ಒಮ್ಮೊಮ್ಮೆ ಹೀಗಾಗಿಬಿಡುತ್ತದೆ. ಎದ್ದಾಗಿನಿಂದ ದುಸುಮುಸು, ಅರ್ಥವಾಗದ ಭಾವವ್ಯಾವುದೋ ತರ್ಕಕ್ಕೆ ನಿಲುಕುತ್ತಿಲ್ಲವೆಂಬ ಅಸಮಾಧಾನ. ಕಂಡಲ್ಲಿ ಹರಿಹಾಯಬಹುದೇನೋ ಅನ್ನುವ ದುಗುಡ. ತೋರಲಾರದ ಕುದಿ. ಮನದೊಳಗಣ ಅನಾರೋಗ್ಯದ ಕೀವು ಹೇಗಾದರೂ ಹೊರ ಹಿಚುಕಿ ನೆಮ್ಮದಿಯಾಗಬೇಕೆಂದು ಕಾಯುವ ಸಮಯ. ಆಗ ಸಿಗಬೇಕು ನೋಡಿ, ಯಾರಾದರೂ ನಮ್ಮ ಸಿಟ್ಟಿನ ನೈವೇದ್ಯಕ್ಕೆ! ಒಳಗೆ ಸಿಟ್ಟು ಬೆಲೂನಿನಂತೆ ತುಂಬಿದ್ದಾಗ ಅದು ಹೊರಬರಲು ಎಂಥಹಾ ನಿಮಿತ್ತ ಮಾತ್ರವಾದರೂ ಸಾಕು. ಕೇಳಿದ ಬೆಲೆಗೆ ಕೊಡದ ತರಕಾರಿ ಮಾರುವವನೋ, ಕೊಂಚ ಅಜಾಗರೂಕತೆಯಿಂದ ಬಂದ ವಾಹನ ಚಾಲಕನೋ, ಉಪ್ಪು ಹೆಚ್ಚಾದ ಅಡುಗೆಯೋ, ಕೊನೆಗೊಂದು ಅಂಕೆ ತಪ್ಪಿ ಬಂದ ಮೊಬೈಲ್ ಕರೆಯಾದರೂ ಸರಿಯೇ... ಲಾವಾರಸದಂತೆ ಹರಿಯುತ್ತದೆ ನಮ್ಮ ಕೋಪದ ನುಡಿಗಳು. ರಿಸರ್ಚ್ ಪ್ರಕಾರ, ಇಂತಹ 'ಸಿಕ್ ' ಭಾವ ಸೋಮವಾರದಂದೇ ಹೆಚ್ಚಂತೆ. ಅದೇನಾದರೂ ಇರಲಿ, ಕೆಲವೊಮ್ಮೆ ಇಂತಹಾ ಲಾವ ಕುದಿ ಹತ್ತಿದಾಗ ಅವಕಾಶವಿದ್ದಲ್ಲಿ ಹೊರಚೆಲ್ಲಿಬಿಡೋದೇ ಉತ್ತಮ ಅಂತ ಮನಸ್ಶಾಸ್ತ್ರಜ್ಞ್ಯರ ಅಂಬೋಣ.

ಸಿಟ್ಟು ತಾನು ಸಲ್ಲುವಲ್ಲಿ ತೋರಿಸಿದರೆ, ಸಿಟ್ಟೂ ಸಹ ಪ್ರಯೋಜನಕಾರಿ ಆಗಬಲ್ಲುದೆಂದು ಆಗ ತಿಳಿಯಿತು ನನಗೆ. ಅಂದಿನಿಂದ, ಬೇಗುದಿಯ ಶಮನಕ್ಕೆ ಸಕಾರಣ ಸಿಟ್ಟನ್ನು ಬಳಸುತ್ತಿದ್ದೇನೆ. ನೀವೂ ಬಳಸಿ ನೋಡಿ. ಪರಿಣಾಮ ಪ್ರಯೋಜಕವಾದೀತು. ನಮ್ಮ-ನಮ್ಮವರ ಮೇಲೆಯೇ ಸಿಟ್ಟಾಗುವುದರ ಬದಲಿಗೆ, ಅಪರಿಚಿತರ ಮೇಲೆ ಸಕಾರಣ ಕೋಪ ತೋರಿಸುವುದೇ ಲೇಸು. ಮನೆಯವರು, ಸ್ನೇಹಿತರು, ನಮ್ಮ ಒಮ್ಮಿಲ್ಲೋಮ್ಮಿಗಿನ ಅಕಾರಣ ಸಿಟ್ಟಿಗೆ ನೊಂದುಕೊಳ್ಳುತ್ತಾರೆ. ಸಂಬಂಧ, ಭಾವ ಎರಡಕ್ಕೂ damage. ಅದರ ಬದಲು ಇತರರ ತಪ್ಪಿಗೆ ಸಿಟ್ಟು ತೋರಿಸಿ. ದಾಕ್ಷಿಣ್ಯಕ್ಕೆ ಬಿದ್ದು ನಗೆಗೆರವಾಗುವುದರ ಬದಲಿಗೆ ಸಮಾಜವೂ ಒಂದಿಷ್ಟು ಸುಧಾರಿಸೀತು.