ಕ್ಲಾಸ್ಸಿನ ಒಳಗಷ್ಟೇ ಅಲ್ಲದೆ, ಎಲ್ಲ ಮಕ್ಕಳೂ ಗುರುಗಳೆಂದರೆ ಶಾಲೆಯಾಚೆ ಎಂದಿಗೆ ಸಿಕ್ಕರೂ ಸಂತಸ ಹಾಗು ಶಿಸ್ತಿನಿಂದ ಗುಡ್ ಮಾರ್ನಿಂಗ್, ಗುಡ್ ಇವಿನಿಂಗ್ ಗಳನ್ನ ಹೇಳುತ್ತಾ, ಕ್ಲಾಸಿನಲ್ಲಿ ೬೦ಕ್ಕೂ ಹೆಚ್ಚು ಮಕ್ಕಳಿದ್ದರೂ, ನಮ್ಮ ಹೆಸರು ಅವರಿಗೂ ನೆನಪಿರಬೇಕು ಅನ್ನುವ ಹಂಬಲ ನಮಗೆ; ಗುರುಗಳು ಅಂದರೆ ದಾರಿ ತೋರಿಸುವವರು ಅನ್ನುವ ಗೌರವವಿತ್ತೇ ಹೊರತು, ಅವರ ಸಂಬಳಕ್ಕಾಗಿ ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ ಅನ್ನುವ ಲವಲೇಶ ಮಾತ್ರ ಯೋಚನೆಯೂ ಇಲ್ಲದ ಕಾಲ. ಬಹುಶಃ ನಮ್ಮೀ ಭಕ್ತಿಯೇ ನಮ್ಮ ಗುರುಗಳ ಕಣ್ಣಿನ ನಮ್ಮೆಡೆಗಿನ ಅಕ್ಕರೆಯಾಗುತ್ತಿತ್ತೋ ಏನೋ. ಒಟ್ಟಿನಲ್ಲಿ ನಮ್ಮ ಶಾಲಾ ದಿನಗಳನ್ನು ತಿರುವಿ ಹಾಕಿ ನೋಡಿದಷ್ಟೂ ಸಂತಸ ತರುತ್ತದೆ.
೭ನೇ ತರಗತಿ ಓದುವಾಗ ನಮಗೆ ಸಮಾಜ ಶಾಸ್ತ್ರ ಪಾಠ ಮಾಡುತ್ತಿದ್ದ ಆಕೆಯನ್ನು ಎಲ್ಲರೂ ತುಂಬಾ ಗೌರವಿಸುತ್ತಿದ್ದೆವು. ಹಲವು ವಿಚಾರಗಳನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವಾಗ - ಇನ್ನೆಲ್ಲೋ ಪ್ರಗತಿಪರ ಮಹಿಳೆಯರ ಬಗ್ಗೆ ತಿಳಿಹೇಳುವಾಗ, ಇತಿಹಾಸದ ಪಾಠಗಳಲ್ಲಿ ಬರುವ ರಾಣಿಯರ ಬಗ್ಗೆ ವಿಶ್ಲೇಷಿಸಿ ನಮ್ಮಲ್ಲಿ ಕುತೂಹಲ ಮೂಡಿಸಿ, ಹಲವಾರು ಬಾರಿ ಅವರೊಡನೆ ಸಂವಹಿಸುವಾಗ ಗುರುಗಳೆಂದರೆ ಹೀಗಿರಬೇಕು ಎನಿಸುತ್ತಿತ್ತು. ಒಳ್ಳೆಯ ಹೆಸರಿಗಾಗಿ ಮತ್ತು ಸಕಾರಾತ್ಮಕ ಪರಿಣಾಮ ಬೀರುವ ಸಲುವಾಗಿಯೇ ಶಿಕ್ಷಕ ವೃತ್ತಿ ಮಾಡುವ ಕೆಲವರು ಗುರುಗಳಲ್ಲಿ ಅವರ ಗುರುತು ನೆನಪಲ್ಲಿ ಪಡಿಮೂಡಿತ್ತು. ಒಟ್ಟಿನಲ್ಲಿ ಪ್ರಭಾವ ಬೀರಿದ ಹೆಣ್ಣುಮಕ್ಕಳಲ್ಲಿ ಆಕೆಯ ಭಾಷೆ, ಧೈರ್ಯ, ಎಲ್ಲರನ್ನೂ ಮಾತನಾಡಿಸುವ ಸ್ಥೈರ್ಯ, ಎತ್ತರ ಕಡಿಮೆಯಿದ್ದರೂ, ತೆಳ್ಳಗಿದ್ದರೂ, ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ ಉತ್ತರಿಸುವ ರೀತಿ, ನಾವು ಮಕ್ಕಳು ಪಾಠದ ವಿಷಯವಾಗಿ - ವಿಚಾರಪೂರಿತ ಪ್ರಶ್ನೆಗಳನ್ನು ಕೇಳಿದಾಗಲೂ ವಿಚಲಿತರಾಗದೆ ಸಮಾಧಾನ ಹೇಳುತ್ತಿದ್ದುದು - ಇವೆಲ್ಲವೂ ಆಗಿನ ಕಾಲಕ್ಕೆ ನನಗೊಂದು ಮಾದರಿಯಾಗಿತ್ತು.
ಪ್ರೌಢ ಶಾಲೆಗೆಂದು ಮನೆಯ ಹತ್ತಿರವಿದ್ದ ಇನ್ನೊಂದು ಶಾಲೆಗೆ ದಾಖಲಾದೆ. ಓದುತ್ತಿದ್ದುದು ಚಿಕ್ಕ ಊರಾದ್ದರಿಂದ ನನ್ನ ಹಿಂದಿನ ಶಾಲೆಯ ಅಧ್ಯಾಪಕರುಗಳು ಆಗಾಗ ಎದುರಾಗುತ್ತಿದ್ದರು. ಎಂದೂ ನನಗೆ ಸಮಾಜ ಶಾಸ್ತ್ರ ಹೇಳಿಕೊಡುತ್ತಿದ್ದ ನನ್ನ ನೆಚ್ಚಿನ ಟೀಚರ್ ಸಿಕ್ಕಿರಲಿಲ್ಲ. ಸಂದರ್ಭ ನೆನಪಿಲ್ಲವಾದರೂ ಬಹುಶಃ ಬೇರ್ಯಾರೊ ಟೀಚರ್ ಸಿಕ್ಕಿ, ನನಗವರ ನೆನಪಾಗಿಯೋ ಏನೋ ೨ ವರ್ಷಗಳಾದ ನಂತರ ಒಮ್ಮೆ ಆಕೆಯ ಮನೆಯ ಮುಂದೆ ಹೋಗುವಾಗ ಮಾತಾಡಿಸಿಯೇ ಬಿಡುವ ಅನ್ನಿಸಿತು. ಆಕೆ ಮನೆಯಲ್ಲಿರುತ್ತಾರೋ ಇಲ್ಲವೋ- ರಜೆಯಾದ್ದರಿಂದ ಬಹುಶಃ ಇರಬಹುದು, ಮಾತನಾಡಿಸುತ್ತಾರೋ ಇಲ್ಲವೋ, ಆಕೆಗೆ ನನ್ನ ನೆನಪು ಇರುತ್ತದೋ ಇಲ್ಲವೋ, ದೊಡ್ಡ ತರಗತಿ, ಒಂದೇ ವರ್ಷ ಅವರು ನನಗೆ ಹೇಳಿ ಕೊಟ್ಟಿದ್ದು- ಎಂಬೆಲ್ಲ ಕಾರಣಾತಿ ಕಾರಣಗಳನ್ನೆಲ್ಲ ಬದಿಗಿಟ್ಟು, ಆಕೆಯ ಮನೆಯ ಗೇಟ್ ಒಳಹೋದೆ !
ಮಧ್ಯ ವಯಸ್ಸಿನ ಹೆಣ್ಣು ಮಗಳೊಬ್ಬಳು ಬಟ್ಟೆ ಒಗೆಯುತ್ತಲಿದ್ದದ್ದು ನೋಡಿ, "ಟೀಚರ್ ಇದ್ದಾರಾ? ಮಾತನಾಡಿಸಬೇಕಿತ್ತು" ಅಂದೆ. "ಸ್ವಲ್ಪ ಇರು" ಎಂದ ಅವರು ನನ್ನ ಟೀಚರ್ ಹೆಸರನ್ನು ಕೂಗುತ್ತಾ, "ನಿನ್ನನ್ನು ನೋಡಲು ನಿನ್ನ ವಿದ್ಯಾರ್ಥಿ ಬಂದ ಹಾಗಿದೆ" ಎಂದು ಒಳಹೋದರು. ಮನೆಯೊಳಗೆ ಹೆಚ್ಚು ಕತ್ತಲೆ ಇತ್ತು. ಬಹುಶಃ ಕಿಟಕಿಯಿಂದ ಬರುವ ಬೆಳಕು ಮನೆಯಲ್ಲೆಲ್ಲಾ ಚೆಲ್ಲುವಷ್ಟು ದೊಡ್ಡದು ಇರಲಿಕ್ಕಿಲ್ಲ. ಒಳಗೆ ಹೇಗೆ ಕಾಣುತ್ತದೆಂದು ಬಿಸಿಲಲ್ಲಿದ್ದ ನನಗೆ ಗೋಚರಿಸಲಿಲ್ಲ.
ಹೊರನಿಂತು ಕಾದಿದ್ದು ಅರ್ಧ ನಿಮಿಷ. ಅಷ್ಟರಲ್ಲಿ ನನ್ನ ಟೀಚರ್ ಈಗ ಹೇಗಿರಬಹುದು? ಪಾಠ ಹೇಳಿಕೊಡುವಾಗಲೆಲ್ಲ ಆಕೆ ಸದಾ ಶುಭ್ರ ಸೀರೆಯನ್ನು ಒಪ್ಪವಾಗಿ ಉಟ್ಟಿರುತ್ತಿದ್ದರು. ನಡೆಯುವಾಗಲೂ ಅಷ್ಟೇ. ಪುಸ್ತಕವನ್ನು ಎದೆಗೊತ್ತಿಕೊಂಡು, ಯಾವ ಮಕ್ಕಳು ವಿಶ್ ಮಾಡಿದರೂ, ನಗೆಯೊಡನೆ ಪ್ರತ್ಯುತ್ತರ. ಸ್ಕೂಲ್ ನಲ್ಲಿಯೂ ಇದ್ದ ಹಾಗೆ ಕೇಳಿರಲಿಲ್ಲ. ಬೇರೇನಾದರೂ ಕೆಲಸಕ್ಕೆ ಸೇರಿರಬಹುದೋ ಏನೋ, ಏನು ಮಾತನಾಡುವುದೆಂಬ ಅರಿವೇ ಇಲ್ಲದೇ ಸಮಯ ನೋಡದೇ ಬಂದಿದ್ದೇನೆ. ಏನೆನ್ನುತ್ತಾರೋ ಮೊದಲೇ ಖಡಕ್ ಮಹಿಳೆ ಆಕೆ ಅನ್ನುವ ಹಿಂಜರಿಕೆ ಮನಸ್ಸಿನಲ್ಲಿ ತಳಮಳಿಸುತ್ತಿತ್ತು. ಅರ್ಧ ನಿಮಿಷ ಅರ್ಧ ಘಳಿಗೆಯಂತೆ ಭಾಸವಾಗಿತ್ತು.
ಅಗೋ ಅಲ್ಲಿ ನನ್ನ ಟೀಚರ್ ಬಂದರು! ನನ್ನ ಕಾಯುವಿಕೆ ಕೊನೆಗೊಂಡಿತ್ತು- ಅವರನ್ನು ಆತುರದಿಂದ ಮಾತನಾಡಿಸಲು ಪಾಕೆಟ್ ಮನಿ ಎಲ್ಲಾ ಇಲ್ಲದ ಜಾಯಮಾನದಲ್ಲಿ ದೊಡ್ಡ ಮಂದಹಾಸ ಮುಖದ ಮೇಲೆ- ಹಾಗು ಅಷ್ಟೇ ಖಾಲಿ ಕೈಯಲ್ಲಿ ನಿಂತಿದ್ದೆ. ಕಂಕುಳಲ್ಲಿ ಪುಟ್ಟ ಮಗುವನ್ನು ಸ್ವಲ್ಪ ಕಷ್ಟ ಪಟ್ಟಂತೆ ಎತ್ತಿಕೊಂಡು, ಆ ಮಗು ಈಗಷ್ಟೇ ಊಟ ಮಾಡಿರಬಹುದು, ಕೈಯೊರೆಸಿಕೊಳ್ಳುತ್ತ, ಆ ಮಗುವಿನ ಬಾಯೊರೆಸುತ್ತ, ನಡೆದು ಬಂದರು. ನೆನಪಿನ ಹಾಳೆಯಲ್ಲಿದ್ದ ಸೂಕ್ಷ್ಮ ಕಾಯವಾದರೂ ದೊಡ್ಡ ಗತ್ತಿನ ಆಕೆಗೂ, ನನ್ನ ಮುಂದೆ ನಿಂತಿದ್ದ ಈ ಮನೆಗೆಲಸ ಮಾಡಿಕೊಂಡು ಸೋತು ಹೋದಂತೆ ಕಂಡ ತಾಯಿಗೂ ಅಜ-ಗಜಾಂತರ ವ್ಯತ್ಯಾಸವಿದ್ದಂತೆ ಅನಿಸಿತು. ಮೊದಲ ಬಾರಿಗೆ ಜೀವನದಲ್ಲಿ ಭ್ರಮನಿರಸನದ ಅನುಭವ.
ಅಲ್ಲಿ ಏನು ಮಾತನಾಡಿದೆ, ಆಕೆ ಗುರುತು ಹಿಡಿದರಾ? ಅಲ್ಲಿಂದ ಮುಂದೆ ಧನ್ಯವಾದ ಹೇಳಿ ಬೇಗ ಅಲ್ಲಿಂದ ಹೊರಬಂದಿದ್ದೊಂದು ನೆನಪು. ಮಿಕ್ಕುದೆಲ್ಲಾ ಮಬ್ಬು ಗೊಂದಲ !
ನಾನು ಎಷ್ಟು ಸುಲಭವಾಗಿ ಪೂರ್ವಾಗ್ರಹ ಪೀಡಿತಳಾಗಿದ್ದೆ ! ಎಳೆಯ ಮನಸ್ಸಿಗೆ ಆಕೆ ಸೂಪರ್ ವುಮನ್ ಹಾಗೆ ಕಂಡಿದ್ದಾಕೆ ಇದ್ದಕ್ಕಿದ್ದ ಹಾಗೆ ಸಾಧಾರಣ ಗೃಹಿಣಿಯಾಗಿ ನಾನಾಕೆಯನ್ನು ಕಂಡಾಗ ಮನಸ್ಸು ಒಪ್ಪಲೇ ಇಲ್ಲ ಏಕೆ? ಪ್ರತಿಯೊಬ್ಬರಿಗೂ ಖಾಸಗಿ ಬದುಕೂ ಸಾಮಾಜಿಕ ಜನಭರಿತ ಜೀವನದ ನಡುವಿನ ಅಂತರ ಇರುತ್ತದೆಂದು ಬಹುಶಃ ನನಗೆ ಆಗಲೇ ಗ್ರಹಿಕೆಗೆ ಬಂದಿದ್ದಿರಬೇಕು.
ನಮ್ಮ ಭೂತಕಾಲವು ನಮ್ಮ ಕಲ್ಪನೆಯ ಮೇಲೆ ಬೀರುವ ಪ್ರಭಾವ ಎಂಥದ್ದಲ್ಲವೇ ಅನಿಸುತ್ತದೆ! ಹಿಂದಿನ ಆಗುಹೋಗುಗಳ ಆಧಾರದ ಮೇಲೆ ಅದೆಷ್ಟು ಸುಲಭವಾಗಿ ಇದಮಿತ್ಥಮ್ ಎಂದು ಮನದಲ್ಲಿ ಗೆರೆ ಎಳೆದುಕೊಂಡು ಅಲ್ಲಿಂದ ಮುಂದೆ ಸಾಗಲೂ ಒಲ್ಲದ ಮನಸ್ಥಿತಿಯನ್ನು ಅದೆಷ್ಟು ಸಾಧಾರಣವಾಗಿ ರೂಪಿಸಿಕೊಂಡಿದ್ದೇನಲ್ಲ ಎನ್ನಿಸಿಬಿಟ್ಟಿತ್ತು. ಇದೆಲ್ಲವೂ ದಿನಗಳುರುಳುತ್ತ ಗೋಚರವಾಗಿದ್ದರೂ, ಆ ದಿನದ ನನ್ನ ಟೀಚರ್ ಭೇಟಿ ನನ್ನ ಮಂದಮತಿಗೆ ಸಾಕ್ಷಿಯಾಗಿ ಇಂದು ನಿಂತು ನಗುತ್ತಿದೆ!
No comments:
Post a Comment