ಬಯಲುಸೀಮೆಯ ಪುಟ್ಟದೊಂದು ಹಳ್ಳಿ ಕಿರಗೂರಿನ ದೆವ್ವದಂಥಾ ಗಾಳಿಯೊಂದಿಗೆ ಶುರುವಾಗುವ
ಚಿತ್ರಣ. ಭಯಂಕರ ಗಾಳಿಗೆ ಬುಡ ಕಿತ್ತು ಬೀಳುವ ದೊಡ್ಡ ಮರವಿದೆ- ಗಾಳಿಗಿಂತಲೂ ಜೋರಾದ ಗಯ್ಯಾಳಿಗಳ
ಬೈಗುಳಗಳಿವೆ-ಥಳಿಸುವ ಹೆಂಡಂದಿರಿದ್ದಾರೆ - ಸರ್ಕಾರೀ ವಾಹನ ಬಂತೆಂದ ಕೂಡಲೇ ಅದ್ಯಾವ ಜನವೆಂದು ಕೂಡ
ನೋಡದೆ ಪೇರಿ ಕೀಳುವ ಜನರಿದ್ದಾರೆ- ಹೆಣವೊಂದಕ್ಕೆ 3 ದಿನ ಇಲಾಜೆಂದು ದುಡ್ಡು ವಸೂಲಿ ಮಾಡುವ
ವೈದ್ಯನಿದ್ದಾನೆ-ದೂರದೂರುಗಳಿಂದಲೂ ಹುಳುಕು ತೆಗೆಸಿಕೊಳ್ಳಲು ಬರುವ ಜನರಿದ್ದಾರೆ-ನಗೆಬುಗ್ಗೆ
ಹರಿಸುವ ರೋಚಕ ಪಂಚಾಯಿತಿಯಿದೆ. ಇದರಲ್ಲಿ ಬಯಲುಸೀಮೆಯ ಜನರ ಮುಗ್ಧತೆ ಇದೆ- ಆ ಮುಗ್ಧತೆಯನ್ನು
ದುರುಪಯೋಗಿಸಿಕೊಳ್ಳುವವರಿದ್ದಾರೆ- ಮಕ್ಕಳಿಗಾಗಿ ಕಾಯುವ, ಆದರೆ ಹೆಂಡಿರೆಂದರೆ ದುಡಿಯುವ
ಎತ್ತುಗಳಂತೆ ಕಾಣುವ, ಸಂಜೆಯಾದರೆ ಸಾರಾಯಿ ಮೆದ್ದು ಓಲಾಡುವ ಗಂಡದಿರಿದ್ದಾರೆ- ಸಬ್ಸೀಡಿ ಆಸೆ
ತೋರಿಸಿ ತಾನು ಹಚ್ಚಗಾಗುವ ಗ್ರಾಮಸೇವಕನಿದ್ದಾನೆ-ನಂಬಿಕೆಗೆ ಕಲ್ಲು ಹಾಕಿ ಉಪಾಯವಾಗಿ
ಸ್ಟೇಷನ್ನಿಗೆ ಕರೆಸಿ ಥಳಿಸುವಂತೆ ಮಾಡುವ ಪೇದೆಯಿದ್ದಾನೆ-ಮುಗ್ಧ ಜನರ ಮೂಢ ನಂಬಿಕೆಗಳನ್ನು
ಆಧರಿಸಿರುವ ಮಂತ್ರವಾದಿಯಿದ್ದಾನೆ-ಎಲ್ಲರೂ ಸೇರಿ ಬಿತ್ತುವ ಜಾತಿ ಜಗಳಗಳಿವೆ.
ತೇಜಸ್ವಿಯವರ ಕಥೆಯೊಂದು ತೆರೆಯ ಮೇಲೆ ಬರ್ತಿದೆ ಅಂತ ತಿಳಿದ ಕೂಡಲೇ ಬಿಡುಗಡೆಗೆ ಕಾಯಲು ಮೊದಲ್ಗೊಂಡವರಲ್ಲಿ ನಾನೂ ಒಬ್ಬಳು. Trailor ಬರುವ ಮುಂಚೆಯೇ ಕಥೆಯ ಪ್ರಸ್ತುತತೆಯ ಬಗ್ಗೆ, ಕಥೆಯನ್ನು ತೆರೆಯ ಮೇಲೆ ಬಿಡಿಸುವಲ್ಲಿನ ಸಾಧ್ಯಾಸಾಧ್ಯತೆಗಳ ಬಗ್ಗೆ ತುಂಬಾ ಸಂಶಯ ಪಟ್ಟಿದ್ದೆ. Trailorನಲ್ಲಿನ ಸಾಮ್ಸನ್ ಹಿಂದಿನ ಪೀಚಲು ಹಲಸಿನ ಮರ ನೋಡಿ ಇಷ್ಟೇನಾ ಅಂತ ನಿಡುಸುಯ್ದಿದ್ದೆ. ಕಥೆಯ ಮುಖ್ಯ ಭೂಮಿಕೆಯಲ್ಲಿರುವುದೇ ಒಂದು ಹೆಬ್ಬಲಸಿನ ಮರ. ಅದೂ, ತಿರುಪಿಕೊಂಡಿರುವ ಕಾಂಡದ ಕಡಿಯಲಾಗದ ಹೆಮ್ಮರ. ಕಾಲ್ಪನಿಕ ಸನ್ನಿವೇಶವಾದರೂ ತೆರೆಯ ಮೇಲೆ ತರುವುದು ಸಾಧ್ಯವಿರಲಿಲ್ಲವಾ ಅಂತ ಅನ್ನಿಸಿತ್ತು. ಏರಿಗಳೆಲ್ಲಾ ಬರಡಾಗಿ ಆಮೇಲೆ ಎಚ್ಚೆತ್ತು ನೆಟ್ಟುಕೊಂಡಿರುವ ನೀಲಗಿರಿ ಮರಗಳ ಮಧ್ಯದ ಬಯಲುಸೀಮೆಯ ಹೊಲಗಳಲ್ಲಿ ಅಷ್ಟು ಭಾರೀ ಮರ ಬಂದೀತಾದರೂ ಎಲ್ಲಿಂದ, ಅಂದುಕೊಂಡು ಸುಮ್ಮನಾಗಿದ್ದೆ.
ನಿರ್ದೇಶಕಿ ಸುಮನಾ ಕಿತ್ತೂರು ಕಥೆಯನ್ನು ತೆರೆಗೆ ತರುವಲ್ಲಿ ಬಹುತೇಕ
ಗೆದ್ದಿದ್ದಾರೆ. ಹಲವಾರು ಹಳ್ಳಿಗಳಲ್ಲಿ ಚಿತ್ರೀಕರಿಸಿ ತೇಜಸ್ವಿಯವರು ಕಟ್ಟಿಕೊಟ್ಟ ಕಲ್ಪನೆಯ ಕಿರಗೂರನ್ನು
ಚಿತ್ರವಾಗಿ ತೋರಿಸಿದ್ದಾರೆ. ಅಗ್ನಿಶ್ರೀಧರ್ ಚಿತ್ರಕಥೆ wonderful. ಪ್ರತಿಯೊಬ್ಬ ಪಾತ್ರಧಾರಿಯೂ
ಪಾತ್ರದೊಳಕ್ಕೆ ತಮ್ಮನ್ನು ಎರಕ ಹೊಯ್ದುಕೊಂಡಷ್ಟು ದಿವಿನಾಗಿ ಅಭಿನಯಿಸಿದ್ದಾರೆ. ಚಿಕ್ಕ
ಪಾತ್ರವಾದರೂ ಪ್ರಕಾಶ್ ಬೆಳವಾಡಿಯವರ ಪಾತ್ರ ಹಾಗು ಸನ್ನಿವೇಶ ನೆನಪಿನಲ್ಲುಳಿಯುತ್ತದೆ. ಶ್ವೇತರವರು
ಅಭಿನಯ ಹಾಗು ಆ language dialect ನಿಂದ ದಾನಮ್ಮನಾಗಿ, ಮಾತಿಲ್ಲದಿದ್ದರೂ ಕಾಡುವ ಪಾತ್ರವಾಗಿ ಸೋನು, ಮರ
ಕುಯ್ಯುವುದಕ್ಕಿಂತ ಹೆಚ್ಚಿನ ಬೊಗಳೆ ಕುಯ್ಯುವ ಸ್ಯಾಮ್ಸನ್ ಆಗಿ ಯೋಗಿ ಕಾಡುವ ಛಾಪೊತ್ತಿದ್ದಾರೆ. ಕಾದಿರುವವರ
ಕುತೂಹಲಕ್ಕೆ ತಣ್ಣೀರೆರೆಚುವಂತೆ multiplexಗಳಲ್ಲಿ ಒಂದು ಮತ್ತೊಂದು show. ದೃಶ್ಯವೊಂದರ
ಮಧ್ಯದಲ್ಲಿ ನೋಡುತ್ತಿರುವವರೆಲ್ಲಾ ಛೆ ಕಟ್ ಮಾಡಿದ್ದಾರೆ ಅಂತ ನಿಡುಸುಯ್ಯುವ ಮಟ್ಟಿಗೆ ಹಳ್ಳಿಗಾಡಿನ ಬೈಗುಳಗಳು mute. ಕಥೆಯನ್ನೋದಿ ಮನದಲ್ಲಿ ಕಟ್ಟಿಕೊಂಡ ಚಿತ್ರಕ್ಕಿಂತ ಚಿಕ್ಕ ಹೆಬ್ಬಲಸಿನ ಮರ. ಮೂಲ
ಕಥೆಯಲ್ಲಿಲ್ಲದಿರುವ ಎರಡು ಪಾತ್ರ ಹಾಗು ಕೆಲವು ಸನ್ನಿವೇಶಗಳ ಜೋಡಣೆ. ಮೊದಲರ್ಧಕ್ಕಿಂತ ಉಳಿದರ್ಧದ
ಉತ್ತಮ ಓಘ- ಇಷ್ಟೆಲ್ಲಾ ನ್ಯೂನತೆಗಳಿದ್ದರೂ ನೋಡುಗರನ್ನು ನಕ್ಕು ಸಾಕಾಗಿಸುವ ಚಿತ್ರ.
ಗಯ್ಯಾಳಿಗಳ ಬಿಡುಗಡೆಗೂ ಮುನ್ನ ಮತ್ತೊಮ್ಮೆ ಪೂರ್ಣಚಂದ್ರ ತೇಜಸ್ವಿಯವರ ಕಥೆ ಓದಿಕೊಂಡು ತಯಾರಾಗಿದ್ದು ಸಾರ್ಥಕವಾಯ್ತು ಬಿಡಿ J
ಗಯ್ಯಾಳಿಗಳ ಬಿಡುಗಡೆಗೂ ಮುನ್ನ ಮತ್ತೊಮ್ಮೆ ಪೂರ್ಣಚಂದ್ರ ತೇಜಸ್ವಿಯವರ ಕಥೆ ಓದಿಕೊಂಡು ತಯಾರಾಗಿದ್ದು ಸಾರ್ಥಕವಾಯ್ತು ಬಿಡಿ J
No comments:
Post a Comment