Tuesday, February 14, 2017

ವ್ಯಾಲೆಂಟೈನ್ ಡೇ ನಮ್ಮ ಸಂಸ್ಕೃತಿಯಲ್ಲ


ವ್ಯಾಲೆಂಟೈನ್ಸ್ ಡೇ ಭರಾಟೆ ನೆನ್ನೆ ತಾನೇ ಮುಗಿದಿದೆ. ಆಭರಣದಂಗಡಿಗಳು, ಆನ್ ಲೈನ್ ಶಾಪಿಂಗ್, ಕೆಫೆ ರೆಸ್ಟೋರೆಂಟ್ ಗಳೆಲ್ಲಾ ತಂತಮ್ಮ ಲಾಭಕ್ಕೆ ಫೆಬ್ರವರಿ ಪೂರ್ತಿ ಕೆಂಪು ಬಿಳಿ ಕರಿ ಬಲೂನ್ಗಳನ್ನ ಮೆರೆಸಿದ್ದೇ ಮೆರೆಸಿದ್ದು. ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರೀತಿ (monitory ಪ್ರೀತಿ!) ಹಂಚಿಕೊಳ್ಳಿ ಅಂತ ಎಲ್ಲೆಲ್ಲಿ ನೋಡಿದರೂ ಜಾಹಿರಾತುಗಳು.


ಬಂಗಾರದ ಉಡುಗೊರೆಯ ಜಾಹಿರಾತು ಪದೇ ಪದೇ ಪ್ರಸಾರಗೊಳ್ಳುವಾಗ ಪ್ರತಿ ಬಾರಿಯೂ ಇಗ್ನೋರ್ ಮಾಡಿ ಹೆಂಡತಿಯೊಂದಿಗೆ ಟಿವಿಯೂ ನೋಡೋಹಾಗಿಲ್ಲ! ನೀನೇನು ತಂದೆ ಮುಂಡೇದೆ, ಅಂತ ಆಕೆ ಗಂಡನ ಮೂತಿ ತಿವಿದರೆ? ಒಬ್ಬಂಟಿಯಾಗಿ ಹೊಸ ಊರಿನಲ್ಲಿ ಗರ್ಲ್ ಫ್ರೆಂಡ್ ಇಲ್ಲದೆ ದಿನಾ ಮಜವಾಗಿರೋ ಹುಡುಗರಿಗೆ ಈ ತಿಂಗಳು ಏನೋ ಕಳಕೊಂಡ ಭಾವ! ಇನ್ಯಾರಿಗೋ ಹುಡುಗಿಯೊಬ್ಬಳ ಮೇಲೆ ಭಾರೀ ಮೋಹ. ಹೇಳಿಕೊಂಡು ಇಲ್ಲ ಅನ್ನಿಸಿಕೊಂಡರೆ ಅನ್ನೋ ಭಯ. ಈ ದಿನ ಹೇಳಿ ಅವಕಾಶವಾದಿ ಅನ್ನಿಸಿಕೊಂಡರೆ? ಅದೇ ಕಾರಣಕ್ಕೇ ಇಲ್ಲವೆಂದುಬಿಟ್ಟರೆ? ಗರ್ಲ್ ಫ್ರೆಂಡ್ ಇರುವವರಿಗೆ ಜೇಬಿಗೆ ಭಾರವಾದರೂ ಉಡುಗೊರೆ ಕೊಟ್ಟು ನಿಭಾಯಿಸಲೇ ಬೇಕಾದ ಅನಿವಾರ್ಯ- ಇವೆಲ್ಲ ಈ ವ್ಯಾಲೆಂಟೈನ್ ಡೇಯ ಅಡ್ಡ ಪರಿಣಾಮಗಳು!

ಇವಕ್ಕೆಲ್ಲಾ ನುಣುಚಿಕೊಳ್ಳುವ ಅತೀ ಸುಲಭ ವಿಧಾನ ಅಂದ್ರೆ ವ್ಯಾಲೆಂಟೈನ್ ಡೇ ಪಾಶ್ಚಿಮಾತ್ಯ ಸಂಸ್ಕೃತಿಯ ಉದ್ಘೋಷಿತ ಸ್ವರೂಪ. ನಾವು ಭಾರತೀಯರು. ಭಾರತೀಯ ಸಂಸ್ಕೃತಿಯ ಮೂಲದಲ್ಲಿಯೇ ಇಲ್ಲದ ಪ್ರೇಮಿಗಳ ದಿನ ನಮಗೇತಕ್ಕೆ? ಇದರ ಬದಲು ತಂದೆ-ತಾಯಿಯನ್ನ ಪ್ರೀತಿಸುವ ದಿನವಾಗಲಿ ವ್ಯಾಲೆಂಟೈನ್ಸ್ ಡೇ. ಸ್ನೇಹಿತರಿಗೊಂದು ಥ್ಯಾಂಕ್ಸ್ ಹೇಳುವ ದಿನವಾಗಲಿ ವ್ಯಾಲೆಂಟೈನ್ಸ್ ಡೇ. ಮಕ್ಕಳಿಗೊಂದು ಹೂಮುತ್ತನ್ನಿಟ್ಟು ಅವರ ಜೊತೆ ಕ್ವಾಲಿಟಿ ಸಮಯ ಕಳೆಯುವ ದಿನವಾಗಲಿ ವ್ಯಾಲೆಂಟೈನ್ ಡೇ. ಬಡವರಿಗೋ, ಅನಾಥರಿಗೋ, ಹಿಂದುಳಿದವರಿಗೋ, ಶೋಷಿತರಿಗೋ ಒಪ್ಪತ್ತು ಊಟವೋ ಬಟ್ಟೆಯೋ ಕೊಡುವ ದಿನವಾಗಲಿ ವ್ಯಾಲೆಂಟೈನ್ ಡೇ . ತಮ್ಮನ್ನು ತಾವು ಪ್ರೀತಿಸಿಕೊಳ್ಳುವ ((!)ಯಾವ ರೂಪ ಬೇಕಾದ್ರೂ ಕಲ್ಪಿಸಿಕೊಳ್ಳಿ) ದಿನವಾಗಲಿ ವ್ಯಾಲೆಂಟೈನ್ಸ್ ಡೇ.  ಉತ್ತಮ ಹವ್ಯಾಸವೊಂದನ್ನು ಪ್ರೀತಿಸುವ ದಿನವಾಗಲಿ ವ್ಯಾಲೆಂಟೈನ್ಸ್ ಡೇ- ಹೀಗೆಲ್ಲಾ ಪುಂಖಾನುಪುಂಖ ಸಂವಾದ ನಡೆಸುವವರನ್ನು ಕಂಡು ಸೋಜಿಗವಾಗುತ್ತದೆ. 

ಇಲ್ಲಿನ ಯಾವ ವಾದವೂ ತಪ್ಪೆಂದು ಹೇಳುತ್ತಿಲ್ಲ. ಹೀಗೆ ಯೋಚಿಸುವ ಎಷ್ಟು ಜನ ಅವುಗಳನ್ನು ಆಚರೆಣೆಗೆ ತರುವ ಜೊತೆ, ತನ್ನ ಖಾಸಾ ಸ್ನೇಹಿತೆಗೋ, ಪ್ರೇಮಿಗೋ, ಹೆಂಡತಿಗೋ ವರ್ಷಕ್ಕೊಂದು ದಿನವಾದರೂ ಪೂರ್ಣ ಮೀಸಲಿಟ್ಟು ತಮ್ಮ ಪ್ರೀತಿ ಹೇಳಿಕೊಳ್ಳುತ್ತಾರೆ ಅಂತ ನಂಬೋಣ? ಪ್ರೀತಿಗೆಂದೇ ಪ್ರತ್ಯೇಕ ದಿನ ಬೇಕಿಲ್ಲ ಎನ್ನುವ ಎಷ್ಟು ಜನ ತಮ್ಮ ಪ್ರತಿ ದಿನವನ್ನೂ ಪ್ರೇಮಮಯವಾಗಿಟ್ಟುಕೊಳ್ಳುತ್ತಾರೆ? ವ್ಯಾಲೆಂಟೈನ್ ಡೇ ಆಚರಿಸಿಬಿಟ್ಟರೆ ದೇಶವೇ ಕೊಳ್ಳೆಹೋಗುತ್ತದೆನ್ನುವಂತೆ ಮಾತನಾಡುವುದು ಎಷ್ಟು ಉಚಿತ? ಪ್ರೀತಿ ಹೇಳಿಕೊಳ್ಳಿ, ತೋರ್ಪಡಿಸಿಕೊಳ್ಳಿ. ಯಾವದಿನವಾದರೂ ಸರಿಯೇ. ಆಮೇಲೆ ವ್ಯಾಲೆಂಟೈನ್ ಡೇ ಯ ಅವಾಶ್ಯಕತೆಯಾದರೂ ಯಾಕಿರುತ್ತೆ ಸಂಬಂಧಗಳಲ್ಲಿ? ಪ್ರೇಮಿಗಳ ದಿನವೆಂದು ಉಡುಗೊರೆ ಕೊಟ್ಟರೆ ಕೊಡಲಿ ಬಿಡಿ. ಹಾಗಾದರೂ ಮತ್ತೊಂದು ಪ್ರೀತಿಯ ಚಿನ್ಹೆ ನಂಟಿನ ಹೆಸರಲ್ಲಿ ಸೇರ್ಪಡೆಯಾದೀತಲ್ಲ. ಪ್ರೀತಿಯ ದಿನದ ನೆಪಮಾಡಿ ಒಂದು ಪೂರ್ತಿ ದಿನ ಜೊತೆ ಕಳೆಯಲಿ ಬಿಡಿ ಪ್ರೇಮಿಗಳು- ಮಕ್ಕಳು ಹೆತ್ತು ಹೋಂ ವರ್ಕ್ ಮಾಡಿಸುವುದರಲ್ಲಿ ಬೇಸತ್ತ ದಂಪತಿಗಳೋ, ಅನುದಿನವೂ ೧೨ ತಾಸು ದುಡಿದುಡಿದು ಬುದ್ಧಿ ಅಡವಿಕ್ಕುವ ಜನ ಅವತ್ತೊಂದು ರಾತ್ರಿ ನೆಮ್ಮದಿಯಾಗಿ ಜೊತೆಯಲ್ಲಿ ಕೂತು ಸಮಯ ಕಳೆಯಲಿ ಬಿಡಿ, ಕಾವ್ಯಾತ್ಮಕ ಮಾತುಗಳನ್ನು ಬರೆದೋ - ಕೊರೆದೋ ಕೊಡಲಿ ಬಿಡಿ. ಆಚರಣೆಯಲ್ಲಿ ಹೊಸತನ ತಂದು ಸ್ವಲ್ಪ ಬುದ್ಧಿ ತೀಕ್ಷ್ಣಗೊಳಿಸಿ ಕ್ರಿಯೇಟಿವ್ ಆಚರಣೆ ಮಾಡಲಿ ಬಿಡಿ. ದುಡ್ಡು ಕೊಟ್ಟು ಆಭರಣವೋ, ಬಟ್ಟೆಯೋ ಮತ್ತೊಂದೋ ಕೊಂಡುಕೊಂಡೇ ಸಂಗಾತಿಯನ್ನು ಪ್ರಸನ್ನ ಪಡಿಸಬೇಕಾದ್ದಿಲ್ಲವೇ ಇಲ್ಲ. ನಾಲ್ಕು ಸಾಲುಗಳ ಪ್ರೇಮಮಯ ಕವಿತೆಯಾದರೂ, ಮನೆಕೆಲಸ ಮಾಡುವುದರಲ್ಲಿ ಸಹಾಯ ಮಾಡಿ ಆಕೆಯನ್ನು (ಅಥವಾ ಆತನನ್ನು) ಕೂರಿಸಿ ಮಾತಾಡಿಸಿದರೂ, ಎಂದೋ ಕರೆದುಕೊಂಡು ಹೋಗಬೇಕಾದ ಸ್ಥಳಕ್ಕೆ ಭೇಟಿಯೋ (ಪಾರ್ಕ್ ನಲ್ಲೊಂದು ವಾಕ್), ಇನ್ನೂ ಹಲವಾರು ಓಲೈಕೆಯ ದಾರಿಗಳಿಂದ ಪ್ರೀತಿಯ ಆಚರಣೆ ಸಾಧ್ಯ. ಸೃಜನಶೀಲತೆ ಇದ್ದಲ್ಲಿ sky is the limit. ಆಚರಣೆ ಬೇಡ ಅನ್ನುವ ಜನವೆಲ್ಲಾ ಆಲೋಚಿಸಿಕೊಳ್ಳಿ.  ಒಟ್ಟಿನಲ್ಲಿ ಆಚರಿಸಲಾಗದ್ದಕ್ಕೆ ವ್ಯಾಲೆಂಟೈನ್ ಡೇ ನಮ್ಮ ಸಂಸ್ಕೃತಿಯಲ್ಲ ಅನ್ನೋದು ನಿಂತರಾಯಿತು! ಜೀವನ ಸುಖಮಯ.