Thursday, March 21, 2013

ಪ್ಯಾಪಿಲಾನ್ - ೧,೨, - ಪ್ರದೀಪ ಕೆಂಜಿಗೆ, ಕೆ ಪಿ ಪೂರ್ಣಚಂದ್ರ ತೇಜಸ್ವಿ (ಮೂಲ- ಹೆನ್ರಿ ಛಾರೇರೆ)


ಹೆನ್ರಿ ಛಾರೇರೆ 
MBA ಓದುವಾಗ ನನ್ನ ಕಾಲೇಜಿನಲ್ಲಿ ಪುಸ್ತಕಗಳ ಒಂದು ಸ್ಟಾಲ್ ಇಟ್ಟಿದ್ರು. ಆಗ ಸ್ನೇಹಿತ ಅಕ್ಷಯನ ಜೊತೆ ಕೆಲವು ಬುಕ್ಸ್ ಕೊಂಡಿದ್ದೆ. ಪ್ಯಾಪಿಲಾನ್ ಪುಸ್ತಕ ಕೊಳ್ಳೋವಾಗ ಅವನಂದ, ನಂಗೂ ಈ ಪುಸ್ತಕ ಬೇಕು, ನೀನು ಪ್ಯಾಪಿಲಾನ್ ಭಾಗ ೧ ತಗೋ, ನಾನು ಭಾಗ ೨ ತಗೋತೀನಿ. ಖರ್ಚು ಕಮ್ಮಿ, ಅದಲು ಬದಲು ಮಾಡಿಕೊಂಡು ಓದೋಣ ಅಂದ. ಅಲ್ಲಿಂದ ಶುರುವಾಯ್ತು ನಮ್ಮ ಕೋಳಿ ಜಗಳ. ಪುಸ್ತಕವನ್ನೇನೋ ಕೊಂಡು ಆಯ್ತು. ಮೊದಲು ಓದಿ ಎರಡೂ ಪುಸ್ತಕ ನಿಂಗೆ ಓದೋಕೆ ಕೊಡ್ತೀನಿ ಅಂದ ಅಕ್ಷಯ ವರ್ಷಗಟ್ಟಲೆ ಮುಗಿದ್ರೂ ಕೊಡ್ಲೇ ಇಲ್ಲ!! ನಾನಂತೂ ಪೀಡಿಸೋಕೆ ಶುರುವಿಟ್ಟೆ. ಪುಸ್ತಕ ಕೊಡು ಅಂತ ಒಂದೇ ಗೋಳು ನಂದು. ಅಕ್ಷಯ ಏನು ಮಾಡಿದ್ರು ಕೊಡಲೊಲ್ಲ. ಕೊನೆಗೆ ಸಪ್ನಾ ಬುಕ್ ನಿಂದ ಆರ್ಡರ್ ಹಾಕಿ ತರಿಸಿ ಕೊಟ್ಟನೆ ವಿನಃ, ಅದೇ ಪುಸ್ತಕಗಳನ್ನ ವಾಪಸ್ ಮಾಡ್ಲಿಲ್ಲ.

ಓದಿದ ನಂತರವೇ ತಿಳಿದದ್ದು, ಅವನು ಆ ಪುಸ್ತಕಗಳಿಗೆ ಜೋತು ಬಿದ್ದದ್ದು ಯಾಕೆ ಅಂತ. ಇಂಥಾ ರೋಚಕ ಆತ್ಮಕಥೆಯನ್ನ ನಾನೇ ಮೊದಲು ಓದಿದ್ದರೂ ಅವನಿಗೆ ಹಿಂದಿರುಗಿಸ್ತಿರಲಿಲ್ಲ

ಒಬ್ಬ ಖೈದಿ ಕಾರಾಗೃಹದಿಂದ ಎಷ್ಟು ಬಾರಿ ಪಲಾಯನಗಯ್ಯಲು ಸಾಧ್ಯ? ಕಪ್ಪು ಜಗತ್ತಿಗೆ ಸೇರಿದ್ದರೂ ನಮ್ಮ ಕಥಾನಾಯಕ ಹೆನ್ರಿ (ಉರ್ಫ್ ಪ್ಯಾಪಿಲಾನ್)ಗೆ ಸುಳ್ಳು ಆಪಾದನೆಯ ಮೇಲೆ ಸಿಕ್ಕಿ ಹಾಕಿಸಿ ಜೀವಾವಧಿಯಂಥಾ ಕಠೋರ ಶಿಕ್ಷೆಗೆ ತಳ್ಳಿದ ಫ್ರಾನ್ಸ್ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಕುದಿ ಸಿಕ್ಕಿಹಾಕಿಕೊಂಡಂತೆಲ್ಲ ಸ್ವಾತಂತ್ಯ ಬಯಸುವ ಪಲಾಯನದೆಡೆಗೆ ಅವನನ್ನು ಪ್ರೇರೇಪಿಸುತ್ತದೆ. ನರಕ ಸದೃಶ ಜೈಲುಗಳ ವ್ಯವಸ್ಥೆ ಆತನ ಆತಸ್ಥೈರ್ಯ ಕಲಕುವ ಬದಲು ಹೆಚ್ಚು ವ್ಯವಸ್ಥಿತಗೊಳಿಸುತ್ತದೆ. ಒಬ್ಬರಾದಂತೆ ಒಬ್ಬ ಸ್ನೇಹಿತರನ್ನು ಪಲಾಯನದ ಮಜಲುಗಳಲ್ಲಿ ಕಳೆದುಕೊಳ್ಳುವ ಹೆನ್ರಿ ಎರಡು ಬಾರಿ ಏಕಾಂತ ಸೆರೆವಾಸಕ್ಕೆ ತಳ್ಳಲ್ಪಟ್ಟರೂ ಎದೆಗುಂದದೇ ಇದ್ದು, ಆತ್ಮಹತ್ಯೆಯಂಥಾ ಯೋಚನೆ ಆವರಿಸಿದಂತೆಲ್ಲ ಹತ್ತಿಕ್ಕುತ್ತ ಹೋಗುತ್ತಾನೆ. 

ಸೆರೆಮನೆಗಳಲ್ಲಿನ ಅನಾಚಾರ, ಅಲ್ಲಿನ ವಾರ್ಡರ್, ಇತರೆ ಅಧಿಕಾರಿಗಳ ದುರುಳತನ ಮನಕಲಕುವಂತಿದೆ. ಪುಂಡಾಟಗಳಾಗಿ ಕೊಲೆಗಳಾದರೆ, ತನಿಖೆ ನಡೆಯುತ್ತಿದ್ದುದೂ ಅಷ್ಟಕ್ಕಷ್ಟೇ. ಶವಸಂಸ್ಕಾರಕ್ಕೆಂದೇ ಪ್ರತ್ಯೇಕ ಜಾಗಗಳಿಲ್ಲದೆ ಶವವನ್ನು ಗೋಣಿಯೊಳಗೆ ತುಂಬಿ ಸಮುದ್ರದ ಶಾರ್ಕ್ ಗಳ ಮಧ್ಯೆ ಎಸೆಯಲಾಗುತ್ತಿತ್ತು. ಏಕಾಂತ ಸೇರೆವಾಸವಂತೂ ಅತೀ ಕೀಳು ವ್ಯವಹಾರ. ಪುಟ್ಟದಾದ ಭಾಗಶಃ ಕತ್ತಲ ಕೋಣೆಯೊಳಗೆ ದೂಡಿದರೆ ಮುಗಿಯಿತು; ಅಲ್ಲೇ ವರ್ಷಗಟ್ಟಲೆ ಬಂಧಿ. ಯಾರೊಟ್ಟಿಗೂ ಮಾತಾಡುವ ಹಾಗೇ ಇಲ್ಲ. ಚಿಕ್ಕ ಕಿಂಡಿಯೊಂದರಿಂದ ಆಹಾರದ ಸರಬರಾಜು, 2 ವಾರಕ್ಕೊಮ್ಮೆ ಕಿಂಡಿಯಿಂದ ಮುಖ ಹಾಕಿ ಅಧಿಕಾರಿಗಳ ಸಮ್ಮುಖದಲ್ಲಿ ಕ್ಷೌರ. ಅಪರೂಪಕ್ಕೊಮ್ಮೆ ಸಾಗರದಲ್ಲಿ ಸ್ನಾನ. ದಿನವೂ ಬಹಿರ್ದೆಸೆಗೆ ಹೋಗಲು ಒಂದು ಬಕೆಟ್ಟು, ಮೇಲೆ ತೂತಿರುವ ಹಲಗೆ. ಉಪಯೋಗಿಸಿದ್ದಾದ ಮೇಲೆ ಬಕೆಟ್ ಹೊರದೂಡಿ ಸುಮ್ಮನಾಗಬೇಕು. ಚಿಕ್ಕ ಪುಟ್ಟ ಖಾಯಿಲೆ ಬಂದು ವೈದ್ಯರು ಭೇಟಿಯಿದ್ದರೆ, ತೂತಿನಿಂದಲೇ ಕೈ-ಕಾಲು ಆಚೆ ಹಿಡಿದು ಪರೀಕ್ಷೆ. ಊಟವಂತೂ ಕಾಯಿಲೆಗಳಿಂದ ತಡೆಯುವಷ್ಟು ಪುಷ್ಟವಾದುದಲ್ಲ. ಏಕಾಂತ ತಡೆಯಲಾಗದೆ ಮಾನಸಿಕ ಅಸ್ವಸ್ಥಗೊಂಡು, ಆತ್ಮಹತ್ಯೆಗಯ್ಯುವವರೇ ಎಷ್ಟೋ ಜನ. ಫ್ರಾನ್ಸ್ ನ ಅಂದಿನ ಅತ್ಯಂತ ಕೀಳು ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆ ಕನಿಕರ ಬರುವಂತಿದೆ. ಆ ಮಟ್ಟಿಗೆ ಜಗತ್ತಿನ ಕಣ್ತೆರೆಸಿದ ಬರವಣಿಗೆ ಪ್ಯಾಪಿಲಾನ್ ನದ್ದು. 

ಪಲಾಯನದಲ್ಲಿ ಎಷ್ಟೋ ಪೌರರು, ಅಧಿಕಾರಿ ವರ್ಗದವರು, ಸ್ನೇಹಿತರು, ಖೈದಿಗಳು, ಅಪರಿಚಿತರು ಸಹಾಯ ಮಾಡುತ್ತಾರೆ.

ಪ್ಯಾಪಿಲಾನ್ ಬಳಸಿದ ಪಲಾಯನ ಮಾರ್ಗ 
ಪಲಾಯನಗಯ್ಯುತ್ತಾ ಪಿಜನ್ ಐಲ್ಯಾಂಡ್ ತಲುಪುವ ಹೆನ್ರಿ ಮತ್ತವನ ಸ್ನೇಹಿತರಿಗೆ ಅಲ್ಲಿನ ಕುಷ್ಟ ರೋಗ ಪೀಡಿತ ಖೈದಿಗಳಿಂದ ಸಿಗುವ ಸಹಾಯ ಅವಿಸ್ಮರಣೀಯ. ತಾವೇ ಸಾವನ್ನು ಎದುರು ನೋಡುತ್ತಿದ್ದರೂ ಇವರ ಮೇಲಿನ ಕಾಳಜಿಯಿಂದ ಇವರು ಇದ್ದಷ್ಟು ದಿನ ಏನೂ ಕೊರತೆಯಾಗದಂತೆ, ತಮ್ಮ ಜಾಡ್ಯ ಇವರಿಗೆ ತಾಕದಂತೆ ಆಹಾರ, ಬಟ್ಟೆ, ಹೊದಿಕೆ ಎಲ್ಲವನ್ನೂ ಶುದ್ಧಿ ಮಾಡಿ ಮುಟ್ಟಗೊಟ್ಟು, ಹಣವನ್ನೂ ಒದಗಿಸಿ ಕೊಡುತ್ತಾರೆ. 

ಅಲ್ಲಿಂದ ಕೊಲಂಬಿಯಾದಲ್ಲಿ ಮತ್ತೆ ಸೆರೆಸಿಕ್ಕು ಅಲ್ಲಿಂದ ತಪ್ಪಿಸಿಕೊಂಡು ಹೊರಡುವ ಹೆನ್ರಿ, ಗೊಜಿರ ಬುಡಕಟ್ಟಿನ ಬಳಿ ನೆಲೆಯಾಗುತ್ತಾನೆ. ಅಲ್ಲಿನ ಜನ ಇವನನ್ನು ತಮ್ಮೊಳಗೊಬ್ಬನೆಂದು ಸ್ವೀಕರಿಸಿದರೂ ವರ್ಷದವರೆಗೂ ನಿಲ್ಲದೆ ಹೆನ್ರಿಯ ಸೇಡಿನ ಕಿಚ್ಚು ಮತ್ತೆ ಆತನನ್ನು ಸೆರೆಗೆ ದೂಡುತ್ತದೆ. 

ಬಾರಂಕ್ವಿಲಾದಲ್ಲಿ ಬಂದಿಯಾಗುವ ಈತನ 3 ಪಲಾಯನಗಳು ವಿಫಲವಾಗಿ ಮುಂದೆ ರೋಯಲ್ ದ್ವೀಪದಲ್ಲಿಯೂ ಎಲ್ಲವೂ ಹೊಂದಿ ಇನ್ನೇನು ಓಡಿಹೋಗಬಲ್ಲೆ ಅನ್ನಿಸಿದಾಗ 2 ಬಾರಿ ಪ್ರಯತ್ನ ವಿಫಲವಾಗುತ್ತದೆ. ಡೆವಿಲ್ಸ್ ದ್ವೀಪದ ಸುತ್ತ ಶಾರ್ಕುಗಳು ಕಿಕ್ಕಿರಿದಿದ್ದರೂ ಲೆಕ್ಕಿಸದೆ ಕೊನೆಗೆ ಸಮುದ್ರದಲ್ಲಿ ತೇಲುವ ತೆಂಗಿನ ಮೂಟೆಗಳನ್ನು ಉಪಯೋಗಿಸಿ ಕುರೋವು ದ್ವೀಪ ತಲುಪಿಯೇ ಬಿಡುತ್ತಾನೆ. ಅಲ್ಲಿಂದ ಆತನ ಬದುಕು ಇಂಗ್ಲೆಂಡಿನ ಜಾರ್ಜ್ ಟೌನ್ ಗೆ ಕರೆದೊಯ್ಯುತ್ತದೆ. ಕೊಟ್ಟಕೊನೆಯಲ್ಲಿ, ಅಲ್ಲಿಯೂ ನೆಮ್ಮದಿ ಕಾಣದ ಚಿಟ್ಟೆಯಂಥಾ ಪ್ಯಾಪಿಲಾನ್ ವೆನಿಸುವೆಲಾದಲ್ಲಿ ನೆಲೆಯಾಗುತ್ತಾನೆ.

1973 ರಲ್ಲಿ ಈ ಆತ್ಮಕಥೆಯನ್ನು ಆಧರಿತ ಚಲನಚಿತ್ರ ಸಹ ಬಂದಿದೆ. ಕಥೆಯೇ ಪುಸ್ತಕಕ್ಕೊಂದು ಅಸಾಧ್ಯ ಓಘ ಕೊಡುತ್ತದೆ. ಪುಟದ ಪ್ರತಿ ತಿರುವಿನಲ್ಲೂ ಕಥೆಯ ತಿರುವುಗಳೇ!! 

ಕನ್ನಡದಲ್ಲಿ ಓದಿದಂತೆ ವಿಚಾರಗಳು ಇಂಗ್ಲಿಷ್ ಪುಸ್ತಕಗಳಲ್ಲಿ ಅಷ್ಟು ರುಚಿಸುವುದಿಲ್ಲ. ಇಂಗ್ಲೀಶ್ ಓದುವಾಗ ಸಾಮಾನ್ಯವಾಗಿ ಬರೀ ಕಾದಂಬರಿ ಆರಿಸಿಕೊಳ್ಳುವ ನಾನು ಇನ್ನು ಮುಂದೆ ಕಥೆ-ಕಾದಂಬರಿಯೇ ಆದರೂ ವಿಚಾರಾತ್ಮಕ ಪುಸ್ತಕಗಳ ಕಡೆ ವಾಲಬೇಕೆಂದು ನಿರ್ಧರಿಸಿದ್ದೇನೆ. ಬರಿಯ ಇಂಗ್ಲಿಷ್ ಭಾಷಾಜ್ಞಾನಕ್ಕಷ್ಟೇ ಅಲ್ಲದೆ ಸಾಮಾನ್ಯಜ್ಞಾನಕ್ಕಾಗಿಯೂ ಓದಬೇಕೆಂದುಕೊಂಡಿದ್ದೇನೆ.... ಪ್ಯಾಪಿಲಾನ್ ಗೆ, ಅದನ್ನು ಕೊಡಿಸಿದ ನನ್ನ ಸ್ನೇಹಿತನಿಗೆ ಧನ್ಯವಾದ...

Monday, March 18, 2013

ಅಲೆಮಾರಿಯ ಅಂಡಮಾನ್ - ಕೆ ಪಿ ಪೂರ್ಣಚಂದ್ರ ತೇಜಸ್ವಿ


ವಂಡೂರಿನ ಹವಳದ ದಂಡೆಗಳು ಅಂತ ನಮಗೆ ಬಹುಶಃ 10 ನೇ ತರಗತಿಯಲ್ಲ್ಲಿ ಪಾಠ ಇತ್ತು.. 

ಅಲೆಮಾರಿಯ ಅಂಡಮಾನ್ ಓದುತ್ತ ಹೋದಂತೆ ಅದರ ಒಂದು ಭಾಗವಾದ "ವಂಡೂರಿನ ಹವಳದ ದಂಡೆಗಳು" ನನ್ನ ಸ್ಮೃತಿಯಲ್ಲೂ ಅನಾವರಣಗೊಳ್ಳುತ್ತಾ ಹೋಯ್ತು .. ನನ್ನ ಕನ್ನಡ ಪ್ರೇಮದ ಬಗ್ಗೆ ಅಭಿಮಾನವೂ ಹೆಚ್ಚಾಯ್ತೆನ್ನಿ 

Barrier Reef
Fringed coral
ಅಂಡಮಾನ್ ಪ್ರದೇಶವನ್ನು ಬರಿಯ ಪ್ರವಾಸಿ ತಾಣವಾಗಿ ನೋಡದೆ ವಿಸ್ಮಯಗಳ ಪುಟ್ಟದೊಂದು ಹಿಡಿ ಜಗತ್ತಿನ ಹಾಗೆ ಲೇಖಕರು ವಿಸ್ತರಿಸುತ್ತಾ ಹೋಗುತ್ತಾರೆ. ಅಲ್ಲಿನ ಕಾರ್ಬೆನ್ಸ್ ಕೋವ್, ಜಾಲಿ ಬೌಯ್  , ರಾಸ್ಸ್ ದ್ವೀಪಗಳ ಬಗ್ಗೆ ಮಾತ್ರ ಹೇಳದೆ, ಅಲ್ಲಿನ ಜೀವ ವೈವಿಧ್ಯದ ಬಗ್ಗೆ ಬೆಳಕು ಚೆಲ್ಲುತ್ತಾ ಹೋಗುತ್ತಾರೆ. ಕಂಡುಬಂದ ಏಂಜಲ್ ಮೀನು, ಗುಮ್ಮಾಡಲು ಹಕ್ಕಿ (ಇಂಪೀರಿಯಲ್ ಪಿಜನ್), ಗಾಳಕ್ಕೆ ಸಿಕ್ಕದೆ ಪರಾರಿಯಾದ ಸಮುದ್ರದ ಬಣ್ಣವನ್ನೇ ಘನೀಭವಿಸಿಕೊಂಡಂಥಹ ತಿಳಿ ನೀಲಿ ಬಣ್ಣದ ದೊಡ್ಡ ಮೀನು, ಕಂದುಬಣ್ಣದ ಆಕ್ಟೋಪಸ್, ಇವೆಲ್ಲದರ ಬಗ್ಗೆ ಬರೆಯುತ್ತಾರೆ. 

ಗಾಜಿನಷ್ಟು ತಿಳಿ ನೀರಿನ ಅಂಡಮಾನ್ ತೀರ ಪ್ರದೇಶಕ್ಕೆ ಕಾರಣ ಹವಳದ ದಂಡೆಗಳು. 
ಕೋರಲ್ ರೀಫ್ ಗಳ ಬಗ್ಗೆ ಡಾರ್ವಿನ್ ಸಿದ್ಧಾಂತ
(Darwins's Theory about formation of Coral reefs and atoll)

ಸಮುದ್ರ 100ಅಡಿಗಳಿಗಿಂತ ಆಳವಾದ ಕಡೆ ಬೆಳೆಯಲಾರದ, ಸಮುದ್ರದಿಂದ ಸದಾ ತೊಯ್ದ ಎಡೆಗಳಲ್ಲಿ ಮಾತ್ರ ವೃದ್ಧಿಸುವ ಈ ಹವಳದ ದಂಡೆಗಳಿಗೆ ಸೂರ್ಯನ ಬೆಳಕು ಬೇಕೇ ಬೇಕು. ಹವಳದ ರಚೆನೆಯ ಮತ್ತೊಂದು ಸ್ವರೂಪವಾದ ಅಟಾಲ್ ಹಾಗು ಬ್ಯಾರಿಯರ್ ರೀಫ್ ಗಳು ಸಾಗರ ಮೇಲ್ಮೆಯ ವಿಸ್ಮಯಗಳು. ನೋಡಲು ಮನೋಹಕವೆಂದ ಕೂಡಲೇ ಎಲ್ಲ ಹವಳಗಳ ರಚನೆಯೂ ಒಂದೇ ಬಗೆಯದ್ದಿರುವುದಿಲ್ಲ. ಗಾಜಿನಷ್ಟು ಪ್ರಬಲ ಹವಳಗಳು ಕಾಲಿಟ್ಟಲ್ಲಿ ಮೂಳೆಯವರೆಗೆ ಸಿಗಿದು ಹಾಕಬಲ್ಲಷ್ಟು ಅಪಾಯಕಾರಿ ಸಹ. 
ಇಟ್ಟ ಕಡೆ ಕಾಲಿನ ಮಾಂಸವನ್ನೇ ಹಿಸಿದು ಹಾಕಬಲ್ಲ ಸ್ಪೈನಿ ಕೊರಲ್
(Spiny Coral)

ತೇಜಸ್ವಿಯವರು ವಿವರಿಸಿರುವ ಹವಳದ ಬಗೆಗಳ ಚಿತ್ರಗಳನ್ನು ಇಲ್ಲಿ ಹುಡುಕಿ ಕೊಡುವ ಪ್ರಯತ್ನ ಮಾಡಿದ್ದೇನೆ. 


ಕೈಗೆ ಸಿಗದೇ, ದಡ ಹತ್ತದೆ, ಕಡೆಗೆ ಕಣ್ಣಿಗೂ ಬೀಳದ ದೈತ್ಯ ಶಕ್ತಿಯ ಅಂಡಮಾನಿನ ಮೀನುಗಳು ತಮ್ಮ ಮೀನು ಹಿಡಿವ ರೀಲುಗಳನ್ನು ಎಸೆದಂತೆಲ್ಲ ತುಂಡು ಮಾಡಿ ಹೋದ ಸ್ವಾರಸ್ಯ ವಿವರವಾಗಿ ತಿಳಿಯಬೇಕೆಂದರೆ ನೀವು ಅಲೆಮಾರಿಯ ಅಂಡಮಾನ್ ಓದಿ ನೋಡಬೇಕು.