Sunday, March 25, 2018

ರಾಜರಥ : ರಾಜಸ - ಸತ್ವ ಮತ್ತು ತಾಮಸ

★★★
ರಾಜರಥ - ಭಾಷೆಯಿರುವ ಮನಸ್ಸಿರುವ ಬಸ್ಸೊಂದು ನೋಡುವ ಮಂದಿ ಎದ್ದು ಶಿಳ್ಳೆ ಹೊಡೆಯಬೇಕೆನ್ನುವ ಹಾಗಿರುವ ಹೀರೋ ಎಂಟ್ರಿಗಾಗಿ ಕಾಯುತ್ತಿದೆ. ಈ ಬಸ್ಸಿನಲ್ಲಿ ಸಿಕ್ಕವರೆಲ್ಲಾ ಬೇರೆಲ್ಲೋ ಜೀವನದಲ್ಲಿ ಕಂಡವರೇ. ಒಬ್ಬೊಬ್ಬರು ಒಂದೊಂದು ಥರದವರು. ಗಡುಸೊಬ್ಬರಾದರೆ ಮತ್ಯಾರೋ ತಾಯಂಥಾ ಮನಸ್ಸಿನವರು. ಒಬ್ಬರು ಹೊಗಳುಬಾಕರಾದರೆ ಮತ್ತೊಬ್ಬರು ಸುಳ್ಳುಕೋರರು. ಇವರೆಲ್ಲರ ಮಧ್ಯೆ ಅಭಿ ಮತ್ತು ಮೇಘಾಳ ಪ್ರೇಮಕಥೆ. ನಾಲ್ಕು ವರ್ಷ ಒಟ್ಟಿಗೇ ಓದಿದರೂ ಹೇಳಿಕೊಳ್ಳಲಾಗದ ಅಭಿಯ ಪ್ರೀತಿ. 

ನವಿರು ಹಾಸ್ಯ - ಮುಚ್ಚಿಟ್ಟ ಪ್ರೀತಿಯ ಮಧ್ಯೆ ತೂಗಾಡುತ್ತ ಸಾಗುವ ಲೈಟ್ ಕಥೆಯ ಮಧ್ಯೆ ಮತ್ತೊಂದು ರಾಜಕೀಯ ಕಥೆಯ ಎಳೆ. ರಾಜಕೀಯದಲ್ಲಿ ಎಲ್ಲರೂ ದಾಳಗಳೇ. ಉರುಳಿಸಿದಂತೆ ಉರುಳುತ್ತಿಲ್ಲವೆಂದು ಅಂದುಕೊಳ್ಳುತ್ತಲೇ ರಾಜಕೀಯ ಚೌಕಾಬಾರದಲ್ಲಿ ಕಾಯಿಗಳು ನಡೆಯುತ್ತಲೇ ಹೋಗುವಂತೆ ಎಲ್ಲವೂ ಅಡವು ಇಲ್ಲಿ; ಕಾಲಕಾಲಕ್ಕೆ ಎಲ್ಲರೂ ತೊಡರು ಇಲ್ಲಿ. ರಜಸ್ಸು - ತಮಸ್ಸಿನ ರಾಜಕೀಯದ ನಡೆಯ ಮಧ್ಯೆ ಜನಜೀವನಕ್ಕಿರುವ ನಂಟು? ಎರಡೂ ಕಥೆಗಳಿಗಿರೋ ಬೆಸುಗೆ? ಅದು ತಿಳಿಯಲು ನೀವು ರಾಜರಥ ಹತ್ತಲೇಬೇಕು. ರಾಜರಥದಲ್ಲಿ ಬರುವ ಸಿನಿಕ್ಕು ಅಭಿಯ ಕಥೆಯಲ್ಲಿಲ್ಲ, ರಾಜಕಾರಣದ ತಿರುವುಗಳಲ್ಲಿದೆ. ಈ ಕುರಿತು ಏನೇ ಹೆಚ್ಚು ಹೇಳಲು ಹೋದರೂ it will be a spoiler. ನಿರೂಪನ ಕಥೆಗಿಂತಾ, ಆರ್ಯನ ಕಥೆಗಾಗಿಯೇ ರಾಜರಥ ಹತ್ತಬೇಕಿದೆ. 

ಹೊಸತಾದ ನಿರೂಪಣೆ, ಗಂಡಕ ಮಂಡೂಕ - ಹಾಡಿನಲ್ಲಿ ಅಷ್ಟಾಗಿ ಬಳಸದ ಕನ್ನಡ ಪದಗಳ ಬಳಕೆ ಯಾವ ಭಾಷೆಯ ಹಾಡೆಂದು ಪ್ರೇಕ್ಷಕನಿಗೆ ತಿಳಿಯುವಷ್ಟರಲ್ಲಿ ಹಾಡು ಮುಗಿದಿರುತ್ತದೆ ಅನ್ನುವುದೊಂದು ಬಿಟ್ಟರೆ, ಸಿನಿಮಾ ಮನೋರಂಜನೆಗೆ ಎಲ್ಲಿಯೂ ಕಡಿಮೆ ಮಾಡಿಲ್ಲ. ವಿನೂತನ ನಿರೂಪಣೆಯಿಂದಲೇ ಮನಸೆಳೆಯುವ ಚಿತ್ರ ಇದು. ವಿಶ್ವನಾಗಿ ಆರ್ಯ ನೆಗೆಟಿವ್ ಶೇಡ್ ನಲ್ಲಿ ಮಾಡಿರುವ ಅಭಿನಯ ಎಲ್ಲರಿಗಿಂತಲೂ ಹೆಚ್ಚು ಅಚ್ಚೋತ್ತುತ್ತದೆ. ಇನ್ನು ಭೋಜರಾಜ ಪಿಳಿಕುಳ ನ ಹಾಸ್ಯ, ವಿನಯಾ ಪ್ರಸಾದರ ಕೊಬ್ಬರಿ ಮಿಠಾಯಿ, ನೇಂದ್ರ ಬಾಳೆ ಪಚ್ಚಬಾಳೆ ಹಾಡು ನೆನಪಿನಲ್ಲುಳಿಯುತ್ತವೆ. ಅಂಕಲ್ ರವಿಶಂಕರ್ ಹಾಸ್ಯ, ಮಗದೊಂದು ಟ್ವಿಸ್ಟ್ ಗಾಗಿಯೇ ತುರುಕಲ್ಪಟ್ಟಿದ್ದಾರೆ ಅನ್ನಿಸದೆ ಇರದು. 

ಮೆಸ್ಸೇಜ್ ಇರುವ ಚಿತ್ರಗಳೆಲ್ಲಾ ಸೀರಿಯಸ್ ಸಿನಿಮಾಗಳೆಂದು ಬ್ರಾಂಡ್ ಆಗಬಾರದೆನ್ನುವ ಪ್ರಯತ್ನದಂತಿರುವ ಈ ಚಿತ್ರ ಮನೆಮಂದಿಯೆಲ್ಲಾ ಕೂತು ನೋಡಬಹುದಾದದ್ದು. ಕನ್ನಡದಲ್ಲಿ ಹಿಟ್ ಅನ್ನಿಸಿಕೊಳ್ಳುವುದಕ್ಕಿಂತಾ ತೆಲುಗಲ್ಲಿ ಹಿಟ್ ಆಗುತ್ತದೆನ್ನುವ instinct ಇದೆ. ಕಾದು ನೋಡೋಣ. A good watch.