ಒಗ್ಗಟ್ಟಿನಲ್ಲಿ ಬಲ ಅಂತ ಎಲ್ಲರೂ ಹೇಳ್ತಾರೆ. ಆದರೆ ಒಗ್ಗಟ್ಟು ಯಾವುದಲ್ಲಿದ್ದರೆ ಚಂದ? ಇದನ್ನ ಹೇಳಿಕೊಟ್ಟೋರು ಸ್ವಲ್ಪ ಕಮ್ಮಿಯೇ. ಹಾಗಾಗಿ ನಮನಮಗೆ ಹೇಗೆ ಬೇಕೋ ಹಾಗೆಲ್ಲ ಅರ್ಥೈಸಬಹುದು ಇದನ್ನ.
ಒಕ್ಕೂರಲಿನಲ್ಲಿ ಹೇಳಿದ್ದೆವು... "ಸಿಸ್ಟರ್... ಪ್ಲೀಸ್ ಬಿಡಿ ಸಿಸ್ಟರ್.." ಉಂಡದ್ದೆಲ್ಲ ಕರಗಿ ಹೋಗಿ ಕಣ್ಣಂಚಲ್ಲಿ ಅಳು. ಎದುರಿಗೆ ಬೆತ್ತ ಹಿಡಿದ ನಮ್ಮ ಕಾನ್ವೆಂಟಿನ ಹೆಡ್ ಮಿಸ್ಟ್ರೆಸ್. ನಮ್ಮ ಕರುಣಾಜನಕ ಮುಖಗಳನ್ನು ನೋಡಿಯಾದರೂ ಒಳಗೆ ಬಿಡಬಾರದಾ ಅನ್ನಿಸ್ತಿತ್ತು.. ಆದರೆ ಅವರ ಕಣ್ಣಲ್ಲಿ ಸಡಿಲವಿಲ್ಲದ ಬಿಗಿ! ಆ ಕೋಪಕ್ಕೂ ನಾವೇ ಕಾರಣಕರ್ತರಾಗಿದ್ದೆವು.
ಸ್ನೇಹಿತ ನಿಖಿಲ್ ಒಡನೆ ಮಾತಾಡುವಾಗ ನೆನಪಾದದ್ದು ಇದು..
ಸ್ನೇಹಿತ ನಿಖಿಲ್ ಒಡನೆ ಮಾತಾಡುವಾಗ ನೆನಪಾದದ್ದು ಇದು..
ಹೈಸ್ಕೂಲಿನಲ್ಲಿದ್ದಾಗೊಮ್ಮೆ ನನ್ನ ಸಹಪಾಠಿಯ ಗೃಹಪ್ರವೇಶ ಇದ್ದುದರಿಂದ ಕ್ಲಾಸಿನ ಎಲ್ಲ ಹುಡುಗರೂ ತಂತಮ್ಮ ಸೈಕಲ್ಲುಗಳೊಡನೆ ಊಟಕ್ಕೆ ಹೋಗಿದ್ದವರು, ಮಧ್ಯಾನ್ಹ ಊಟದ ಸಮಯ ಮುಗಿದ ನಂತರ ಶಾಲೆಗೆ ವಾಪಸ್ ಬಂದರು. ನಮ್ಮ ಹೆಡ್ ಮಿಸ್ಟ್ರೆಸ್ ತುಂಬಾ ಶಿಸ್ತಿನವರಾದ್ದರಿಂದ, ಇಡೀ ಕ್ಲಾಸಿಗೆ punishment ಆಯ್ತು. ಮಂಡಿಗಾಲಿನ ಮೇಲೆ ನಿಲ್ಲೋ ಶಿಕ್ಷೆ. ದುರ್ಗದ ಬಿಸಿಲಿನ ಝಳ ಬೇರೆ!
ಒಂದು ಪಿರಿಯಡ್ ಮುಗಿಯುವವರೆಗೆ ಹಾಗೆ ನಿಲ್ಲಿಸಿದ HM, ನಂತರ ಮನ ಕರಗಿ, ಹುಡುಗಿಯರಿಗೆ ಒಳಹೋಗಬಹುದೆಂದು ಹೇಳಿ ಕಳಿಸಿದರು. ಆದರೆ ನಾವು ಮಾತ್ರ, ಎಲ್ಲರನ್ನೂ ಕ್ಲಾಸಿಗೆ ವಾಪಸ್ ಕಳಿಸಿದರೆ ಆಗ ಹೋಗುತ್ತೇವೆಂದು ಹಠ ಹಿಡಿದೆವು.
ಕಡೆಗೆ ನಮ್ಮ ಬೇಡಿಕೆಗೆ HM ಮಣಿಯಲೇ ಬೇಕಾಯಿತೆನ್ನಿ! ಸ್ವಲ್ಪ ಹೊತ್ತು ತಡೆದ ನಂತರ, ನನಗೆ ನೆನಪಿದ್ದಂತೆ, ಬಹುಶಃ ಎಲ್ಲರಿಗೂ ಕೈ ಮೇಲೆ ಬೆತ್ತದಿಂದ ಎರಡೆರಡು ಕೊಟ್ಟೇ ಕಳಿಸಿದ ನೆನಪು! ಒಗ್ಗಟ್ಟಿನ ಬೆಲೆ ಇದೇಯೇ???? ಅಂತ ಹಲುಬಿದ ನೆನಪು
ಅಗ್ರಿ ಯ ಡಿಗ್ರಿ ಮಾಡುವಾಗಂತೂ ಒಗ್ಗಟ್ಟಿನ ಶ್ರೀರೂಪ ಕಂಡುಕೊಂಡಿದ್ದು ಹೀಗೆ..
ಮಾರನೆಯ ದಿನ ಇಂಟರ್ನಲ್ ಪರೀಕ್ಷೆ.
ರಾತ್ರಿ ಹನ್ನೆರಡರ ವರೆಗೆ ವಿದ್ಯುತ್ ಇಲ್ಲ! ಛೆ! ಏನು ಮಾಡೋದು? ಓದಲಾಗಲಿಲ್ಲ! ,
Portions ತುಂಬಾ ಹೆಚ್ಚಿದೆ, ಮುಗಿಸಲಾಗಲಿಲ್ಲ!,
ಕ್ಲಾಸಿನಲ್ಲೊಬ್ಬಳು ಚರ್ಚಾಸ್ಪರ್ಧೆಗೆ ಹೊರಡುತ್ತಿದ್ದಾಳೆ, ಹೇಗೆ ತಾನೇ ಪಾಠ ಓದಿಯಾಳು?,
ಅಲ್ಲಿ ಯಾರಿಗೋ ಸ್ಪೋರ್ಟ್ಸ್ ಹತ್ತಿರದಲ್ಲಿದೆ, ವಿಶ್ವವಿದ್ಯಾಲಯ ಪ್ರತಿನಿಧಿಸಬೇಕು ಅವನು, ಸಹಾಯ ಮಾಡಬೇಡವೇ?
ಮೇಲಿನ ಎಲ್ಲ ಕಾರಣಗಳಿಗೂ ಪರೀಕ್ಷೆಯನ್ನೇ ಮುಂದೂಡಿಸಿ ಬಿಡುತ್ತಿದ್ದೆವು..
ತುಂಬಾ ಜನ ಯುವೋತ್ಸವಕ್ಕೆ ಹೊರಟಿದ್ದಾರೆ, ಅವರಿಲ್ಲದ ಪಾಠ ಅದೆಂಥಾ ಪಾಠ?,
crop production ಕ್ಲಾಸ್ನಲ್ಲಿ ನಡು ಬಗ್ಗಿಸಿ ಕೆಲಸ ಮಾಡಿ ಸುಸ್ತಾಗಿದೆ,
ಮತ್ಯಾರೋ ಆಸ್ಪತ್ರೆ ಸೇರಿದ್ದಾರೆ, ನಾವು ನೋಡಲು ಹೋಗದಿದ್ದರೆ ಆಗುತ್ತದೆಯೇ?
ಸ್ನೇಹಿತೆಯ ಹುಟ್ಟು ಹಬ್ಬ, ಎಲ್ಲರೂ ಮಂಡ್ಯಕ್ಕೆ ಹೋಗಿ ಪುಟ್ಟದಾದರೂ ಸರಿ, ಪಾನಿ-ಪೂರಿ ಯ ಪಾರ್ಟಿಯಾದರೂ ಆಗಬಾರದೇ?
ಕ್ಲಾಸುಗಳನ್ನು ಕ್ಯಾನ್ಸಲ್ ಮಾಡಲು ಇವೆಲ್ಲಾ ನಮ್ಮ ನೆಪ.. ಕೊನೆಗೆ ನಮ್ಮ ಒತ್ತಾಯಕ್ಕೆ ಮಣಿದು ನಮ್ಮ ಅಧ್ಯಾಪಕರುಗಳು ಏನಾದ್ರೂ ಮಾಡ್ಕೊಳ್ಳಿ, ಅಂತ ಬಿಟ್ಟದ್ದೂ ಉಂಟು. ಆಗೆಲ್ಲಾ ಇದು ಒಗ್ಗಟ್ಟಿನಿಂದಲೇ ಅಂತ ಗೊತ್ತಿರಲಿಲ್ಲ. ನಿಧಾನವಾಗಿ ಒಗ್ಗಟ್ಟಿನ ಬಲ ಅರಿವಾಗಲು, ಅದರ ಬಳಕೆ ಇನ್ನೂ ಚುರುಕುಗೊಂಡಿದ್ದಂತೂ ನಿಜ..
ಒಗ್ಗಟ್ಟಿನಲ್ಲಿ ಬಲ ಅಂತ ಎಲ್ಲರೂ ಹೇಳ್ತಾರೆ. ನಮನಮಗೆ ಹೇಗೆ ಬೇಕೋ ಹಾಗೆಲ್ಲ ಅರ್ಥೈಸಬಹುದು ಅದನ್ನ.
ನಾನಂತೂ ಹೀಗಷ್ಟೇ ಅರ್ಥ ಮಾಡಿಕೊಂಡಿರೋದು!
ಅರ್ಥವೋ, ಅನರ್ಥವೋ.. ಒಟ್ಟಿನಲ್ಲಿ ಒಗ್ಗಟ್ಟಿನಲ್ಲಿ ಸದಾ ಬಾಲವಿದೆ !!
No comments:
Post a Comment