ಇಂಗಿತ, ಆಸ್ಥೆ-ಆಸೆಗಳನ್ನು, ಕೊನೆಗೆ ತನ್ನತನವನ್ನೂ ಜೀವನದ ಬಾಹ್ಯ ಗೆಲುವುಗಳ
ವಾಂಛಲ್ಯಕ್ಕಾಗಿ ಬುದ್ಧಿಗೆ ನಿಲುಕದಂತೆ ಬೀಗ ಹಾಕಿ ಯಾಂತ್ರಿಕ ಬದುಕಿಗೆ ಹೊಂದಿಕೊಂಡುಬಿಟ್ಟಿರುವ ಕಥಾನಾಯಕಿ-ಪಲ್ಲವಿ.
ಚಿಗುರಿನಲ್ಲೇ ಮಗನೊಂದಿಗೆ ಅಂತರವನ್ನು ಅಳಿಸಿಹಾಕಲು ಪ್ರಯತ್ನಿಸದೆ ಅಂತರ್ಮುಖಿಯಾಗಿ ತನ್ನೊಳಗೇ
ಉಳಿದುಹೋದ ತಂದೆ. ಚಿಕ್ಕಂದಿನಲ್ಲೇ ದೂರವಾದ ತಾಯಿ. ತಾನಾಯಿತು-ತನ್ನ ಕೆಲಸವಾಯಿತೆಂದು
ಕರ್ತವ್ಯದಾಚೆಗಿನ ಪ್ರೀತಿಯ, ಅನುಭೂತಿಯ, ಸ್ನೇಹದ, ಸಲುಗೆಯ ಆಕರ್ಷಣೆಯತ್ತ ತಾನಾಗಿ ಹಾತೊರೆಯದ
ಗಂಡ-ರಘು. ತಂದೆಯನ್ನು ಅವರ ತಪ್ಪಿನಿಂದಾಚೆಗೆ ಎಳ್ಳುಮಾತ್ರವೂ ನೋಡದೇ ಹಳಿಯುವ ಅಣ್ಣ.
ಪಲ್ಲವಿಗೆ ಆರಂಕಿ ಸಂಬಳದ ಬಹುರಾಷ್ಟ್ರೀಯ ಕಂಪನಿಯ ಜವಾಬ್ದಾರಿಯುತ ಸಾಫ್ಟ್ ವೇರ್ ಕೆಲಸ.
ತನ್ನ ಕಡೆ ಯಾರಿಗೂ ಕಾಳಜಿಯೇ ಇಲ್ಲವೇನೋ ಅಂತ ಸುಲಭವಾಗಿ ಅನ್ನಿಸಿಬಿಡುವಂಥಾ ಸಂದರ್ಭ ಹಳೆಯ ಗೆಳೆಯ
ಚೇತು ಸಿಕ್ಕಾಗ ಸ್ಥಾಯಿಯಾಗಿಬಿಡುತ್ತದೆ. ಅಲ್ಲಿಂದಾಚೆಗೆ ಪಲ್ಲವಿಗೆ ತನ್ನ ಜೀವನದ ಹೊಂದಾಣಿಕೆಗಳು
ಬೃಹತ್ತಾಗಿ ಕಾಣತೊಡಗುತ್ತವೆ. ರಘುವಿನ ಪ್ರತಿ ಮಾತನ್ನೂ ನಡೆಯನ್ನೂ ಚೆತುವಿನೊಂದಿಗೆ ತುಲನೆ
ಮಾಡುತ್ತಾ ನೆಮ್ಮದಿಯಿಂದ ದೂರವಾಗುತ್ತಾಳೆ ಪಲ್ಲವಿ. ಜೀವನ ನಿರಾಸೆಯ ಅಲೆಗಳ ಮೇಲಿರುವಾಗ
ತಂಗಾಳಿಯಂತೆ ಮತ್ತೆ ಬರುತ್ತಾನೆ ಚೇತು.
ಮುಂದೆ ಆಕೆಯ ತುಮುಲಗಳು ಏನು? ಎಂದಿಗೋ ಕಳೆದುಕೊಂಡ ತನ್ನತನವನ್ನು ಹುಡುಕುತ್ತ
ಆಕೆಯ ನಡೆಗಳೇನು? ಇಲ್ಲಿ ಎಷ್ಟೋ ವರ್ಷ ಕಳೆದು ಸಿಕ್ಕ ಗೆಳೆಯನ ಹತ್ತಿರ ಬಾಲ್ಯವನ್ನು
ಕಂಡುಕೊಳ್ಳುವ ಪ್ರಯತ್ನ, ಚೇತುವಿನಲ್ಲೇ ತನ್ನ ಜೀವನದ ಅಷ್ಟೂ ಪಾತ್ರಗಳನ್ನು ಕಾಣುವ ಪಲ್ಲವಿ, ತನ್ನ
ಜೀವನವನ್ನ ವಿಶ್ಲೇಷಿಸಿಕೊಳ್ಳುವತ್ತ ಸಾಗುವ ದಾರಿ- ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದಾರೆ
ಲೇಖಕಿ.
“ಕ್ಷಮೆ”- ಲೇಖಕಿಯ ಮೊದಲನೆಯ ಕಾದಂಬರಿ ಅಂತ ಕೊಂಚಮಾತ್ರವೂ ಅನ್ನಿಸದಿರುವ ಪುಸ್ತಕ.
ಲೇಖಕಿಯ ವಿಚಾರ ಪ್ರಬುದ್ಧತೆ ಓದುತ್ತ ಓದುತ್ತ ಸ್ಪಷ್ಟವಾಗುತ್ತ ಹೋಗುತ್ತದೆ. ಎಲ್ಲಿಯೂ ಎಳೆಯದೆ
ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ- ಕ್ಷಮೆ. ಎಂದಿಗೂ ಕನ್ನಡ ಪುಸ್ತಕವನ್ನೇ ಓದಿರದವರೂ ಭಾಷಾ
ಪ್ರವೇಶಕ್ಕಾಗಿ, ಕಾದಂಬರಿ ಪ್ರಪಂಚದ ಪ್ರವೇಶಕ್ಕಾಗಿ ಓದುವಂತೆ ಮಾಡಬಲ್ಲ ಭಾಷೆ, ವಿಚಾರ ಎರಡೂ ಇದೆ
ಈ ಕಾದಂಬರಿಯಲ್ಲಿ.
ಭೈರಪ್ಪನವರಿಂದ ತಿದ್ದಲ್ಪಟ್ಟವರು ಅಂದ ಕೂಡಲೇ ಕುತೂಹಲದಿಂದ ಪುಸ್ತಕ ಬಿಡುಗಡೆಗೇ
ಹೋಗಿ ಕೊಂಡ ಪುಸ್ತಕ- ಭಾಷೆಯಲ್ಲೇ ಆಗಲೀ, ವಿಚಾರದಲ್ಲೇ ಆಗಲಿ ನಿರಾಸೆ ಮಾಡಲಿಲ್ಲ. ಇನ್ನಷ್ಟು
ವಿಸ್ತಾರವನ್ನು ಬಯಸಿದ್ದುದಕ್ಕೆ ಮಾತ್ರ ಕೊಂಚ ತಣ್ಣೀರೆರೆಚಿದಂತಾಯ್ತು. ರಘು ಹಾಗು ಪಲ್ಲವಿಯ ತಂದೆ-ತಾಯಿಯ
ವ್ಯಕ್ತಿತ್ವಕ್ಕೆ ಇನ್ನೂ ವೇದಿಕೆ ಹಾಗು ಒಳನೋಟ ಕೊಡಬಹುದಿತ್ತೇನೋ. ಪಲ್ಲವಿಯ ಪರಿಭಾಷೆಯಲ್ಲಿಯೇ
ಇಡೀ ಪುಸ್ತಕವಿರುವುದರಿಂದ ಆ ಅವಕಾಶವಾಗಿಲ್ಲ ಅಂತ ದಟ್ಟವಾಗಿ ಅನ್ನಿಸುತ್ತದೆ. ಬರುವ ಎಲ್ಲ
ಪಾತ್ರಗಳ ಮನೋಗತಗಳನ್ನೂ, ಭಾವನೆಗಳನ್ನೂ ವಿವರಿಸಿದ್ದರೆ ಕಥೆ ಇನ್ನಷ್ಟು ಸ್ಪಷ್ಟತೆ ಪಡೆಯುತ್ತಿತ್ತೇನೋ. ಖಂಡಿತವಾಗ್ಯೂ ಕನ್ನಡ ಕಾದಂಬರಿಗಳಲ್ಲಿ ಮುಂಚೂಣಿಗೆ ಸಾಗಬಹುದಾದ ಲೇಖಕಿ- ಸಹನಾ ವಿಜಯಕುಮಾರ್.
ಗುಡ್ ರೀಡ್.. ಕಾದಂಬರಿಪ್ರಿಯರು ಓದಿ ನೋಡಬೇಕಾದ ಪುಸ್ತಕ. ನಾನಂತೂ ಹಿಡಿದಾಗಿನಿಂದ ಕೆಳ ಬಿಡದೆ ಮುಗಿಸಿರುವ ಪುಸ್ತಕ.