
ಇಂಥಾ ಥ್ರಿಲ್ಲರ್ ಅನ್ನು ಅರ್ಥಮಾಡಿಕೊಂಡು ಓದುವ ಪ್ರಬುದ್ಧತೆಯೂ ಇರಲಿಲ್ಲವೇನೋ ಮೊದಲ ಬಾರಿ ಓದಲು ಪ್ರಯತ್ನಿಸಿದ್ದಾಗ! ಎರಡನೇ ಬಾರಿ ಓದುತ್ತ ಆದ ಒಂದು ಬಾಹ್ಯ ಅನುಭವವನ್ನ ಇಲ್ಲಿ ಹೇಳಲೇ ಬೇಕು ನಾನು. ಯಾವುದೇ ಒಂದು ಪುಸ್ತಕವನ್ನು ಓದುವಾಗಿನ ಸಂದರ್ಭದಲ್ಲಿ ನಮ್ಮ ಸುತ್ತ ನಡೆಯುವ ಚರ್ಯೆಯಾಗಲೀ, ನಮ್ಮ ಆಗುಹೋಗುಗಳಾಗಲೀ ಪುಸ್ತಕವೊಂದು ಎಷ್ಟು ಪ್ರಭಾವ ಬೀರಿದೆ ಎನ್ನುವುದನ್ನು ತೋರುತ್ತದೆ. ಆಫೀಸಿಗೆ ಹೋಗಿ ಬರುತ್ತಾ ಮೆಟ್ರೋನಲ್ಲಿ ಓಡಾಡುವ ನಾನು ಮಾರ್ಗ ಮಧ್ಯೆ ರೈಲು ಬದಲಾಯಿಸಬೇಕಾಗುತ್ತದೆ. ಬಸ್ ಗಳಲ್ಲಾಗುವಷ್ಟು ಕುಲುಕಾಟ ಇಲ್ಲದಿರುವುದರಿಂದ ಮೆಟ್ರೋ ಪ್ರಯಾಣ ಪುಸ್ತಕ ಓದಲು ಹೇಳಿಮಾಡಿಸಿದಂತಿದೆ.
ಹಾ! ಬರವಣಿಗೆ ಎತ್ತಲೋ ಎಳೆಯಿತು. ವಿಷಯಕ್ಕೆ ಬರುತ್ತೇನೆ. ಹೀಗೊಮ್ಮೆ ಓದುತ್ತಾ ರೈಲು ಬದಲಾಯಿಸುವಾಗ ಕೈಯ್ಯಲ್ಲಿ ತೆರೆದ ಪುಸ್ತಕವಿತ್ತು. ಆ ಕ್ಷಣಕ್ಕೆ ಓದುತ್ತಿಲ್ಲದಿದ್ದರೂ ಈ ಪುಸ್ತಕದಲ್ಲಿನ ಕೆಸರೂರಿನ ಆಗುಹೋಗುಗಳನ್ನ ಮೆಲುಕು ಹಾಕುತ್ತ ಅಲ್ಲಿಯೇ ಸಿಕ್ಕಿಕೊಂಡಿತ್ತು.
- ಕೆಸರೂರಿನ ಸಂಶೋಧನಾ ಕೇಂದ್ರದ ಎಲ್ಲರೂ ನಡೆದು ಬರುತ್ತಿರುವಾಗ "ಭಡ್" ಅಂತ ಬಾಂಬ್ ಸಿಡಿದಂತಹಾ ಶಬ್ಧ. ದೂರದಿಂದ ಕುದಿಯುವ ಟಾರ್ ಮೆತ್ತಿಕೊಂಡ ನಾಲ್ಕು ಜನ ಕೂಗುತ್ತಾ ರೋಡಿನಲ್ಲಿ ಓಡಿಬರುತ್ತ ಟಾರ್ ನ ಭಾರಕ್ಕೆ ಚರ್ಮ ಹಣ್ಣಿನ ಸಿಪ್ಪಿಯಂತೆ ಕಳಚಿದ್ದನ್ನು ಕಂಡು ಅಲ್ಲಿಯೇ ಸ್ಥಂಬೀಭೂತರಾಗಿದ್ದಾರೆ ಎಲ್ಲರೂ. -
ನಾನು ರೈಲಿಳಿದು ಬೇಗ ಹೋಗೋಣವೆಂದು ಎಸ್ಕಲೇಟರ್ ಹತ್ತಲು ಹೋದೆ. ಬೇಗ ಬೇಗ ಅದರ ಮೇಲೆ ನಾಲ್ಕಾರು ಹೆಜ್ಜೆಗಳನಿಟ್ಟೆ. ಅರೆರೆ! ಇದು ಹಿಂದಕ್ಕೇಕೆ ಹೋಗುತ್ತಿದೆ ಅಂತ ಯೋಚಿಸುವಷ್ಟರಲ್ಲೇ ಮುಂದೆ ನೋಡಿದರೆ ಜನ ಇಳಿಯುತ್ತಿದ್ದಾರೆ. ನನ್ನ ಹಿಂದೆ ಜನ 'ಹೋ ಮುಂದೆ ನೋಡಿ' ಎನ್ನುತ್ತಿದ್ದಾರೆ. ಹತ್ತಲು ಬಳಸುವ ಎಸ್ಕಲೇಟರ್ ಬಿಟ್ಟು ಇಳಿಯಲು ಇರುವ ಜಾರುಮೆಟ್ಟಿಲನ್ನು ಬಳಸುತ್ತಿದ್ದೇನೆಂದು ತಕ್ಷಣ ಅರಿವಾಗಿ ಬೀಳದಂತೆ ಸಾವರಿಸಿಕೊಳ್ಳುವಷ್ಟರಲ್ಲಿ ಸಾಕಾಯ್ತು. ಯಾರು ಕಂಡರೋ ಯಾರು ನಕ್ಕರೋ, ನಾನಂತೂ ಸರಸರ ಪಕ್ಕದ ಮೆಟ್ಟಿಲುಗಳಲ್ಲಿ ಹತ್ತಿ ಓಡಿದೆ, ಆಚೀಚೆ ನೋಡದೆ!
No comments:
Post a Comment