೆಖ್ಖವಿಲ್ಲ ಚುಕ್ಕವಿಲ್ಲ -
ಯಾರೇ ಕೇಳೆ ಬರಿದೆ ನಗುವು ನಿಮ್ಮ ನಲ್ಮೆಯುತ್ತರ!

ಅವನ ಪುಟ್ಟ ಕೈಯ್ಯ ಮುಟ್ಟಿ ಬೆಚ್ಚನಿರುವ ಕೆನ್ನೆ ಸವರಿ
ಹೆಜ್ಜೆಗೊಂದು ಮಾತಿಗೊಂದು ಗೊಂಬೆಯದಕೆ ಬರಿಯ ಮುದ್ದು;
ತೊದಲು ನುಡಿಗಳಲ್ಲು ನೀವೆ, ಅವನ ಕೇಕೆಯಲ್ಲು ನೀವೆ,
ಸಂತಸದಾ ಕ್ಷಣಗಳವನ ಸುತ್ತಲಿರುವ ಸದಾ ಹಾಗೆ,
ಕಣ್ಮಯಿಯಾ ಸೆಲೆಯೇ ಅವನು ಆಗುವುದನು ಕಂಡೆನು!

ನಿಮ್ಮಲೇನೆ ನನ್ನ ಸಲಿಗೆ,
ಭಾವುಕತೆಯ ಎಲ್ಲೆ ಕೊನೆಗೆ,
ಜೀವವಿದುವೆ ಧನ್ಯ ನಿಮಗೆ;
ರೂಪಿಸಿರಲು ನಮ್ಮ ಬದುಕ-
ಪ್ರೀತಿಯಿಂದ ವಂದನೆ.