ಒಂಟೆ ಹುಳ (Giraffe Weevil) |
ಕೀಟ, ಪ್ರಾಣಿ ಜಗತ್ತಿನ ಬಗ್ಗೆ ಎಷ್ಟು ತಿಳಿದರೂ ಕಡಿಮೆಯೇ. "ಸಿಲ್ಲಬುಸ್ಸು ಇರಬಾರ್ದೆ ಸಿನಿಮಾ ಥರ" ಅನ್ನೋ ಗುಂಪಿಗೆ ಸೇರಿದ, ಪದವಿ ಓದುವಾಗಿನ ವಿಷಯಗಳನ್ನೆಲ್ಲಾ ಅಲ್ಲಲ್ಲಿಗೇ ಮರೆ ತು ಬಂದ ನನಗಂತೂ ತೇಜಸ್ವಿಯವರ ಪುಸ್ತಕಗಳು ವರದಾನ.
ಮೊಟ್ಟೆ ಇಡಲು ಬೀಡಾದಂತೆ ಕಟ್ಟಿದ ಎಲೆ (Giraffe Weevil Eggtube) |
ಏರೋಪ್ಲೇನ್ ಹುಳದ ರೂಪಾಂತರ (Metamorphosis of Dragon fly) |
ಏರೋಪ್ಲೇನ್ ಚಿಟ್ಟೆಯನ್ನ(Dragon fly) ನಾವೆಲ್ಲರೂ ನೋಡಿರುತ್ತೇವೆ. ಆದರೆ ಅದರ ರೂಪಾಂತರದ ಬಗ್ಗೆ, ತಲೆ ಕೆಡಿಸಿಕೊಂಡಿರೋದಿಲ್ಲ. ಬೇರೆಯ ಸುಮಾರು ಕೀಟಗಳಂತೆ ಕೋಶಾವಸ್ಥೆಗೆ (Cucoon) ಬಾರದೆ ಲಾರ್ವಾದಿಂದ ನೇರವಾಗಿ ಪ್ರೌಢಾವಸ್ ಥೆಗೆ ಬರುವ ವಿಚಾರವನ್ನ ಅನುಭವದೊಡನೆ ನಿರೂಪಿಸುತ್ತಾರೆ.
ಹಾವುಮೀನು (SnakeHead Fish) |
ಬಾವಲಿಗಳ ಸೂಪರ್ ಕಂಪ್ಯೂಟರಿನ ಹಾಗೆ ಕಾರ್ಯ ನಿರ್ವಹಿಸುವ ultrasonic ಶಬ್ಧದ ಬಗ್ಗೆ, ಹಾವುಗಳ ಅತೀಂದ್ರೀಯ ಎಂತಲೇ ಕರೆಯಲ್ಪಡುವ ಶಾಖದ ವ್ಯತ್ಯಯದಿಂದ ನೆರವಾಗುವ ಮೂಗಿನ ಮೇಲಣ ಹೊಳ್ಳೆಗಳ ಬಗ್ಗೆ, ಕಳೆದರೂ ಮತ್ತೆ ಬೆಳೆಯುವ ಬಾಲದ ಹಲ್ಲಿ, ತುಂಡಾದರೂ ಬದುಕಿ ಬೆಳೆಯುವ ಎರೆಹುಳದ ದೇಹ, ಜೀವ ಕಳೆದರೂ ಸುಮಾರು ಹೊತ್ತು ಜೀವದಿಂದಿದ್ದು ತಮ್ಮ ಸ್ನೇಹಿತನ ಬೆರಳು ಕಡಿದ ಆಮೆಯ ಬರಿಯ ತಲೆ, ಏಡಿಯ ಕೊಂಡಿಗಳು, ವಿವಿಧ ಜೇಡಗಳ ಜೀವನ ಕ್ರಮದ ಬಗ್ಗೆ, ಹಾವು-ಮೀನುಗಳ ವಿಚಿತ್ರ ಗರಗಸದಂಥಹ ಮೇಲ್ಮೈಯ್ಯ ಬಗ್ಗೆ ಕಥೆಯ ರೂಪದಲ್ಲಿ ನಮಗರಿವಿಲ್ಲದಂತೆ ಸಾಕಷ್ಟು ವಿಚಾರ ತಿಳಿಸುತ್ತ ಹೋಗುತ್ತಾರೆ ಲೇಖಕರು.
"ಅಕ್ಕಮ್ಮ ಹೇಳಿದ ಕಥೆ"ಯಲ್ಲಿ ಜಿಂಕೆಯೊಂದನ್ನು ಬೇಟೆಗಾರರಿಂದ ಉಳಿಸಿದ್ದಕಾಗಿಯೇ ಸಿದ್ದೆಗೌಡರಿಗೆ ಸಿರಿಯ ಪ್ರಾಪ್ತಿಯಾಯಿತೆಂದು ನಂಬುವ ಮುಗ್ಧ ಕಥೆ ನಿರೂಪಿತವಾಗಿದೆ.
ಮಲಬಾರ್ ಟ್ರೋಜನ್ ಹಕ್ಕಿ (Malabar Trogon) |
ಗದ್ದೆ ಗೊರವ (Mud Snipe) |
ಮಲಬಾರ್ ಟ್ರೋಜನ್ ಹಕ್ಕಿಗಳೆರಡು ಮೂಡಿಗೆರೆಗೆ ಎಲ್ಲಿಂದಲೋ ಹಾರಿ ಬಂದು, ಪ್ರಜ್ವಲಿಸುವ ಉಲ್ಕೆಯಂತೆ ಹೊಳೆವ ಬಣ್ಣದ ಅವುಗಳಲ್ಲೊಂದನ್ನು ಅರಿವಿಲ್ಲದೆ ಸುಖಾಸುಮ್ಮನೆ ತಗಲುವ ಗುಂಡಿನೇಟಿಗೆ ಬಲಿಯಾಗಿ ಹೋಗಿದ್ದು, ಗದ್ದೆಗೊರವನ ಹಕ್ಕಿಯೊಂದು ತೇಜಸ್ವಿ ಹಾಗು ಅವರ ಸ್ನೇಹಿತರು ಮೀನು ಹಿಡಿಯುವಾಗ ಗೆಳೆತನ ಮಾಡಿ, ಅಕಸ್ಮಾತಾಗಿ ಎಸೆದ ಗಾಳಕ್ಕೆ ಸಿಕ್ಕಿದ ಎರೆಹುಳ ತಿನ್ನಲು ಹೋಗಿ ಸಾವಿಗೀಡಾದದ್ದು ಇನ್ನೆರಡು ಕಥೆಗಳಲ್ಲಿ ಬಿಂಬಿತವಾಗಿದೆ.
"ಹೆಜ್ಜೆ ಮೂಡದ ಹಾದಿ"ಯ ಕಥೆ ಅದೇ ಹೆಸರಿನ ಪುಸ್ತಕದಲ್ಲಿಯೂ ಇದೆ. ಅದರೊಡನೆ ಅವರ ಬರವಣಿಗೆಯ ಇನ್ನಷ್ಟು ಸವಿಯೂಟ ಸಹ ಲಭ್ಯ. ಮುದಗೊಳಿಸಲು ಬೇಕಿದ್ದಲ್ಲಿ ನವಿರು ಹಾಸ್ಯ ಇರುವಂತೆಯೇ ಚಿಂತನೆಗೂ ದೂಡುವಂಥಹ ಬರಹ ತೇಜಸ್ವಿಯವರ ಎಲ್ಲ ಪುಸ್ತಕಗಳಲ್ಲಿ ಬಿಂಬಿತವಾಗಿವೆ. ಅವರ ಮೇರು ಬರವಣಿಗೆಯ ಬಗ್ಗೆ ಇದು ನನ್ನ ಮೊದಲ ತೊದಲು ಪರಿಚಯ..
ಈ ಪುಸ್ತಕವನ್ನ ನನಗಾಗಿ ತಂದು ಕೊಟ್ಟ ನಿತಿನ್ ಗೆ ಪ್ರೀತಿಯ ಥಾಂಕ್ಯೂ.