Wednesday, August 28, 2013

ನನ್ನ ಮಗು

ಕನಸಿದ್ದ ನಗು ಈಗ ನನಸಾಗಿದೆ. ಒಳಗೆ ಮಿಡುಕಾಡುವ ಜೀವವೊಂದು ಎಲ್ಲಿಂದ ಬಂತೆಂದು ಅಚ್ಚರಿ ಪಡುವಷ್ಟರಲ್ಲಿ, ನಾನಿನ್ನೂ ನನ್ನ ಬಸಿರನ್ನು ಮನಹ್ಪೂರ್ತಿ ಆಸ್ವಾದಿಸುವ ಮೊದಲೇ, ಅವಧಿಗೂ ಮುನ್ನವೇ ಪುಟ್ಟ ಗಂಡು ಮಗುವೊಂದು ನನ್ನ ಮಡಿಲು ತುಂಬಿದೆ.

ಜೀವನ ನಿರಂತರ ಕಲಿಕೆ ಅನ್ನುವ ಮಾತು ಚೆನ್ನಾಗಿಯೇ ಅನುಭವಕ್ಕೆ ಬಂತು. ಅವಧಿಗೆ ಮುನ್ನ ಜನಿಸಿದ/ ಪ್ರತ್ಯೇಕ ವ್ಯವಸ್ಥೆ ಬೇಕಾದ ಮಕ್ಕಳಿಗೆಂದೇ ಇರುವ N-ICU ನಲ್ಲಿ ವಾರದ ಕಾಲ ಇಟ್ಟು, ೪ ದಿನ ಹುಟ್ಟಿದಾರಭ್ಯ ನನ್ನ ಮಗುವನ್ನ ನೋಡಲಾಗಲೇ ಇಲ್ಲ. ಮಕ್ಕಳು ದೂರವಾದಾಗಿನ ವೇದನೆಯನ್ನ ತಿಳಿಸಲೆಂದೇ ಆ ಸಂದರ್ಭ ಬಂತೇನೋ. ಒಟ್ಟಿನಲ್ಲಿ ೧೨ ದಿನ ಆಸ್ಪತ್ರೆಯಲ್ಲಿದ್ದು, ನಂತರ ಮನೆಗೆ ಬಂದಾಗಿನ ಸಮಾಧಾನವೇ ದೊಡ್ಡದು.

ಕೆಲವು ದಿನಗಳಂತೂ ಮಗುವನ್ನು ಪ್ರತಿ ಬಾರಿ ನೋಡಿದಾಗಲೂ ಕಣ್ತುಂಬಿ ಬರುತ್ತಿತ್ತು. ಅದೇ ವಾತ್ಸಲ್ಯದ ಸ್ಫುರಣೆಯಾ? ಎಷ್ಟು ಏಳಿಸಿದರೂ ಏಳದೆ, ಹೊಟ್ಟೆಗೆ ಸರಿಯಾಗಿ ಹಾಲು ಕುಡಿಯದೆ ಹಸಿದು ಮಲಗಿದ ಅವನನ್ನು ನೋಡಿದಾಗ ನಾನು ನನ್ನ ತಾಯಿಯನ್ನ ನಾ ಪುಟ್ಟವಳಿದ್ದಾಗ ಊಟ ಮಾಡದೇ ಕಾಡಿಸಿ, ಮಾತು ಕೇಳದೇ ಹೋದಾಗೆಲ್ಲ ಆಕೆಯ ಮನಸ್ಸಿಗೆ ಎಷ್ಟು ಕಷ್ಟವಾಗಿರಬಹುದೆಂಬ ಭಾವ...

ಜಗವೊಂದು ತೂಕವಾದರೆ ಮಗುವೊಂದು ತೂಕ ಅನ್ನುವ ಮಾತು ಈಗ ಅನುಭವವೇದ್ಯವಾಗಿದೆ. ಟೀವಿ, ಓದು, ಬರವಣಿಗೆ, ಮೊಬೈಲು, ಎಲ್ಲ ಹವ್ಯಾಸ- ಅಭ್ಯಾಸಗಳನ್ನೂ ಬಿಟ್ಟು ಮಗುವೇ ನನ್ನೆಲ್ಲ ಮನೋರಂಜನೆಯಾಗಿದೆ. ಮಲಗಿದಾಗ ಕನಸಿ ನಗುವಾಗಿನ ಸೊಗಸು, ಹಸಿದಾಗ ಗುಬ್ಬಿ ಮರಿಯಂತೆ ತೆಗೆಯುವ ಪುಟ್ಟ ಬಾಯಿ, ಅಳು, ಕೈಗೆತ್ತಿಕೊಂಡ ಕೂಡಲೇ ನಿನ್ನನ್ನೇ ನಾ ಕೇಳಿದ್ದು ಅನ್ನುವ ಹಾಗೆ ಸುಮ್ಮನಾಗುವ ಅವನ ಮೌನ, ನಿದ್ದೆಯಲ್ಲಿನ ಗಾಂಭೀರ್ಯ, ಎಲ್ಲವೂ ಮುದ್ದು ಮುದ್ದು.

ಸಿಸೇರಿಯನ್ ಆದ ನಂತರ ಹೆಚ್ಚು ಮಲಗಿಯೇ ಇರಬೇಕೆಂಬ ನಿಯಮ ಗಾಳಿಗೆ ತೂರಿ ಆಗಿದೆ. ತಿನ್ನುವ ಸಪ್ಪೆ ಊಟೋಪಚಾರದ ಕಡೆ ಗಮನವೇ ಇಲ್ಲ. ಅವನು ಎದ್ದಿರುವಾಗ ಅವನ ಅವಶ್ಯಕತೆಗಳ ಕಡೆ ಗಮನ, ಮಲಗಿರುವಾಗ ಮುದ್ದು ಮುಖ ನೋಡಿ ನಿದ್ದೆಯ ಭಾವಗಳನ್ನು ನೋಡುವ ಸಿರಿಯಲ್ಲೇ ಕಾಲ ಕಳೆಯುತ್ತಿದ್ದೇನೆ.

ಈ ಪರಿಪೂರ್ಣತೆ ಚಿರವಾಗಿರಲಿ ಅಂತ ಆಸೆಪಡುತ್ತಾ,

ಅಮ್ಮನಾದ,

ಸಂತಸದ ನಾನು.