ಈ ಭಾನುವಾರ ಮನೆಯಲ್ಲೇ ಇದ್ದು ಬೇಸರವಾಗಿತ್ತು. ಟಿವಿಯಲ್ಲಿ ಕೂಡ ಹೇಳಿಕೊಳ್ಳುವ ಸಿನೆಮಾಗಳ್ಯಾವುದೂ ಪ್ರಸಾರವಾಗುತ್ತಿರಲಿಲ್ಲ. ಹಾಗಾಗಿ ಇಳಿ ಬಿಸಿಲಲ್ಲಿ ಹೊರಗೆ ಬಂದು ಗೋಪಾಲನ್ ಆರ್ಕೆಡ್ ಹೊಕ್ಕೆವು. ಅಲ್ಲಿ ಕಂಡಿದ್ದು ಮುಂಜಾನೆ- ಚಿತ್ರದ ಪೋಸ್ಟರ್. ಗಣೇಶ್ ಸಿನಿಮಾ, ನೋಡೋಣ್ವಾ ಅಂದುಕೊಂಡು ಹೊರಟೇ ಬಿಟ್ವಿ. ಥಿಯೇಟರ್ ಬಾಗಿಲಿಗೆ ಬಂದ ಮೇಲಷ್ಟೇ ಗೊತ್ತಾಗಿದ್ದು ಕಲಾಸಾಮ್ರಾಟ್ ಎಸ್.ನಾರಾಯಣ್ ಪಿಚ್ಚರ್ ಅಂತ. ನಮ್ಮ ನಿರೀಕ್ಷೆಯೇನೂ ಹುಸಿಯಾಗಲಿಲ್ಲ ಬಿಡಿ. ಅನಾಮತ್ತು ೩ ಹಾಡುಗಳು ಗ್ರಾಫಿಕ್ ಮಯ!! ನೆನಪಿನಲ್ಲಿ ಉಳಿಯುವಂಥಾ ಒಂದೂ ಹಾಡಿಲ್ಲ ಅದರಲ್ಲಿ. ಮುಂಜಾನೆ- ಅನ್ನುವ ಹೆಸರನ್ನು ಯಾಕೆ ಇಟ್ಟರು ಅಂತ ಕೂಡ ಖಂಡಿತಾ ತಲೆ ಕೆಡಿಸಿಕೊಬೇಡಿ. ಎಸ್.ನಾರಾಯಣ್ ಅಂದ ಕೂಡಲೇ ಎರೆಡೆರಡು ಅರ್ಥದ ಸಂಭಾಷಣೆ ಇಲ್ಲದಿದ್ದರೆ ಆದೀತೆ?;ಅವೂ ಇವೆ. ಸದಭಿರುಚಿಯ ಹಾಸ್ಯ ಕೂಡ ಇಲ್ಲ. ಆದ್ರೆ SRSಬಸ್ಸಿನ(?) ಅಭಿನಯ ಚೆನ್ನಾಗಿರೋದ್ರಿಂದ ಹಾಕಿದ ದುಡ್ಡಿಗೆ ಮೋಸ ಇಲ್ಲ. ಎಲ್ಲ ಚಿತ್ರೀಕರಣವೂ ಇಲ್ಲೇ ಕರ್ನಾಟಕದಲ್ಲೇ ಆಗಿರೋದ್ರಿಂದ ಅಷ್ಟು ಖರ್ಚೂ ಆಗಿರಲಾರದು.
ಕಥೆ ಹೀಗಿದೆ--
ಎಲ್ಲೆಂದರಲ್ಲಿ ಅನ್ನಿಸಿದ್ದನ್ನು ಬರೆಯುವ ಹುಡುಗಿ. ಗೋಡೆಯಾದರೂ ಸರಿ, ಬಟ್ಟೆಯಾದರೂ ಸರಿ.
ಅವಳು SRS ಬಸ್ ಹಿಂದೆ ಬರೆದ ಪುಟ್ಟ ಕವಿತೆ ನಾಯಕನ ಕಣ್ಣಿಗೆ ಬಿದ್ದು ಆ ಬರಹಗಳಲ್ಲೇ ಪ್ರೀತಿ ಅಂಕುರವಾಗುತ್ತೆ. ಹೆಸರು, ಫೋನ್ ನಂಬರ್ ಸಿಗುವ ಹೊತ್ತಿಗೆ ಮಳೆ, ಹಾಗು ಬದಲಾಯಿಸಲ್ಪಡುವ ಬಸ್ಸು ಪ್ರೇಮಿಗಳನ್ನ ಅಗಲಿಸುತ್ತೆ. ಅಷ್ಟರಲ್ಲೇ ನಾಯಕಿಗೆ ಗಣೇಶ್ ಜೊತೆ ತಂದೆ ತಾಯಿಯ ಒತ್ತಾಯಕ್ಕೆ ಮದುವೆಯಾಗಿಹೋಗುತ್ತದೆ. ತಾನು ಪ್ರೀತಿಸಿದವರನ್ನೇ ಮದುವೆಯಾದದ್ದು ಅಂತ ತಿಳಿಯದ ಇಬ್ಬರೂ ತಮ್ಮ ಪ್ರೇಮಿಯ ಸಂದೇಶಕ್ಕಾಗಿ ಕಾಯುತ್ತಾರೆ. (ಕಡೆಗೆ ಒಂದಾಗುತ್ತಾರೆ ಅಂತ ಬರೆಯಲೇ ಬೇಕಿಲ್ಲ ಅಲ್ಲವಾ?).
ಗಣೇಶನ ತಾಯಿಯಾಗಿ ಮಾಳವಿಕಾ ತಮ್ಮ ಪಾತ್ರವನ್ನ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಕ್ಯಾಮೆರಾ ವರ್ಕ್ ಒಂದೆರಡು ಅತೀ ಎನಿಸುವ ದೃಶ್ಯಗಳನ್ನು ಬಿಟ್ಟರೆ ಚೆನ್ನಾಗಿದೆ. ಆದರೆ ಕಥೆ ಪುಟ್ಟದಿದ್ದು, ತೀರಾ ಎಳೆದಿರೋದರಿಂದ ಪ್ರೇಕ್ಷಕನ ಸಂಕಟ ಹೆಚ್ಚೇ ಆಗುತ್ತದೆ. ಆದರೂ, ನೋಡಲೇ ಬಾರದ ಸಿನೆಮಾ ಏನಲ್ಲ ಇದು. ಹಾಗಾಗಿಯಾದ್ರೂ ಈ "ಪರವಾಗಿಲ್ಲ"ದ ಕನ್ನಡ ಚಿತ್ರವನ್ನೊಮ್ಮೆ ನೋಡಿ ಬಿಡಿ :)
No comments:
Post a Comment